ದಕ್ಷಿಣ ಕನ್ನಡ :ಹೊಸ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಡಿ.9 ಡೆಡ್ ಲೈನ್..!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಮತದಾರರ ನೋಂದಣಿ ಅಭಿಯಾನ ನಡೆಯುತ್ತಿದ್ದು, ಹೆಸರು ಸೇರ್ಪಡೆಗೆ ಡಿ.9 ಕೊನೆಯ ದಿನವಾಗಿದೆ. ಅದರೊಳಗೆ 18 ವರ್ಷ ತುಂಬಿದವರು ಹೆಸರು ಸೇರ್ಪಡೆ ಮಾಡಿಕೊಂಡು ಮತ ಚಲಾಯಿಸುವ ಅರ್ಹತೆಯುಳ್ಳವರಾಗಿ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
18 ವರ್ಷ ತುಂಬಿದ 25,045 ಮತದಾರರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ದಾಖಲೆ ಪ್ರಕಾರ ಜಿಲ್ಲೆಯಲ್ಲಿ 18 ವರ್ಷ ತುಂಬಿದ 45,530 ಯುವ ಜನರಿದ್ದಾರೆ. ಉಳಿದಿರುವ 20,494 ಮಂದಿಯನ್ನು ಮತದಾರರ ಪಟ್ಟಿಗೆ ಸೇರಿಸಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ. ಅದರಲ್ಲಿ
ಯುವ ಮತದಾರರಲ್ಲಿ 3,742 ಮಂದಿಯ ಫಾರ್ಮ್-6 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಶೀಘ್ರದಲ್ಲಿ ಈ ಪ್ರಕ್ರಿಯೆ ಮುಗಿಸಿ ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.
ಚುನಾವಣ ಆಯೋಗ ಪ್ರತೀ ವರ್ಷ ನಾಲ್ಕು ದಿನಾಂಕವನ್ನು ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಿಗದಿಪಡಿಸಿದೆ. ಪ್ರತೀ ವರ್ಷ ಜನವರಿ, ಎಪ್ರಿಲ್, ಜುಲೈ ಮತ್ತು ಅಕ್ಟೋಬರ್ 1ನೇ ತಾರೀಕಿಗೆ 18 ವರ್ಷ ತುಂಬಿದವರನ್ನು ಮತದಾರರ ಪಟ್ಟಿಗೆ ಸೇರಿಸಲು ಅವಕಾಶ ಮಾಡಲಾಗಿದೆ.
ಹೊಸ ಮತದಾರರು ತಮ್ಮ ಮತಗಟ್ಟೆಯ ಬೂತ್ ಮಟ್ಟದ ಅಧಿಕಾರಿಯವರಿಗೆ ಫಾರಂ-6 ಅರ್ಜಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದಲ್ಲದೆ, ಮೊಬೈಲ್ ಆಯಪ್ ಬಳಸಿ VOTER HELPLINE ಮೂಲಕವೂ ಫಾರ್ಮ್-6 ಸಲ್ಲಿಸಬಹುದು. ಅದೂ ಅಲ್ಲದೆ, voters.eci.gov.in ವೆಬ್‌ಸೈಟ್ ಮೂಲಕವೂ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಯೂಕೊ ಬ್ಯಾಂಕಿನಲ್ಲಿ 820 ಕೋಟಿ ರೂ. ಅಕ್ರಮ ವರ್ಗಾವಣೆ: ಮಂಗಳೂರು ಸಹಿತ 13 ಸ್ಥಳಗಳಲ್ಲಿ ಶೋಧ
ಮಂಗಳೂರು: ಯೂಕೊ ಬ್ಯಾಂಕ್ ಖಾತೆಗಳಲ್ಲಿ ಸುಮಾರು 820 ಕೋಟಿ ರೂ.ಗಳ ಐಎಂಪಿಎಸ್ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಮಂಗಳೂರಿನಲ್ಲಿ ಶೋಧ ನಡೆಸಿದೆ.
ಕೋಲ್ಕತಾ ಮತ್ತು ಮಂಗಳೂರು ಸೇರಿದಂತೆ ಸುಮಾರು 13 ಸ್ಥಳಗಳಲ್ಲಿ ಆರೋಪಿಗಳು ಮತ್ತು ಖಾಸಗಿ ವ್ಯಕ್ತಿಗಳು / ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಇತರರ ಆವರಣದಲ್ಲಿ ಏಜೆನ್ಸಿ ಶೋಧ ನಡೆಸಿದೆ ಎಂದು ಸಿಬಿಐ ತಿಳಿಸಿದೆ. ಶೋಧದ ಸಮಯದಲ್ಲಿ, ಸೆಲ್ ಫೋನ್ ಗಳು, ಕಂಪ್ಯೂಟರ್ ವ್ಯವಸ್ಥೆಗಳು, ಇಮೇಲ್ ಆರ್ಕೈವ್ ಗಳು ಮತ್ತು ಡೆಬಿಟ್ / ಕ್ರೆಡಿಟ್ ಕಾರ್ಡ್ ಗಳು ಸೇರಿದಂತೆ ಎಲೆಕ್ಟ್ರಾನಿಕ್ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸುಮಾರು 820 ಕೋಟಿ ರೂ.ಗಳ ಅನುಮಾನಾಸ್ಪದ ತಕ್ಷಣದ ಪಾವತಿ ಸೇವೆ (ಐಎಂಪಿಎಸ್) ವಹಿವಾಟಿನ ಆರೋಪದ ಮೇಲೆ ಯುಕೋ ಬ್ಯಾಂಕ್ ನಲ್ಲಿ ಕೆಲಸ ಮಾಡುವ ಇಬ್ಬರು ಸಹಾಯಕ ಎಂಜಿನಿಯರ್ ಗಳು ಮತ್ತು ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಯುಕೋ ಬ್ಯಾಂಕ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ನವೆಂಬರ್ 10 ಮತ್ತು 13 ರ ನಡುವೆ, ಏಳು ಖಾಸಗಿ ಬ್ಯಾಂಕುಗಳಲ್ಲಿ 14,000 ಖಾತೆದಾರರಿಂದ ಹುಟ್ಟಿಕೊಂಡ ಐಎಂಪಿಎಸ್ ಆಂತರಿಕ ವಹಿವಾಟುಗಳನ್ನು ಐಎಂಪಿಎಸ್ ಚಾನೆಲ್ ಮೂಲಕ ಯುಕೋ ಬ್ಯಾಂಕಿನ 41,000 ಖಾತೆದಾರರಿಗೆ ನಿರ್ದೇಶಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಕೀರ್ಣ ಜಾಲವು 8,53,049 ವಹಿವಾಟುಗಳನ್ನು ಒಳಗೊಂಡಿದೆ ಮತ್ತು ಈ ವಹಿವಾಟುಗಳನ್ನು ಯುಕೋ ಬ್ಯಾಂಕ್ ಖಾತೆದಾರರ ದಾಖಲೆಗಳಲ್ಲಿ ತಪ್ಪಾಗಿ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದರ ಪರಿಣಾಮವಾಗಿ, ಮೂಲ ಬ್ಯಾಂಕುಗಳ ಖಾತೆದಾರರಿಂದ ಸರಿಯಾದ ಡೆಬಿಟ್ ಇಲ್ಲದೆ ಅಂದಾಜು 820 ಕೋಟಿ ರೂ.ಗಳು ಯುಕೋ ಬ್ಯಾಂಕ್ ಖಾತೆಗಳಿಗೆ ಪ್ರವೇಶಿಸಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯೂಕೊ ಬ್ಯಾಂಕ್ ಖಾತೆಗಳಲ್ಲಿ ಸುಮಾರು ರೂ. 820 ಕೋಟಿ ಮೊತ್ತದ ಐಎಂಪಿಎಸ್ ಅಕ್ರಮಗಳು ನಡೆದಿದೆ ಎಂಬ ಆರೋಪವನ್ನು ಆಧರಿಸಿ ಪ್ರಾಥಮಿಕ ಮಾಹಿತಿ ವರದಿಯನ್ನು ದಾಖಲಿಸಿಕೊಂಡಿರುವ ಸಿಬಿಐ, ದೇಶದ 13 ವಿವಿಧ ಸ್ಥಳಗಳೊಂದಿಗೆ ಮಂಗಳೂರಿನಲ್ಲೂ ಶೋಧ ಕಾರ್ಯಾಚರಣೆ ನಡೆಸಿತು.