ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಬಿಜೆಪಿಯ ಪ್ರಮುಖ ನಾಯಕರು ಹಾಗೂ ಮಾಜಿ ಕಾರ್ಪೊರೇಟರ್ಗಳು!
ಬೆಂಗಳೂರು: ಪದ್ಮನಾಭನಗರದ ಹಲವು ಮಾಜಿ ಬಿಜೆಪಿ (BJP) ಕಾರ್ಪೋರೇಟರ್‌ಗಳು ಪಕ್ಷ ತೊರೆದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಕಾಂಗ್ರೆಸ್ (Congress) ಸೇರ್ಪಡೆಗೊಂಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ, ಕಾರ್ಯಾದ್ಯಕ್ಷ ಚಂದ್ರಪ್ಪ, ಮಾಜಿ ಶಾಸಕಿ ಸೌಮ್ಯರೆಡ್ಡಿ ಮತ್ತು ಪರಿಷತ್ ಸದಸ್ಯ ರವಿಯವರ ಸಮ್ಮುಖದಲ್ಲಿ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ 11 ಪ್ರಮುಖ ನಾಯಕರು ಹಾಗೂ ಮಾಜಿ ಕಾರ್ಪೋರೇಟರ್‌ಗಳು ಕಾಂಗ್ರೆಸ್‍ಗೆ ಸೇರ್ಪಡೆಗೊಂಡಿದ್ದಾರೆ.
ಜೆಡಿಎಸ್ ಮುಖಂಡ ಪ್ರಸಾದ್ ಬಾಬು, ಬಿಜೆಪಿಯ ಮಾಜಿ ಪಾಲಿಕೆ ಸದಸ್ಯರಾದ ಎಲ್.ಶ್ರೀನಿವಾಸ್, ಆಂಜನಪ್ಪ, ಶೋಭಾ ಅಂಜನಪ್ಪ, ನಾರಾಯಣ್, ಹೆಚ್.ಸುರೇಶ್, ವೆಂಕಟಸ್ವಾಮಿ ನಾಯ್ಡು, ಸುಪ್ರಿಯ ಶೇಖರ್ ಹಾಗೂ ಕೃಷ್ಣಮೂರ್ತಿ ಅಲ್ಲದೇ ಬೆಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಕಾರ್ಪೋರೇಟರ್‌ಗಳಾದ ಬಾಲಕೃಷ್ಣ ಮತ್ತು ಸುಗುಣ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮುಖಂಡರಾಗಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ನೂತನ ಸದಸ್ಯರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆ.
— DK Shivakumar (@DKShivakumar) September 15, 2023
ಇಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಇಂತಹ ಪವಿತ್ರವಾದ ದಿನದಂದು ಈ ಕಾರ್ಯಕ್ರಮ ನಡೆಯುತ್ತಿದೆ. 2028ರ ವಿಧಾನಸಭಾ ಚುನಾವಣೆಗೆ ಪದ್ಮನಾಭನಗರದಿಂದ… pic.twitter.com/3noOLy7VTm
ಕಾಂಗ್ರೆಸ್ ಸೇರ್ಪಡೆ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಮುಂದೆ ಪದ್ಮನಾಭ ನಗರದಲ್ಲಿ ಕಾಂಗ್ರೆಸ್ ಶಾಸಕ ಆಯ್ಕೆಯಾಗಬೇಕು. ಅಭ್ಯರ್ಥಿ ಯಾರು ಆಗ್ತಾರೋ ಗೊತ್ತಿಲ್ಲ. ಆದರೆ ಕಾಂಗ್ರೆಸ್ ಶಾಸಕರೇ ಆಯ್ಕೆಯಾಗಬೇಕು. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಕಳೆದು ಹೋದ ವಯಸ್ಸು ಮತ್ತೆ ಬರುವುದಿಲ್ಲ. ಪದ್ಮನಾಭ ನಗರದಿಂದ 8 ಕಾರ್ಪೋರೇಟರ್‌ಗಳು ಗೆಲ್ಲಬೇಕು. ಈ ಹಿಂದೆ ಯಶವಂತಪುರ ಕ್ಷೇತ್ರದಿಂದ ಮಾಜಿ ಕಾರ್ಪೋರೇಟರ್‌ಗಳ ಸೇರ್ಪಡೆ ಮಾಡಿಕೊಂಡಿದ್ದೆವು. ಈಗ ಬಿಜೆಪಿ ಪರಿಸ್ಥಿತಿ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಆ ಪಕ್ಷದಲ್ಲಿ ವಿರೋಧ ಪಕ್ಷದ ನಾಯಕ ಯಾರು ಎಂಬುದು ಗೊತ್ತಿಲ್ಲ. ಈಗ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮ್ಮಿಶ್ರ ಸರ್ಕಾರ ಬೀಳಿಸಿದವರ ಜೊತೆ ಕುಮಾರಸ್ವಾಮಿ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಜೆಡಿಎಸ್ ಶಾಸಕರು ಅಸಮಧಾನಗೊಂಡಿದ್ದಾರೆ. ಅವರ ಅನುಕೂಲಕ್ಕೆ ಜೆಡಿಎಸ್ ರಾಜಕೀಯ ನಡೆಯುತ್ತಿದೆ. ಅವರ ಅನುಕೂಲ ಅವರು ನೋಡಿಕೊಂಡರೆ ಅಲ್ಲಿದ್ದು ನೀವೇನೂ ಮಾಡುತ್ತೀರಾ? ನಿಮ್ಮ ನಿರ್ಧಾರ ನೀವು ಮಾಡಿಕೊಳ್ಳಿ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಬಹಿರಂಗ ಆಹ್ವಾನ ಕೊಟ್ಟಿದ್ದಾರೆ.
ಜೆಡಿಎಸ್ (JDS) ಕಾರ್ಯಕರ್ತರೇ ಹೇಳುತ್ತಿದ್ದಾರೆ ನಮ್ಮ ಸರ್ಕಾರ ಕೆಡವಿದವರ ಜೊತೆ ನಮ್ಮವರು ಹೋಗಿದ್ದಾರೆ. ಜೆಡಿಎಸ್ ಪಕ್ಷದ್ದು ಯಾವ ನೀತಿ ಎಂದು ಕಾರ್ಯಕರ್ತರೇ ಪ್ರಶ್ನಿಸುತ್ತಿದ್ದಾರೆ. ಅಶೋಕಣ್ಣ ಯಾರದೋ ಹೆಗಲ ಮೇಲೆ ಕೈ ಹಾಕಿಕೊಂಡು ಪತ್ರಿಕಾಗೋಷ್ಠಿ ಮಾಡುತ್ತಿರುವುದನ್ನು ನೋಡಿದೆ. ಅವರು ಅದನ್ನೇ ಮಾಡಲಿ ನಮ್ಮ ಜೊತೆಗೆ ಬರುವವರು ಬಂದೇ ಬರುತ್ತಾರೆ ಎಂದು ಹೇಳಿದರು.
ಇದೇ ತಿಂಗಳು 20 ಹಾಗೂ 21ಕ್ಕೆ ಇನ್ನೊಂದು ಸೀರಿಸ್ ಇದೆ. ಆಗ ಕೆಲವರಿಗೆಲ್ಲಾ ಉತ್ತರ ಕೊಡಬೇಕಿದೆ. ನಾನು ಟಿವಿ ಮೂಲಕ ಉತ್ತರ ಕೊಡುವುದಿಲ್ಲ. ಇನ್ನೊಂದು ಸೀರಿಸ್ ಇದೆಯಲ್ಲ ಆ ಮೂಲಕವೇ ಉತ್ತರ ಕೊಡುತ್ತೇನೆ ಎಂದಿದ್ದಾರೆ.
ಪಕ್ಷ ತೊರೆದ ಬಗ್ಗೆ ಪ್ರತಿಕ್ರಿಯಿಸಿರುವ ಎಲ್.ಶ್ರೀನಿವಾಸ್ ಅವರು, ನೀವು ಬೇರೆ ಪಕ್ಷದಲ್ಲಿ ಇದ್ದರೆ ಬಿಬಿಎಂಪಿ ಚುನಾವಣೆಯಲ್ಲಿ ಮೀಸಲಾತಿ ಕೊಡುವುದಕ್ಕೆ ಸಾಧ್ಯವಿಲ್ಲ, ಕಾಂಗ್ರೆಸ್ ಸೇರಿದರೆ ನಿಮಗೆ ಮೀಸಲಾತಿ ಕೊಡುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ಸೇರಿರುವುದಾಗಿ ತಿಳಿಸಿದ್ದಾರೆ.
ಅಲ್ಲದೇ ಅಶೋಕ್ ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಅವರ ಬಳಿ ಹೋದಾಗ ಕಾರ್ಪೋರೇಟರ್ ಬಂದಿದ್ದಾರೆ ಎಂದರೆ ಅವನು ಕಾರ್ಪೋರೇಟರ್ ಅಲ್ಲ, ಮಾಜಿ ಕಾರ್ಪೋರೇಟರ್ ಚೇರ್ ಹಿಂದಕ್ಕೆ ಹಾಕು ಎನ್ನುತ್ತಿದ್ದರು. ನನಗೆ ಮೇಯರ್ ಆಗುವ ಅವಕಾಶ ಇದ್ದರೂ ಅಡ್ಡಗಾಲು ಹಾಕಿದರು. ಒಕ್ಕಲಿಗರ ಸಂಘದ ಚುನಾವಣೆಯಲ್ಲೂ ನನ್ನನ್ನ ಬೆಂಬಲಿಸಲಿಲ್ಲ ಈ ವಿಚಾರವಾಗಿ ಬೇಸರವಿದೆ ಎಂದಿದ್ದಾರೆ.
ಪ್ರಸಾದ್ ಬಾಬು ಪ್ರತಿಕ್ರಿಯೆ ನೀಡಿ, 2003 ರಲ್ಲಿ ಚೇರ್ ಮೇನ್ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಬರಲು ಆಗಿರಲಿಲ್ಲ. ಬಳಿಕ ಎಂಎಲ್‍ಸಿ ಮಾಡುವುದಾಗಿ ಹೇಳಿದ್ದರು ಆಗಲೂ ಬರಲು ಸಾಧ್ಯವಾಗಿರಲಿಲ್ಲ. ಡಿ.ಕೆ ಶಿವಕುಮಾರ್ ಮನೆಗೆ ತೆರಳಿ ಮಾತಾಡಲು ಹೋಗಿ ಇನ್ನೇನೋ ಆಯ್ತು. ರಾಜಕಾರಣದಲ್ಲಿ ಸಾಕಷ್ಟು ಅನುಭವ ಇದೆ. ಈಗ ಮತ್ತೆ ನಮ್ಮನೆಲ್ಲಾ ಗುರುತಿಸಿ ಕರೆತಂದಿದ್ದಾರೆ. ನನ್ನ ಮಗನ ವಿಚಾರವಾಗಿ ವರ್ಗದ ಬಗ್ಗೆ ಮಾತಾಡಲು ತೆರಳಿದ್ದೆ. ಆದರೆ ಈಗ ಪಕ್ಷಕ್ಕೇ ಸೇರಿಕೊಂಡಿದ್ದೇನೆ. ನನ್ನ ಮಗ ಪವನ್ ಸಹಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಡಿ.ಕೆಸುರೇಶ್ ಅವರು ಪಕ್ಷಕ್ಕೆ ಆಹ್ವಾನಿಸಿದರು. ಇಷ್ಟೇ ಅಲ್ಲದೇ ತುಂಬಾ ಜನ ಕಾಂಗ್ರೆಸ್‍ಗೆ ಸೇರ್ಪಡೆಗೊಳ್ಳಲಿದ್ದಾರೆ. ನಾನು ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ದುಡಿಯುತ್ತೇನೆ. ಇದು ರಾಜಕೀಯವಾಗಿ ನನ್ನ ಕೊನೆಯ ಜೀವನ, ಡಿ.ಕೆ ಶಿವಕುಮಾರ್ ಅವರ ಜೊತೆಯಲ್ಲೇ ಇರುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಬಹುಮತದಿಂದ ಡಿ.ಕೆ ಸುರೇಶ್ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿಕೊಂಡು ಬರುತ್ತೇವೆ ಎಂದಿದ್ದಾರೆ.
ಮಾಜಿ ಕಾರ್ಪೋರೇಟರ್ ಅಂಜನಪ್ಪ ಮಾತನಾಡಿ, 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಕೊಡಿಸುತ್ತಿದ್ದೆವು. ಗಿಡನೆಟ್ಟು ಒಳ್ಳೆಯ ಫಲ ಎಂದು ನಂಬಿದ್ದೆವು. ಆದರೆ ಅದು ಮುಳ್ಳಿನ ಗಿಡವಾಗಿದೆ. ಮುಳ್ಳಿನ ಗಿಡ ಅಪ್ಪಿಕೊಳ್ಳಲು ಸಾಧ್ಯವಿಲ್ಲ ಅದಕ್ಕೆ ಬಿಜೆಪಿ ತೊರೆದಿದ್ದೇವೆ ಎಂದಿದ್ದಾರೆ. ಹಲವು ಬಾರಿ ಡಿ.ಕೆ ಶಿವಕುಮಾರ್ ಅವರು ಕಾಂಗ್ರೆಸ್‍ಗೆ ಬರುವಂತೆ ಕರೆದಿದ್ದರು. ಕಾಲ ಬರಲಿ ಎಂದಿದ್ದೆ. ಈಗ ಆ ಕಾಲ ಬಂದಿದೆ ಎಂದಿದ್ದಾರೆ.
ಚುನಾವಣೆಯಲ್ಲಿ ಅಶೋಕ್ ಅವರನ್ನು ಗೆಲ್ಲಿಸಿದ್ದೆವು. ಆದರೆ ನಮ್ಮನ್ನು ಕೀಳುಮಟ್ಟದಿಂದ ನೋಡಿಕೊಂಡಿದ್ದಾರೆ. ಅಶೋಕ್ ಅವರ ಮೇಲೆ ಬೇಸರ ದಿಂದ ನಾವು ಕಾಂಗ್ರೆಸ್ ಸೇರುತ್ತಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತೇವೆ ಎಂದಿದ್ದಾರೆ.
ವಿ.ಬಾಲಕೃಷ್ಣ ಮಾತನಾಡಿ, ಬಿಜೆಪಿಯಲ್ಲಿ ಸಾಕಷ್ಟು ಕಷ್ಟ ಪಟ್ಟು ಹೋರಾಟ ಮಾಡಿದ್ದೇವೆ. ನಾವು ಯಾರನ್ನು ನಂಬಿದ್ದೇವೆ ಅವರು ಮೋಸ ಮಾಡಿದ್ದಾರೆ. ಆದರೆ ಡಿ.ಕೆ ಶಿವಕುಮಾರ್ ಅವರು ನಾನು ಇದ್ದೀನಿ ಕಾಂಗ್ರೆಸ್‍ಗೆ ಬಾ ಎಂದು ಆಹ್ವಾನಿಸಿದರು, ಎಲ್ಲರನ್ನೂ ಕರೆದುಕೊಂಡು ಕಾಂಗ್ರೆಸ್ ಸೇರುತ್ತೇನೆ. ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.