ಸಿಲಿಂಡರ್ ಸ್ಫೋಟ : ಚಿಕಿತ್ಸೆ ಫಲಿಸದೇ ದಂಪತಿ ಸಾವು
ಕೋಲಾರ: ಗ್ಯಾಸ್ ಸೋರಿಕೆಯಾಗಿ (Gas Leak) ಸಿಲಿಂಡರ್ ಸಿಡಿದು (Cylinder Blast) ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ದಂಪತಿ (Couple) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಕೋಲಾರ ತಾಲೂಕಿನ ಮಣಿಘಟ್ಟ ರಸ್ತೆಯಲ್ಲಿರುವ ಮಧುಸೂಧನ್ ತೋಟದ ಮನೆಯಲ್ಲಿ ಸೆಪ್ಟೆಂಬರ್ 16ರಂದು ಈ ಘಟನೆ ನಡೆದಿದ್ದು, ಗಂಭೀರ ಗಾಯಗೊಂಡಿದ್ದ ದಂಪತಿ ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುಪ್ಪಡಹಳ್ಳಿ ಗ್ರಾಮದ ದಂಪತಿ ಕೋಲಾರ ತಾಲೂಕಿನ ಮಣಿಘಟ್ಟ ರಸ್ತೆಯಲ್ಲಿರುವ ಮಧುಸೂಧನ್ ತೋಟದ ಮನೆಯಲ್ಲಿ ವಾಸವಿದ್ದರು.
ಕಾಫಿ ಮಾಡುವ ವೇಳೆ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಅವಘಡ ಸಂಭವಿಸಿತ್ತು. ಘಟನೆಯ ಪರಿಣಾಮ ತೀವ್ರ ಗಾಯಗೊಂಡ ದಂಪತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೃತ ದಂಪತಿಯನ್ನು ಗಿರೀಶ್ ಹಾಗೂ ನಂದಿನಿ ಎಂದು ಗುರುತಿಸಲಾಗಿದೆ. ಸಿಲಿಂಡರ್ ಬ್ಲಾಸ್ಟ್‌ನಿಂದ ದಂಪತಿಗೆ ಗಂಭೀರ ಗಾಯಗಳಾಗಿದ್ದು, ಬೆಂಗಳೂರಿನ (Bengaluru) ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Victoria Hospital) ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರೀತಿ ನಿರಾಕರಿಸಿದಕ್ಕೆ ಯುವತಿಗೆ ಬ್ಲೇಡ್‌ನಿಂದ ಕುತ್ತಿಗೆ ಕೊಯ್ದ ಎಂಜಿನಿಯರಿಂಗ್ ವಿದ್ಯಾರ್ಥಿ!
ಕೋಲಾರ (ಸೆ.21): ತನ್ನ ಪ್ರೀತಿಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಪಾಗಲ್ ಪ್ರೇಮಿಯೊಬ್ಬತಾನು ಪ್ರೀತಿಸಿದ ಯುವತಿಗೆ ಬ್ಲೇಡ್‌ನಿಂದ ಕತ್ತು ಕೊಯ್ದಿರುವ ಘಟನೆ ಕೋಲಾರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ನಡೆದಿದೆ. ಕೆಜಿಎಫ್ ಊರಿಗಾಂ ಬಳಿ ಇರುವ ಡಾ.ಟಿ.ತಿಮ್ಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ 2ನೇ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಪ್ರೀತಮ್ ಪ್ರಭು ಎಂಬಾತ, ಅದೇ ಕಾಲೇಜಿನಲ್ಲಿ ಮೊದಲ ವರ್ಷದ ವಿದ್ಯಾರ್ಥಿನಿ ಬೆಂಗಳೂರು ಮೂಲದ ಐರಿನ್ ಎಂಬಾಕೆಯನ್ನು ಪ್ರೀತಿಸುತ್ತಿದ್ದ.
ಆಕೆ ಈತನ ಪ್ರೀತಿಯನ್ನು ನಿರಾಕರಿಸಿದ್ದು, ಇದರಿಂದ ಆಕ್ರೋಶಗೊಂಡ ಆತ ಆಕೆ ಕಾಲೇಜಿಗೆ ಬಂದಾಗ, ಕಾಲೇಜಿನ ಕ್ಯಾಂಪಸ್‌ನಲ್ಲೇ ಬ್ಲೇಡ್‌ನಿಂದ ಆಕೆಯ ಕತ್ತನ್ನು ಕೊಯ್ದು ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಆಕೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆ, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ. ಪ್ರೀತಮ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.
ಬಟ್ಟೆಯಲ್ಲಿ ಸುತ್ತಿದ್ದ ನವಜಾತ ಹೆಣ್ಣು ಶಿಶು ಓಣಿಯಲ್ಲಿ ಪತ್ತೆ: ತಾಲೂಕಿನ ತಿಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡುಬ್ಯಾಡರಹಳ್ಳಿ ಗ್ರಾಮದಲ್ಲಿ ನವಜಾತ ಶಿಶುವನ್ನು ಓಣಿಯಲ್ಲಿ ಬಿಟ್ಟು ಹೋಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ. ಹೆಣ್ಣುಮಗು ಎಂಬ ಕಾರಣಕ್ಕೆ ಪೋಷಕರು ಓಣಿಯಲ್ಲಿ ಯಾರು ಇಲ್ಲದೇ ಇರುವ ಸಮಯವನ್ನು ಗಮನಿಸಿ ಬಟ್ಟೆಯಲ್ಲಿ ಸುತ್ತಿ ನಡು ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಾಹಿತಿ ತಿಳಿದ ಅಂಗನವಾಡಿ ಕಾರ್ಯಕರ್ತೆ ಹಾಗೂ ಆಶಾ ಕಾರ್ಯಕರ್ತೆಯರು ಮಗುವನ್ನು ರಕ್ಷಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನಿತಾ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಶ್ರಿನಿವಾಸ್, ರಕ್ಷಣಾಧಿಕಾರಿ ಶ್ರೀಧರ್ ಮಗುವನ್ನು ವಶಕ್ಕೆ ಪಡೆದು ಆಂಬ್ಯುಲೆನ್ಸ್ ಮೂಲಕ ನವಜಾತ ಶಿಶುವಿಗೆ ನಗರದ ತಾಯಿ ಮಗು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯ ಕೊಡಿಸಿದ ನಂತರ ಹೆಚ್ಚಿನ ನಿಗಾವಹಿಸಲು ಬೆಂಗಳೂರಿನ ವಾಣಿವಿಲಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಂಜಾ ಸಸಿಗಳ ವಶ: ತಾಲೂಕಿನ ರಾಮಯ್ಯನ ಪಾಳ್ಯದ ಬಳಿ ಖಚಿತ ಮಾಹಿತಿ ಮೇರೆಗೆ ಸಿಮೆಂಟ್ ರೆಡಿಮಿಕ್ಸ್ ಪ್ಲಾಂಟ್ ನಲ್ಲಿ 10 ಅಡಿ ಎತ್ತರದ 2.50 ಲಕ್ಷ ರು. ಮೌಲ್ಯದ ಗಾಂಜಾ ಗಿಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಆರಕ್ಷಕ ನಿರೀಕ್ಷಕ ಮುನಿಕೃಷ್ಣ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಸಿಮೆಂಟ್ ರೆಡಿ ಮಿಕ್ಸ್ ಮಾಲೀಕ ಮಾದೇವ, ಹೊಸಕೋಟೆಯ ಮಧು, ವಾಹನ ಚಾಲಕ ಬಿಸ್ವುಲ್ಲಾ ಶೇಖ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಸದ್ಯ ಬಿಸ್ವುಲ್ಲಾ ಶೇಖ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.