ಪಶ್ಚಿಮ ಬಂಗಾಳದಲ್ಲಿ ಅಬ್ಬರಿಸಿದ ಸೈಕ್ಲೋನ್; ಐದು ಮಂದಿ ಸಾವು..!
ಪಶ್ಚಿಮ ಬಂಗಾಳದಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದ್ದು, ಏಕಾಏಕಿ ಚಂಡಮಾರುತ ಅಪ್ಪಳಿಸಿದ ಪರಿಣಾಮ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮೃತರನ್ನು ಸೆಂಪಾರಾದ ದಿಜೇಂದ್ರ ನಾರಾಯಣ ಸರ್ಕಾರ್ (52), ಪಹರ್‌ಪುರದ ಅನಿಮಾ ಬರ್ಮನ್ (45), ಪುತಿಮಾರಿಯ ಜಗನ್ ರಾಯ್ (72) ಮತ್ತು ರಾಜರ್‌ಹತ್‌ನ ಸಮರ್ ರಾಯ್ (64) ಎಂದು ಗುರುತಿಸಲಾಗಿದೆ. ಹಾಗೂ ಇನ್ನೋಬ್ಬ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.
ಉತ್ತರ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಭಾನುವಾರ ಚಂಡಮಾರುತ ಉಂಟಾಗಿದ್ದು, ಐವರು ಸಾವನ್ನಪ್ಪಿದರೆ, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಶ್ಚಿಮ ಬಂಗಾಳದ ಜಲ್ಪೈಗುರಿ ಭಾಗದಲ್ಲಿ ಗಾಳಿ ಹಾಗೂ ಮಳೆಯ ಅಬ್ಬರ ಮುಂದುವರಿದಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯಾಚರಣೆ ನಡೆಯುತ್ತಿದೆ. ಸದ್ಯ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುತ್ತಿದ್ದು, ಸಂತ್ರಸ್ತರಿಗೆ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭರವಸೆ ನೀಡಿದ್ದಾರೆ.
ಅಲ್ಲದೇ ಇನ್ನು ಕೆಲವು ದಿನ ರಾಜ್ಯದಲ್ಲಿ ಭಾರೀ ಮಳೆಯಾಗುವ ಬಗ್ಗೆ ಹವಮಾನ ಇಲಾಖೆ ಸೂಚನೆ ನೀಡಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ರಾಜ್ಯದ ಜನರಿಗೆ ಮಮತಾ ಬ್ಯಾನರ್ಜಿ ಕರೆಕೊಟ್ಟಿದ್ದಾರೆ.
ಇನ್ನು ಭಾನುವಾರ ಅಪ್ಪಳಿಸಿದ ಚಂಡಮಾರುತ ಪರಿಣಾಮ ಜಲ್ಪೈಗುರಿಯ ಹೆಚ್ಚಿನ ಭಾಗಗಳು ಹಾಗೂ ಮೈನಾಗೂರಿನ ಅನೇಕ ಪ್ರದೇಶಗಳಲ್ಲಿ ಹಾನಿಯಾಗಿದೆ. ಗಾಳಿಯ ರಭಸಕ್ಕೆ ಮನೆಗಳು, ಮರಗಳು, ವಿದ್ಯುತ್ ಕಂಬಗಳು, ಕೆಲವು ಕಟ್ಟಡಗಳು ನೆಲಸಮವಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಜಲ್ಪೈಗುರಿ ಜಿಲ್ಲೆಯ ರಾಜರಹತ್, ಬರ್ನಿಶ್, ಬಕಾಲಿ, ಜೋರ್ಪಕ್ಡಿ, ಮಧಬ್ದಂಗ ಹಾಗೂ ಸಪ್ತಿಬಾರಿ ಪ್ರದೇಶಗಳಲ್ಲಿ ಹೆಚ್ಚು ಹಾನಿಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ವಿವರಿಸಿದ್ದಾರೆ.