ಜಿಲ್ಲೆಯಲ್ಲಿ ಸದ್ಯಕ್ಕೆ ರೇಶನಿಂಗ್ ಇಲ್ಲ; ನೀರು ಪೋಲು ಆಗದಂತೆ ಎಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಸೂಚನೆ
Twitter
Facebook
LinkedIn
WhatsApp
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಕುಡಿಯುವವ ನೀರಿಗೆ ಯಾವುದೇ ತೊಂದರೆ ಇಲ್ಲ, ರೇಷನಿಂಗ್ ಮಾಡುವ ಪರಿಸ್ಥಿತಿ ಸದ್ಯಕ್ಕೆ ಬಂದಿಲ್ಲ, ಆದರೆ, ಜನರು ನೀರು ಪೋಲು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಕರೆ ನೀಡಿದರು.
ಅವರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೇತ್ರಾವತಿ ನದಿಯ ಮೂರು ಡ್ಯಾಂಗಳಲ್ಲಿ ಇರುವ ನೀರಿನ ಮಟ್ಟವನ್ನು ಪ್ರತಿದಿನ ಅವಲೋಕನ ನಡೆಸಲಾಗುತ್ತಿದೆ ಎಂದರು.
ತುಂಬೆ ಡ್ಯಾಂನಲ್ಲಿ 5.48 ಮೀಟರ್, ಎಎಂಆರ್ ಡ್ಯಾಂನಲ್ಲಿ 17.6 ಮೀ, ಬಿಳಿಯೂರು ಡ್ಯಾಂನಲ್ಲಿ 1.95 ಮೀಟರ್ ನೀರು ಲಭ್ಯವಿದೆ. ತುಂಬೆ ಡ್ಯಾಂನ ಮಟ್ಟ 5ಕ್ಕೆ ಇಳಿದಾಗ ಎಎಂಆರ್‌ನಿಂದ ನೀರು ಬಿಡಲಾಗುವುದು, ಎಎಂಆರ್ ಡ್ಯಾಂನಲ್ಲಿ 16 ಮೀಟರ್‌ಗೆ ಬಂದಾಗ ಬಿಳಿಯೂರು ಡ್ಯಾಂನಿಂದ ನೀರು ಬಿಡಲಾಗುವುದು. ಈಗಾಗಲೇ ಕೈಗಾರಿಕೆಗಳಿಗೆ ಕೊಡುವ ನೀರಿನ ಪ್ರಮಾಣವನ್ನು ಶೇ 50 ರಷ್ಟು ಕಡಿಮೆ ಮಾಡಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಪೂರೈಕೆಯಾಗುವ ತುಂಬೆ ಅಣೆಕಟ್ಟಿನಲ್ಲಿ 6 ಮೀಟರ್ ನೀರು ಸುಮಾರು 50 ದಿನಗಳಿಗೆ ಪೂರೈಕೆ ಮಾಡಬಹುದು. ಏಪ್ರಿಲ್ ಮೇ ತಿಂಗಳಲ್ಲಿ ಸಾಮಾನ್ಯವಾಗಿ ಮುಂಗಾರು ಪೂರ್ವ ವಾಡಿಕೆ ಮಳೆಯಾಗುತ್ತದೆ. ಬಿಸಿಲ ಝಳ ಹೆಚ್ಚಿರುವುದರಿಂದ ನೀರು ಪೋಲು ಮಾಡದೆ ಎಚ್ಚರಿಕೆ ವಹಿಸಬೇಕು ಎಂದರು.
ಉಳ್ಳಾಲ ಗ್ರಾಮೀಣ ಭಾಗದ ಬಾಳೆಪುಣಿ, ಕೋಣಾಜೆ, ನರಿಂಗಾನ, ಪಜೀರು, ಮಂಜನಾಡಿ ಪ್ರದೇಶಗಳಿಗೆ 9 ಟ್ಯಾಂಕರ್‌ಗಳ ಮೂಲಕ ದಿನಕ್ಕೆ 30 ಟ್ರಿಪ್ ನೀರು ಪೂರೈಕೆ ಮಾಡಲಾಗುತ್ತಿದೆ. ಉಳ್ಳಾಲ, ಕೋಟೆಕಾರು, ಸೋಮೇಶ್ವರ ಸೇರಿ ನಗರ ಭಾಗದ 12 ವಾರ್ಡ್‌ಗಳಿಗೆ 9 ಟ್ಯಾಂಕರ್‌ಗಳ ಮೂಲಕ 62 ಟ್ರಿಪ್ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.