ಇಂದಿನ 4 ನೇ ಟಿ-20 ಪಂದ್ಯಕ್ಕೆ ಕರೆಂಟ್ ಶಾಕ್ ; 3.16 ಕೋಟಿ ಬಿಲ್ ಬಾಕಿ ಉಳಿಸಿಕೊಂಡ ಸ್ಟೇಡಿಯಮ್ - ಇಲ್ಲಿದೆ ವಿವರ
ರಾಯ್‌ಪುರ: ಸಾಮಾನ್ಯವಾಗಿ ಯಾವುದೇ ಕ್ರಿಕೆಟ್ ಪಂದ್ಯಗಳಿಗೆ ಒಂದೋ ಮಳೆ ಕಾಡುತ್ತದೆ. ಇಲ್ಲವೆ ಮಂದ ಬೆಳಕಿನ ಕಾರಣ ಆಟವನ್ನು ರದ್ದುಗೊಳಿಸಲಾಗುತ್ತದೆ. ಆದರೆ, ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ (IND vs AUS) ನಡುವಿನ ನಾಲ್ಕನೇ ಟಿ20 ಪಂದ್ಯಕ್ಕೆ ‘ಕರೆಂಟ್ ಬಿಲ್’ ಅಡ್ಡಿಯಾಗಿದೆ. ಹೌದು, ರಾಯ್‌ಪುರದಲ್ಲಿರುವ ಶಹೀದ್ ವೀರ ನಾರಾಯಣ ಸಿಂಗ್ ಸ್ಟೇಡಿಯಂನಲ್ಲಿ (Shaheed Veer Narayan Singh Stadium) ಶುಕ್ರವಾರ (ಡಿಸೆಂಬರ್ 1) ಟಿ-20 ಪಂದ್ಯ ನಡೆಯಬೇಕಿದ್ದು, ಕೊನೇ ಕ್ಷಣದಲ್ಲಿ ಮೈದಾನದಲ್ಲಿ ಕರೆಂಟ್ ಸಮಸ್ಯೆ ಎದುರಾಗಿದೆ. ವಿದ್ಯುತ್ ಬಿಲ್ ಕಟ್ಟದಿರುವುದೇ ಇದಕ್ಕೆ ಕಾರಣವಾಗಿದೆ.
ಹೌದು, ಶಹೀದ್ ವೀರ ನಾರಾಯಣ ಸಿಂಗ್ ಸ್ಟೇಡಿಯಂಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದಕ್ಕೆ 2009ರಿಂದಲೂ ಸ್ಟೇಡಿಯಂ ಆಡಳಿತ ಮಂಡಳಿಯು ಬಾಕಿ ಉಳಿಸಿಕೊಂಡಿರುವ 3.16 ಕೋಟಿ ರೂ. ವಿದ್ಯುತ್ ಬಿಲ್ ಕಾರಣವಾಗಿದೆ. ಐದು ವರ್ಷದ ಹಿಂದೆಯೇ ಸ್ಟೇಡಿಯಂಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಈಗ ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮನವಿ ಮೇರೆಗೆ ತಾತ್ಕಾಲಿಕವಾಗಿ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಪ್ರೇಕ್ಷಕರ ಗ್ಯಾಲರಿಗೆ ಮಾತ್ರ ವಿದ್ಯುತ್ ಪೂರೈಕೆಯಾಗುತ್ತದೆ. ಇದರಿಂದಾಗಿ ಜನರೇಟರ್ ಮೂಲಕ ಫ್ಲಡ್‌ಲೈಟ್‌ಗಳನ್ನು ಉರಿಸುವ ಅನಿವಾರ್ಯತೆ ಎದುರಾಗಿದೆ.
Guwahati ✈️ Raipur#TeamIndia are here for the 4️⃣th #INDvAUS T20I 👌🏻👌🏻@IDFCFIRSTBank pic.twitter.com/kotB4o8vll
— BCCI (@BCCI) November 29, 2023
ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು 200 ಕಿಲೋವ್ಯಾಟ್‌ಗೆ. ಇದನ್ನು 1,000 ಕಿಲೋವ್ಯಾಟ್‌ಗೆ ಏರಿಸಲು ಅನುಮತಿ ದೊರೆತಿದೆ. ಆದರೆ, ಇದುವರೆಗೆ ಈ ಕುರಿತ ಕೆಲಸ ಆರಂಭವಾಗಿಲ್ಲ. ಇದರಿಂದಾಗಿ ಕ್ರಿಕೆಟ್ ಪ್ರೇಮಿಗಳು ಅಸೋಸಿಯೇಷನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2018ರಲ್ಲಿ ಅಥ್ಲೀಟ್‌ಗಳು ಹಾಫ್ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುವಾಗ ವಿದ್ಯುತ್ ಪೂರೈಕೆ ಇಲ್ಲದಿರುವ ಕುರಿತು ದೂರು ನೀಡಿದ್ದರು. ಇದಾದ ಬಳಿಕವೇ 3.16 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಇರುವ ಪ್ರಕರಣ ಬಯಲಾಗಿದೆ. ಇದರ ಬಗ್ಗೆ ಕ್ರೀಡಾ ಇಲಾಖೆ ಹಾಗೂ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಆರೋಪ-ಪ್ರತ್ಯಾರೋಪಗಳಲ್ಲಿಯೇ ನಿರತರಾಗಿದ್ದಾರೆಯೇ ಹೊರತು ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡವು 2-1ರ ಮುನ್ನಡೆ ಸಾಧಿಸಿದೆ. ಭಾರತ ತಂಡವು ಮೊದಲ ಎರಡು ಪಂದ್ಯಗಳನ್ನು ಗೆದ್ದು, ಗುವಾಹಟಿಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಐದು ವಿಕೆಟ್‌ಗಳ ಅಂತರದಿಂದ ಸೋಲನುಭವಿಸಿದೆ. ಈಗ ನಾಲ್ಕನೇ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ಪಂದ್ಯದ ಸಮಯದಲ್ಲಿ ತಾಪಮಾನವು 20 ಡಿಗ್ರಿ ಸೆಲ್ಸಿಯಸ್ ಒಳಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಮಸುಕಾದ ಸಂಜೆಯಲ್ಲಿ ತೇವಾಂಶವು 50% ರಷ್ಟು ಹೆಚ್ಚಾಗುತ್ತದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿಲ್ಲ. ಸರಣಿಯು ಕೌತುಕ ಮೂಡಸಿರುವ ಕಾರಣ ಅಭಿಮಾನಿಗಳಿಗೆ ಇದು ಉತ್ಸಾಹದ ಸಂಗತಿಯಾಗಿದೆ. ಆದರೆ, ಈ ಪಂದ್ಯಕ್ಕೆ ವಿದ್ಯುತ್ ಸಮಸ್ಯೆ ಎದುರಾಗದಿರಲಿ ಎಂಬುದು ಕ್ರಿಕೆಟ್ ಪ್ರೇಮಿಗಳ ಪ್ರಾರ್ಥನೆಯಾಗಿದೆ.