ಕಾಂಗ್ರೆಸ್ ಸೇರ್ಪಡೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಿ.ಪಿ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್..!

ಲೋಕಸಭಾ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಠಕ್ಕರ್ ಕೊಡುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದ್ದು, ಈ ನಡುವೆ ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಿ ಪಿ ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್ ಅವರು ಕಾಂಗ್ರೆಸ್ ಸೇರ್ಪಡೆ ಕುರಿತು ರಾಜಕೀಯ ವಯಲದಲ್ಲಿ ಚರ್ಚೆ ಶುರುವಾಗಿದೆ
ಕಾಂಗ್ರೆಸ್ ಸೇರುವುದಾಗಿ ಹೇಳಿಕೆ ನೀಡಿದ್ದ ನಿಶಾ ಯೋಗೇಶ್ವರ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಿಡಿಯೋವನ್ನ ಹಂಚಿಕೊಳ್ಳುವ ಮೂಲಕ ಸ್ಪಷ್ಟನೆ ನೀಡಿರುವ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ, ನಾನು ಸದ್ಯಕ್ಕೆ ಯಾವ ಪಕ್ಷದಲ್ಲಿಯೂ ಇಲ್ಲ, ನಾನು ಯಾವುದೇ ಪಕ್ಷವನ್ನ ಸೇರಿಲ್ಲ. ಕಾಂಗ್ರೆಸ್ ಸೇರಲು ಪ್ರಯತ್ನ ಮಾಡಿದ್ದೇನೆ. ಈ ಬಗ್ಗೆ ಮುಂದೆ ನಾನು ಉತ್ತರ ನೀಡುತ್ತೇನೆ, ನಾನು ಯಾವುದೇ ಪಕ್ಷದಲ್ಲಿ ಇಲ್ಲ, ಜನರ ಮಧ್ಯದಲ್ಲಿ ಇದ್ದೇನೆ . ಸದ್ಯಕ್ಕೆ ಯಾವುದೇ ಪಕ್ಷದಲ್ಲಿ ನಾನು ಇಲ್ಲ. ಮುಂದಿನ ದಿನಗಳಲ್ಲಿ ನನ್ನ ನಿರ್ಧಾರ ತಿಳಿಯಲಿದೆ ಎಂದು ಹೇಳಿದ್ದಾರೆ.
ವಿಡಿಯೋದಲ್ಲಿ ನಿಶಾ ಯೋಗೇಶ್ವರ್ ಹೇಳಿದ್ದೇನು? ನಾನು ಎಲ್ಲಿ ಹೋದರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಕ್ಕೆ ಅಭಿನಂದನೆ ಅಂತ ಹೇಳ್ತಿದ್ದಾರೆ, ಆದರೆ ಇದು ನಿಜ ಅಲ್ಲ. ನಾನು ನನ್ನ ಜನರನ್ನು ಕತ್ತಲೆಯಲ್ಲಿಡೋದಕ್ಕೆ ಇಷ್ಟ ಪಡೋದಿಲ್ಲ. ಅದಕ್ಕೆ ಈ ಸ್ಪಷ್ಟನೆಯನ್ನು ನೋಡ್ತಿದ್ದೇನೆ. ನಾನು ಯಾವುದೇ ಪಕ್ಷಕ್ಕೂ ಸೇರ್ಪಡೆಯಾಗಿಲ್ಲ, ಯಾವುದೇ ಪಾರ್ಟಿಯಲ್ಲೂ ನಾನು ಇಲ್ಲ. ನೀವು ನನ್ನನ್ನು ಯಾವುದೇ ಪಕ್ಷದ ಕಚೇರಿ ಅಥವಾ ಅಭ್ಯರ್ಥಿ, ಪಕ್ಷದ ಪರ ಪ್ರಚಾರ ಮಾಡೋದನ್ನು ನೋಡಿಲ್ಲ. ನಾನು ಜನರ ನಡುವೆ ಇದ್ದೇನೆ ಅಷ್ಟೇ. ನಾನು ಪಕ್ಷಕ್ಕೆ ಸೇರ್ಪಡೆಯಾಗಲು ಹಲವು ಕಡೆಯಿಂದ ಪ್ರಯತ್ನ ಮಾಡಿದ್ದೆ, ಸದ್ಯಕ್ಕೆ ನಾನು ಯಾವುದೇ ಪಕ್ಷದಲ್ಲೂ ಇಲ್ಲ. ನಿಮಗೆ ಹಲವು ಪ್ರಶ್ನೆಗಳು ನನ್ನನ್ನು ಕೇಳಬೇಕು ಅನಿಸಬಹುದು ಅದೇ ರೀತಿ ನನ್ನ ಬಳಿಯೂ ಸಾವಿರಾರು ಪ್ರಶ್ನೆಗಳಿವೆ. ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ, ನಿಮ್ಮ ಕಾಳಜಿಗೆ ನಾನು ಸದಾ ಅಭಾರಿಯಾಗಿರುತ್ತೇನೆ ಎಂದು ನಿಶಾ ತಿಳಿಸಿದ್ದಾರೆ.
ರಾಜಕಾರಣಕ್ಕಾಗಿ ತಂದೆ-ಮಗಳನ್ನು ದೂರ ಮಾಡಲ್ಲ:
ಡಿಕೆಶಿ ನಿಶಾ ಯೋಗೇಶ್ವರ್ ನಮ್ಮ ಮನೆ ಮಗಳಂತೆ. ಆಕೆ ನಮ್ಮ ಬಳಿ ಬಂದು ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಇಂಗಿತ ವ್ಯಕ್ತಪಡಿಸಿದರು. ಅವರ ತಾಯಿ ನನಗೆ ಪರಿಚಯ. ಅವರಿಗೆ ರಕ್ಷಣೆ ಇಲ್ಲ. ತಂದೆ ಸ್ಥಾನದಲ್ಲಿ ನಿಂತು ನನ್ನನ್ನು ಸ್ವೀಕಾರ ಮಾಡಿ ಎಂದು ಕೇಳಿದಳು. ರಾಜಕಾರಣಕ್ಕಾಗಿ ತಂದೆ ಮಗಳ ಬೇರೆ ಮಾಡುವುದು ಸರಿಯಲ್ಲ. ಆಕೆಗೆ ಮದುವೆ ಮಾಡಬೇಕು, ಧಾರೆ ಎರೆದು ಅಕ್ಷತೆ ಹಾಕಬೇಕು. ಅದನ್ನು ತಂದೆಯೇ ಮಾಡಬೇಕು. ಹೀಗಾಗಿ ರಾಜಕೀಯಕ್ಕಾಗಿ ಅವರನ್ನು ಬೇರೆ ಮಾಡಲು ಇಷ್ಟವಿಲ್ಲ. ಆಕೆ ಬಂದು ತಮ್ಮ ಕಷ್ಟ ಹೇಳಿಕೊಂಡಿದ್ದಾಳೆ. ಆಕೆ ಪ್ರಬುದ್ಧ ಯುವತಿ. ಆಕೆಗೆ ರಾಜಕಾರಣದಲ್ಲಿನ ಆಯ್ಕೆಗೆ ಸ್ವಾತಂತ್ರ್ಯವಿದೆ. ಆಕೆ ಇನ್ನೂ ಯೋಗೇಶ್ವರ್ ಅವರ ಕುಟುಂಬದ ಮೇಲೆ ಅವಲಂಬಿತವಾಗಿದ್ದಾರೆ.
ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ರಾಜಕೀಯಕ್ಕೆ ಅಪ್ಪ ಮಗಳನ್ನು ದೂರ ಮಾಡಿದರು ಎಂದು ಜನ ಪ್ರಶ್ನೆ ಮಾಡಬಹುದು. ಯೋಗೇಶ್ವರ್ ಜತೆ ಇರುವ ಬಿಜೆಪಿ ಕಾರ್ಯಕರ್ತರೇ ಆಕೆಗೆ ಕಾಂಗ್ರೆಸ್ ಸೇರುವಂತೆ ಸಲಹೆ ನೀಡಿದ್ದಾರೆ. ಆಕೆ ವಿವಾಹವಾಗಿ ಬೇರೆ ಕುಟುಂಬಕ್ಕೆ ಸೇರಿದ್ದರೆ, ನಾವು ಇಷ್ಟು ಆಲೋಚನೆ ಮಾಡುತ್ತಿರಲಿಲ್ಲ. ಹೀಗಾಗಿ ನಾನು ನನ್ನ ಸಹೋದರ ಈ ವಿಚಾರವಾಗಿ ಬಹಳ ತಾಳ್ಮೆಯಿಂದ ಆಲೋಚನೆ ಮಾಡುತ್ತಿದ್ದೇವೆ. ನಿಶಾ ಅವರು ಮಾಧ್ಯಮಗಳಿಗೆ ಕೊಟ್ಟ ಹೇಳಿಕೆ ಗಮನಿಸಿದೆ. ಆಕೆ ದೊಡ್ಡ ಧೈರ್ಯ ಮಾಡಿರುವಂತೆ ಕಾಣುತ್ತಿದೆ. ಕಾಂಗ್ರೆಸ್ ಪಕ್ಷದಲ್ಲೇ ಕೆಲಸ ಮಾಡುತ್ತೇನೆ ಎಂದು ಆಕೆ ತೀರ್ಮಾನ ಮಾಡಿದರೆ, ಆಕೆಯನ್ನು ಹೊರದಬ್ಬಲು ಆಗುವುದಿಲ್ಲ. ಹೀಗಾಗಿ ಸ್ಥಳೀಯ ನಾಯಕರ ಜೊತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.