ಕಲ್ಲಡ್ಕ ಪ್ರಭಾಕರ್ ಭಟ್‌ಗೆ ತಾತ್ಕಾಲಿಕ ರಿಲೀಫ್ ನೀಡಿದ ಕೋರ್ಟ್ ; ಏನಿದು ಆರೋಪ.!
ಬೆಂಗಳೂರು, ಡಿಸೆಂಬರ್ 29: ಮುಸ್ಲಿಂ ಸಮುದಾಯದ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಪ್ರಕರಣದಲ್ಲಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಸದ್ಯಕ್ಕೆ ಅವರ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಪ್ರಕರಣ ರದ್ದು ಕೋರಿ ಕಲ್ಲಡ್ಕ ಪ್ರಭಾಕರ್ ಭಟ್ ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿ ರಾಜೇಶ್ ರೈ ಅವರಿದ್ದ ರಜಾಕಾಲದ ಏಕಸದಸ್ಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಕೋರ್ಟ್ ಆದೇಶದ ಕಾರಣ ಸದ್ಯ ಕಲ್ಲಡ್ಕ ಪ್ರಭಾಕರ ಭಟ್ ಬಂಧನ ಭೀತಿಯಿಂದ ಪಾರಾಗಿದ್ದಾರೆ. ಪೊಲೀಸರು ಅವರನ್ನು ಬಂಧಿಸುವಂತೆ ಇಲ್ಲ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಇಲ್ಲ.
ಅರ್ಜಿ ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಾಲಯ, ಮುಂದಿನ ವಿಚಾರಣೆವರೆಗೂ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಸರ್ಕಾರದ ಪರ ಎಸ್‌ಪಿಪಿಗೆ ಸೂಚನೆ ನೀಡಿತು. ಅಲ್ಲದೆ, ಪ್ರತಿವಾದಿ ಸರ್ಕಾರ ಹಾಗೂ ದೂರುದಾರರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.
ಭಟ್ ಪರ ವಾದಿಸಿದ ಹಿರಿಯ ವಕೀಲರು, ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ದ ಎಫ್ಐಆರ್ ಹಾಕಿರುವುದಕ್ಕೆ ರಾಜಕೀಯ ಪ್ರೇರಿತ ಕಾರಣವಿದೆ. ಅವರು ಯಾವುದೇ ಪ್ರಚೋದನಕಾರಿ ಅಥವಾ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದಡಿ ವಾಸ್ತವ ಅಂಶಗಳ ಬಗ್ಗೆ ಮಾತನಾಡಿದ್ದಾರೆ ಎಂದರು.
ವ್ಯಾಪಕ ಆಕ್ರೋಶ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಕಳೆದ ಭಾನುವಾರ ನಡೆದ ಹನುಮ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಕಲ್ಲಡ್ಕ ಪ್ರಭಾಕರ ಭಟ್, “ಹಿಂದೆ ತಲಾಖ್ ತಲಾಖ್ ಎಂದು ಹೇಳಿ ಕೈತೊಳೆದುಕೊಳ್ಳುತ್ತಿದ್ದರು. ದಿನಕ್ಕೊಬ್ಬ ಗಂಡ ಬದಲಾಗುತ್ತಿದ್ದ. ನಿಮಗೆ ಕಾಯಂ ಗಂಡನನ್ನು ಕೊಟ್ಟಿದ್ದೆ ಮೋದಿ ಸರ್ಕಾರ. ತಲಾಖ್ ರದ್ದು ಮಾಡಿ ನಿಮಗೆ ಗೌರವ ತಂದುಕೊಟ್ಟಿದ್ದೆ ಹಿಂದೂ ಧರ್ಮ” ಎಂದು ಹೇಳಿದ್ದಾರೆ ಎಂಬುದು ಆರೋಪ.
ಅವರ ಹೇಳಿಕೆಗೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಜೊತೆಗೆ ಆ ಕುರಿತು ಹೋರಾಟಗಾರ್ತಿ ನಜ್ಮಾ ನಜೀರ್ ಚಿಕ್ಕನೇರಳೆ ಅವರು ನೀಡಿದ ದೂರಿನ ಅನ್ವಯ ಐಪಿಸಿ ಸೆಕ್ಷನ್ 354, 294. 509,153, 295, 295ಎ, 298 ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಹಾಗಾಗಿ ಪ್ರಭಾಕರ್ ಭಟ್ ಬಂಧನ ಭೀತಿ ಎದುರಿಸುತ್ತಿದ್ದರು.