ಇಂದು ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ...!
ಅಯೋಧ್ಯೆಯಲ್ಲಿ ತಲೆಎತ್ತಿ ನಿಂತಿರುವ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ಲಕ್ಷಾಂತರ ರಾಮನ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಇಂದು (ಜನವರಿ 22 ರಂದು ಸೋಮವಾರ) ಭಗವಾನ್ ಶ್ರೀರಾಮನು ಅಯೋಧ್ಯೆಯ ರಾಮ ಮಂದಿರದಲ್ಲಿ ನೆಲೆಸಲಿದ್ದಾನೆ. ಶ್ರೀರಾಮನ ಮಹಾಮಸ್ತಕಾಭಿಷೇಕದ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.
ಈ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಲಿದೆ. ರಾಮಮಂದಿರ ಉದ್ಘಾಟನೆಗಾಗಿ ಸಕಲ ಸಿದ್ದತೆ ನಡೆದಿದ್ದು, 8,000 ಕ್ಕೂ ಹೆಚ್ಚು ಅತಿಥಿಗಳನ್ನು ಆಹ್ವಾನಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನವರಿ 22 ರಂದು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಶ್ರೀ ರಾಮಲಲ್ಲಾನ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ಅಂತಿಮ ಕ್ಷಣದ ತಯಾರಿಗಳು ಸಮರೋಪಾದಿಯಲ್ಲಿ ನಡೆಯುತ್ತಿದೆ.ಅಯೋಧ್ಯೆ ಮತ್ತು ಪ್ರಾಣಪ್ರತಿಷ್ಠೆಗೆ ಸಂಬಂಧಿಸಿ ಅಯೋಧ್ಯೆ ಮತ್ತು ಇತರೆಡೆ ನಡೆಯುವ ಎಲ್ಲ ಬೆಳವಣಿಗೆಯ ಕ್ಷಣ ಕ್ಷಣ ಮಾಹಿತಿಗಾಗಿ ಒನ್ ಇಂಡಿಯಾ ಕನ್ನಡ ಫಾಲೋ ಮಾಡಿ.
ಶತಕೋಟಿ ಭಾರತೀಯರ ಶತ ಶತಮಾನಗಳ ಕನಸು ನನಸಾಗಿದೆ- ಕುಮಾರಸ್ವಾಮಿ ಒಂದೂವರೆ ಶತಕೋಟಿ ಭಾರತೀಯರ ಶತ ಶತಮಾನಗಳ ಕನಸು ನನಸಾಗಿದೆ. ಅಸಂಖ್ಯಾತ ಕರಸೇವಕರ ಹೋರಾಟ, ತ್ಯಾಗ-ಬಲಿದಾನದ ಫಲ ಸಾಕಾರವಾಗಿದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿ ಶ್ರೀಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಪ್ರಧಾನಿಗಳಾದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ನೆರವೇರುತ್ತಿದೆ. ಈ ಎಲ್ಲಾ ಕರಸೇವಕರ ಪರಿಶ್ರಮದ ಫಲದಿಂದ ಇಂತಹ ದಿವ್ಯಕ್ಷಣಕ್ಕೆ ಪ್ರತ್ಯಕ್ಷ ಸಾಕ್ಷಿಯಾಗುವ ಪುಣ್ಯ ನನಗೆ ಧಕ್ಕಿದೆ ಮತ್ತು ಶ್ರೀರಾಮ ದೇವರಿಗೆ ಭಕ್ತಿ ಸಮರ್ಪಣೆ ಮಾಡುವ ಸುದೈವವೂ, ಅವಕಾಶವು ನನ್ನದಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಖುಷಿ ಹಂಚಿಕೊಂಡಿದ್ದಾರೆ.
10 ಹಂತಗಳಲ್ಲಿ ಪ್ರಾಣ ಪ್ರತಿಷ್ಠಾಪನೆ:
ಪ್ರಧಾನಿಯಿಂದ ಕಾಡಿಗೆ ಶಾಸ್ತ್ರ ಅಯೋಧ್ಯೆ ಶ್ರಿರಾಮ ಮಂದಿರದಲ್ಲಿ ಒಟ್ಟು ಹತ್ತು ಹಂತಗಳಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಆರನೇ ಹಂತದಲ್ಲಿ ವಿಗ್ರಹದ ಕಣ್ಣು ತೆರೆಯಲಾಗುತ್ತದೆ. ನಂತರ ಹಂತದಲ್ಲಿ ಪ್ರಧಾನಿ ಮೋದಿಯವರು ವಿಗ್ರಕ್ಕೆ ಕಾಡಿಗೆ ಶಾಸ್ತ್ರ ನೆರವೇರಿಸಲಿದ್ದಾರೆ. ಬಳಿಕ ಪ್ರಾರ್ಥನೆ ಸಲ್ಲಿಕೆ ನಡೆಯಲಿದೆ.
ರಾಜ್ಯಾದ್ಯಂತ ಪೊಲೀಸ್ ಬಿಗಿಬಂದೋಬಸ್ತ್
ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿದೆ. ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದ್ದು, ಕೆಎಸ್‌ಆರ್‌ಪಿ, ಸಿಎಆರ್, ಗೃಹರಕ್ಷಕ ದಳ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿದೆ. ಅಲ್ಲದೇ ದೇವಾಲಯ, ಮಸೀದಿ, ಚರ್ಚ್ ಸೇರಿದಂತೆ ಪ್ರಾರ್ಥನಾ ಮಂದಿರಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ರಾಮಮಂದಿರ ಉದ್ಘಾಟನೆ:
ದೇವಾಲಯಗಳಲ್ಲಿ ವಿಶೇಷ ಪೂಜೆ ಆರಂಭ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ದೇವಾಲಯಗಳಲ್ಲಿ ಇಂದು(ಜನವರಿ 22) ಮುಂಜಾನೆಯಿಂದಲೇ ಪೂಜಾ ಕೈಂಕರ್ಯಗಳು ಆರಂಭಗೊಂಡಿದೆ. ರಾಮದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಅಂಗವಾಗಿ ರಾಜ್ಯದ ವಿವಿಧ ಮಂದಿರಗಳಲ್ಲಿ ಹೋಮ-ಹವನ, ಪೂಜೆ, ಪ್ರವಚನ ನಡೆಯಲಿದೆ. ಅಲ್ಲದೇ ಕೆಲವು ದೇವಾಲಯಗಳಲ್ಲಿ ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದ ನೇರಪ್ರಸಾರದ ವ್ಯವಸ್ಥೆ ಸಹ ಇರಲಿದೆ.
ಸೋಮವಾರ ಅಯೋಧ್ಯೆಯಲ್ಲಿ ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಅಂಗವಾಗಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ಎಂಡಿ ಮುಖೇಶ್ ಅಂಬಾನಿ ಅವರ ಮನೆ ‘ಆಂಟಿಲಿಯಾ’ ಗೆ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಮನೆ ಮೇಲೆ ‘ಜೈ ಶ್ರೀ ರಾಮ್’ ಬರಹಗಳು ಗಮನ ಸೆಳೆದವು.
ಸೋಮವಾರ ನಡೆಯಲಿರುವ ಅಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠಾ ಸಮಾರಂಭಕ್ಕೂ ಮುನ್ನ ಜನಸೇನಾ ಮುಖ್ಯಸ್ಥ, ತೆಲುಗು ನಟ ಪವನ್ ಕಲ್ಯಾಣ್ ಲಕ್ನೋಗೆ ಆಗಮಿಸಿದ್ದಾರೆ. “ಇದು ಜನರ ಬಹುದಿನಗಳ ಕನಸಾಗಿದ್ದು, 500 ವರ್ಷಗಳ ನಂತರ ಅಂತಿಮವಾಗಿ ನನಸಾಗುತ್ತಿದೆ, ತುಂಬಾ ಸಂತೋಷವಾಗಿದ್ದೇವೆ” ಎಂದು ಹೇಳಿದ್ದಾರೆ.
ಅಯೋಧ್ಯೆಯ ರಾಮಮಂದಿರದ ಬಹು ನಿರೀಕ್ಷಿತ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೂವು, ದೀಪಗಳಿಂದ ಇಡೀ ಅಯೋಧ್ಯೆ ನಗರ ಸಿಂಗಾರಗೊಂಡಿದೆ. ಭಾನುವಾರ ರಾತ್ರಿ ದೀಪಗಳ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ರಾಮ ಮಂದಿರ.
ಅಯೋಧ್ಯೆಯ ರಾಮಮಂದಿರದ ಬಹು ನಿರೀಕ್ಷಿತ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ಜಗತ್ತಿನಾದ್ಯಂತ ಹಿಂದೂ ಸಮುದಾಯದವರು ಈ ಐತಿಹಾಸಿಕ ಸಂದರ್ಭದಲ್ಲಿ ಭವ್ಯವಾದ ಆಚರಣೆಗಳಿಗೆ ಸಜ್ಜಾಗುತ್ತಿದ್ದಾರೆ. ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
5 ಗಂಟೆಗಳ ಕಾಲ ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು 5 ಗಂಟೆಗಳ ಅಯೋಧ್ಯೆಯಲ್ಲಿ ಇರಲಿದ್ದು, ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಪೂಜೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 10:55 ರಾಮ ಜನ್ಮಭೂಮಿಗೆ ಆಗಮಿಸಲಿರುವ ಪ್ರಧಾನಿ ಮೋದಿ 11 ಗಂಟೆಯಿಂದ 12ರವರೆಗೆ ರಾಮಮಂದಿರವನ್ನು ವೀಕ್ಷಣೆ ಮಾಡಲಿದ್ದಾರೆ. ಬಳಿಕ 12:05 ರಿಂದ 12:55 ರವರೆಗೆ ಸುಮಾರು 50 ನಿಮಿಷಗಳ ಕಾಲ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಬಳಿಕ ಸಾರ್ವಜನಿಕ ಸಭೆಯಲ್ಲಿ ರಾಮಮಂದಿರವನ್ನು ಉದ್ದೇಶಿಸಿ ಮಾತನಾಡಿ, 2:10ಕ್ಕೆ ಶಿವಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ವಾಪಸ್ ದೆಹಲಿಗೆ ತೆರಳಲಿದ್ದಾರೆ