ರಾಜ್ಯದಲ್ಲಿ ಐಟಿ ದಾಳಿಗೆ ಬೆಚ್ಚಿ ಬಿತ್ತಾ ಕಾಂಗ್ರೆಸ್ ? ಫ್ರೀಡಂ ಪಾರ್ಕನಲ್ಲಿ ಆರ್. ಅಶೋಕ್ ಏನಂದ್ರು ಗೊತ್ತೆ?
ಬೆಂಗಳೂರು: ರಾಜ್ಯದಲ್ಲಿ ಐಟಿ ದಾಳಿಯಿಂದ ಕಾಂಗ್ರೆಸ್ ಹೈಕಮಾಂಡ್ ನಡುಗಿದೆ. ಈ ಕಾರಣಕ್ಕಾಗಿ ಹೈಕಮಾಂಡ್ ನಾಯಕರು ರಾಜ್ಯದಲ್ಲಿ ಬೀಡು ಬಿಟ್ಟು, ವಸೂಲಿ ಕಡಿಮೆ ಮಾಡಿ ಎಂದು ಒಬ್ಬೊಬ್ಬರನ್ನು ಕರೆದು ಸೂಚನೆ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ವಸೂಲಿ ಜಾಸ್ತಿ ಆಯ್ತು, ಕಡಿಮೆ ಮಾಡಿ ಎಂದು ಒಬ್ಬೊಬ್ಬರನ್ನು ಕರೆದು ಹೇಳ್ತಿದ್ದಾರೆ. ಹುಷಾರಾಗಿ ವಸೂಲಿ ಮಾಡಿ ಎಂದು ಹೇಳ್ತಿದ್ದಾರೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ ಕೋಟಿ ಕೋಟಿ ಲೂಟಿ ಮಾಡ್ತಿದ್ದಾರೆ. ಕಳೆದ ನಾಲ್ಕೈದು ತಿಂಗಳ ಕಾಲ ಯಾವುದೇ ಇಲಾಖೆಯಲ್ಲಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಆಗಿರಲಿಲ್ಲ. ಕಾಮಗಾರಿ ತನಿಖೆಯ ಬಳಿಕ ಹಣ ಬಿಡುಗಡೆ ಮಾಡುತ್ತೇವೆ ಎಂದಿದ್ದರು. ಆದರೆ ಅಸಲಿ ವಿಚಾರ ಕಮಿಷನ್ ಆಗಿದೆ ಎಂದು ಆರೋಪಿಸಿದರು.
ಕರ್ನಾಟಕದ ಹಣ ಬೆಂಗಳೂರಿಗೆ ಬಂದು ಶೇಖರಣೆ ಆಗಿ, ನಂತರ ತೆಲಂಗಾಣ ಹಾಗೂ ಮಧ್ಯ ಪ್ರದೇಶಕ್ಕೆ ಹಣ ರವಾನೆ ಆಗುತ್ತಿದೆ. ಎರಡು ರಾಜ್ಯಗಳನ್ನು ಕಾಂಗ್ರೆಸ್ ದತ್ತು ಪಡೆದುಕೊಂಡಿದೆ. ಆಂಧ್ರಪ್ರದೇಶ ಹಾಗೂ ಮಧ್ಯಪ್ರದೇಶಕ್ಕೆ ಟ್ರಕ್ ಗಳ ಮೂಲಕ ಹಣ ರವಾನೆ ಮಾಡುವ ಪ್ಲ್ಯಾನ್ ಇತ್ತು, ಇದಕ್ಕಾಗಿ ಹಣ ಶೇಖರಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಬರಗೆಟ್ಟು ಹೋಗಿದೆ. ಕರ್ನಾಟಕ ಅವರ ಪಾಲಿಗೆ ಎಟಿಎಂ ಆಗಿದೆ. ಕಮಿಷನ್ ಮೂಲಕ ಹಣ ಹೊಡೆಯುತ್ತಿದ್ದಾರೆ. ಅವರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ಇನ್ಫೋಸಿಸ್ ಅಧ್ಯಕ್ಷೆ ಡಾ. ಸುಧಾಮೂರ್ತಿ ಹೆಸರು ಬಳಸಿ ವಂಚನೆ: ಜಯನಗರ ಪೊಲೀಸರಿಂದ ಆರೋಪಿ ಬಂಧನ
ಬೆಂಗಳೂರು: ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಸುಧಾ ಮೂರ್ತಿ ಹೆಸರನ್ನು ದುರ್ಬಳಕೆ ಮಾಡಿಕೊಂಡು ವಂಚಿಸಿದ ಪ್ರಕರಣದಲ್ಲಿ ಆರೋಪಿಯನ್ನು ಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರ ನಿವಾಸಿ ಅರುಣ್ ಸುದರ್ಶನ್(40) ಬಂಧಿತ ಆರೋಪಿ. ಅಮೆರಿಕದಲ್ಲಿ ನಡೆಯುವ ಕಾರ್ಯಕ್ರಮವೊಂದಕ್ಕೆ ಡಾ. ಸುಧಾಮೂರ್ತಿ ಅವರು ಮುಖ್ಯ ಅತಿಥಿಯಾಗಿ ಬರಲಿದ್ದಾರೆಂದು ಸುಳ್ಳು ಪ್ರಚಾರ ಮಾಡಿ, ಕಾರ್ಯಕ್ರಮದ ಟಿಕೆಟ್‌ಗೆ ತಲಾ 40 ಡಾಲರ್ ಪಡೆದು ಜನರಿಗೆ ವಂಚಿಸಿದ್ದರು. ಈ ಸಂಬಂಧ ಸುಧಾ ಮೂರ್ತಿಯವರ ಆಪ್ತ ಸಹಾಯಕಿ ಮಮತಾ ಸಂಜಯ್ ಅವರು ಲಾವಣ್ಯ ಮತ್ತು ಶೃತಿ ಎಂಬುವವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿ ಅರುಣ್ ಸುದರ್ಶನ್ ಹಾಗೂ ಅಮೆರಿಕದಲ್ಲಿ ವಾಸವಾಗಿರುವ ಶೃತಿಯ ಪತಿ ಸಂಬಂಧಿಗಳಾಗಿದ್ದು, ಕಾರಣಾಂತರಗಳಿಂದ ಎರಡು ಕುಟುಂಬಗಳ ಮಧ್ಯೆ ಮನಸ್ತಾಪ ಉಂಟಾಗಿ ದೂರವಾಗಿದ್ದರು. ಅಮೆರಿಕದಲ್ಲಿದ್ದ ಶೃತಿ ದಂಪತಿ ಕಳೆದ 10 ವರ್ಷಗಳಿಂದ ಅರುಣ್ ಜೊತೆ ಸಂಪರ್ಕ ಕಳೆದುಕೊಂಡಿದ್ದರು. ಹೀಗಾಗಿ ಅರುಣ್, ಶೃತಿ ದಂಪತಿ ವಿರುದ್ಧ ದ್ವೇಷ ಸಾಧಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕನ್ನಡ ಕೂಟ ಆಫ್ ನಾರ್ತನ್ ಕ್ಯಾಲಿಫೋರ್ನಿಯಾ ಅಮೆರಿಕದಲ್ಲಿ ಸೆ.26ರಂದು ಮೀಟ್ ಆ್ಯಂಡ್ ಗ್ರೀಟ್ ವಿತ್ ಡಾ. ಸುಧಾಮೂರ್ತಿ ಎಂಬ ಕಾರ್ಯಕ್ರಮ ಆಯೋಜಿಸಲು ಯೋಚಿಸಿತ್ತು. ಈ ಹಿನ್ನೆಲೆಯಲ್ಲಿ ನಗರದಲ್ಲಿದ್ದ ಸಂಬಂಧಿ ಅರುಣ್‌ಗೆ ಕರೆ ಮಾಡಿ ಶೃತಿ ಮಾಹಿತಿ ನೀಡಿದ್ದರು. ಜೊತೆಗೆ ಈ ಕಾರ್ಯಕ್ರಮಕ್ಕೆ ಡಾ.ಸುಧಾಮೂರ್ತಿ ಅವರನ್ನು ಮುಖ್ಯ ಅತಿಥಿಯಾಗಿಸಲು ಸಾಧ್ಯವೇ ಎಂದು ಅರುಣ್‌ಗೆ ಶೃತಿ ಕೇಳಿದ್ದರು. ಇದಕ್ಕೆ ಒಪ್ಪಿದ ಅರುಣ್, ಶೃತಿ ದಂಪತಿ ಗೌರವಕ್ಕೆ ಚ್ಯುತಿ ತರಲು ಇದೇ ಸರಿಯಾದ ಸಮಯ ಎಂದು ನಿರ್ಧರಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುಧಾಮೂರ್ತಿ ಅವರಿಗೆ ಆಪ್ತ ಸಹಾಯಕಿಯಾಗಿರುವ ಲಾವಣ್ಯ ಜೊತೆಗೆ ಮಾತನಾಡಿದ್ದೇನೆ. ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದಾರೆ ಎಂದು ಶೃತಿ ದಂಪತಿಗೆ ಅರುಣ್ ಸುಳ್ಳು ಹೇಳಿದ್ದ. ಜೊತೆಗೆ ಸುಧಾಮೂರ್ತಿ ಅವರು ಅಮೆರಿಕಕ್ಕೆ ಬರುತ್ತಾರೆ ಎಂದು ಅವರ ವಿಮಾನದ ಟಿಕೆಟ್ ಹಾಗೂ ಅವರ ಖರ್ಚು ವೆಚ್ಚಕ್ಕಾಗಿ ಒಟ್ಟು 5 ಲಕ್ಷ ರೂ. ಪಡೆದಿದ್ದರು. ವಾಸ್ತವದಲ್ಲಿ ಸುಧಾಮೂರ್ತಿ ಅವರಿಗೆ ಲಾವಣ್ಯ ಎಂಬ ಆಪ್ತ ಸಹಾಯಕಿಯೇ ಇಲ್ಲ. ವಂಚಿಸುವುದಕ್ಕಾಗಿ ಅರುಣ್ ಸೃಷ್ಟಿಸಿರುವ ಹೆಸರಿದು ಎಂದು ತನಿಖೆಯಲ್ಲಿ ಗೊತ್ತಾಗಿದೆ.
ಕಾರ್ಯಕ್ರಮಕ್ಕೆ ಸುಧಾಮೂರ್ತಿ ಬರುತ್ತಾರೆ ಎಂದು ಹೇಳಿದ್ದ ಅರುಣ್ ಮಾತು ನಂಬಿ ಶೃತಿ ದಂಪತಿಯು ಕಾರ್ಯಕ್ರಮದ ಕುರಿತು ಹಲವು ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತನ್ನೂ ನೀಡಿದ್ದರು. ಇದನ್ನು ಗಮನಿಸಿದ್ದ ಸುಧಾ ಮೂರ್ತಿಯವರ ಆಪ್ತ ಸಹಾಯಕಿ ಮಮತಾ, ಸುಧಾಮೂರ್ತಿ ಹೆಸರು ದುರ್ಬಳಕೆ ಮಾಡಿಕೊಂಡು ಹಣ ಸಂಗ್ರಹಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ತನಿಖೆ ಕೈಗೊಂಡು ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.