ಕಾಂಗ್ರೆಸ್ ಭಿನ್ನಮತ ಶಮನ; ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಪುನಾರಚನೆ!
ಹೊಸದಿಲ್ಲಿ: ಎಐಸಿಸಿ ಅಧ್ಯಕ್ಷ ಸ್ಥಾನವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ)ಯನ್ನು ಪುನಾರಚಿಸಿದ್ದಾರೆ. ವರ್ಷಾಂತ್ಯದಲ್ಲಿ ನಡೆಯಲಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು 2024ರ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದಿದೆ.
ಹೊಸ ಸಮಿತಿಯ 84 ಮಂದಿ ಸದಸ್ಯರ ಪಟ್ಟಿಯನ್ನು ರವಿವಾರ ಬಿಡುಗಡೆಗೊಳಿಸಲಾಗಿದ್ದು, ಖರ್ಗೆ ಅವರನ್ನು ಹೊರತುಪಡಿಸಿ ಕರ್ನಾಟಕದ ಮೂವರು ನಾಯಕರು ಸ್ಥಾನ ಪಡೆದಿದ್ದಾರೆ.
ಜಿ23 ಗುಂಪಿನ ಶಶಿ ತರೂರ್, ಮುಕುಲ್ ವಾಸ್ನಿಕ್, ಮನೀಷ್ ತಿವಾರಿ ಮತ್ತು ಆನಂದ್ ಶರ್ಮಾ ಅವರಿಗೂ ಸಿಡಬ್ಲ್ಯುಸಿಯಲ್ಲಿ ಸ್ಥಾನ ದಕ್ಕಿದೆ. ಒಟ್ಟು 39 ಮಂದಿ ಸಾಮಾನ್ಯ ಸದಸ್ಯರು, 32 ಖಾಯಂ ಆಹ್ವಾನಿತರು, 13 ವಿಶೇಷ ಆಹ್ವಾನಿತರು ಇದ್ದು, ಹಲವು ಯುವ ಮುಖಗಳು, 15 ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ.
ಮುಂಬರುವ ಚುನಾವಣೆಗಳ ವೇಳೆಗೆ ಪಕ್ಷದೊಳಗಿನ ಬಿಕ್ಕಟ್ಟುಗಳೆಲ್ಲ ಶಮನಗೊಳಿಸಿ, ನಾಯಕರ ನಡುವಿನ ವೈಮನಸ್ಸಿಗೆ ಅಂತ್ಯಹಾಡಿ, ಒಗ್ಗಟ್ಟಾಗಿ ಚುನಾವಣೆ ಎದುರಿಸುವ ಲೆಕ್ಕಾಚಾರ ಹಾಕಿಕೊಂಡಿರುವುದು ಈ ಪುನಾರಚನೆಯಿಂದ ಸ್ಪಷ್ಟವಾಗಿದೆ.
ಕೆಲವರಿಗೆ ಭಾರತದ ಅಸ್ಮಿತೆಯ ಬಗ್ಗೆ ಅಸಹನೆ; ಚಂದ್ರಯಾನ ಕುರಿತ ಪ್ರಕಾಶ್ ರಾಜ್ ಟ್ವೀಟ್ಗೆ ಸಿಟಿ ರವಿ ಕಿಡಿ
ಬೆಂಗಳೂರು, ಆಗಸ್ಟ್ 21: ಚಂದ್ರಯಾನ-3 ರ ಬಗ್ಗೆ ನಟ ಪ್ರಕಾಶ್ ರಾಜ್ (Prakash Raj) ವ್ಯಂಗ್ಯದ ಟ್ವೀಟ್ ಮಾಡಿರುವುದಕ್ಕೆ ಬಿಜೆಪಿ ನಾಯಕ ಸಿಟಿ ರವಿ (CT Ravi) ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಲವರಿಗೆ ಭಾರತದ ಅಸ್ಮಿತೆಯ ಬಗ್ಗೆ ಅಸಹನೆ ಇದೆ. ಅಂಥವರಿಗೆ ಚಂದ್ರಯಾನ ಯಶಸ್ವಿಯಾಗುತ್ತದೆ ಎಂದು ಸಂಕಟ ಶುರುವಾಗಿದೆ. ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಯಶಸ್ವಿಯಾದರೆ ಇವರಿಗೆ ಸಂಕಟ. ಕೆಲವರಿಗೆ ಹಿಂದುಗಡೆ ಮೆಣಸಿನಕಾಯಿ ಇಟ್ಟುಕೊಂಡ ರೀತಿ ಆಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಚಂದ್ರಯಾನ-3 ಲ್ಯಾಂಡಿಂಗ್ಗೆ ಎರಡು ದಿನ ಬಾಕಿ ಇರುವಾಗ ಪ್ರಕಾಶ್ ರಾಜ್ ಇಸ್ರೋದ ಮಾಜಿ ಮುಖ್ಯಸ್ಥ ಕೆ ಶಿವನ್ ಅವರನ್ನು ಅಪಹಾಸ್ಯ ಮಾಡಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಹತ್ತಾರು ಮಂದಿ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯಾ. ನಾಗಮೋಹನ್ ದಾಸ್ ಕಾಂಗ್ರೆಸ್ ಮರ್ಜಿಯಲ್ಲಿರುವವರು; ಸಿಟಿ ರವಿ
ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದಿದ್ದ 40% ಕಮಿಷನ್ ಬಗ್ಗೆ ನ್ಯಾ. ನಾಗಮೋಹನ್ ನೇತೃತ್ವದಲ್ಲಿ ತನಿಖೆ ನಡೆಸುವುದಕ್ಕೆ ಸಿಟಿ ರವಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಮೇಲೆ ನಂಬಿಕೆ ಇಲ್ಲ. ನ್ಯಾ. ನಾಗಮೋಹನ್ ದಾಸ್ ಕಾಂಗ್ರೆಸ್ ಮರ್ಜಿಯಲ್ಲಿರುವವರು. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲು ಅವಕಾಶ ಇದೆ ಎಂದು ಅವರು ಹೇಳಿದ್ದಾರೆ.
ಡಿಕೆ ಶಿವಕುಮಾರ್ಗೆ ತಿರುಗೇಟು
ಕೋಳಿ ಕೇಳಿ ಮಸಾಲೆ ಅರೆಯಲು ಆಗುತ್ತಾ ಎಂಬ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಸಿಟಿ ರವಿ, ಮಸಾಲೆ ಅರೆಯೋದು ಅವರಿಗೆ ಮಾತ್ರ ಗೊತ್ತಿರುವ ವಿದ್ಯೆಯಲ್ಲ. ನಾವೂ ಮಸಾಲೆ ಅರೆಯುತ್ತೇವೆ. ನಮಗೂ ಅರೆಯಲು ಬರುತ್ತದೆ. ಮಲೆನಾಡಿನ ಅಡುಗೆ ತಿಂದವರಿಗೆ ಇದು ಗೊತ್ತು ಎಂದು ಹೇಳಿದ್ದಾರೆ.
ಕೆಲವು ಮಂದಿ ನಾಯಕರು ಬಿಜೆಪಿ ಬಿಟ್ಟು ಹೋಗುತ್ತಾರೆ ಅನ್ನೋದು ಊಹಾಪೋಹ. ಅಧಿಕಾರ ಇಲ್ಲದಾಗಲೂ ಸೈದ್ಧಾಂತಿಕವಾಗಿ ಬದ್ಧರಾಗಿ ಪಕ್ಷ ಕಟ್ಟಿದ್ದೇವೆ. ಯಾರೂ ಕೂಡ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಶಾಸಕರು ಹಾಗೂ ಸಚಿವರ ನಡುವೆ ವರ್ಗಾವಣೆಗಾಗಿ ಗಲಾಟೆ ನಡೀತಿದೆ. ಎಸ್ಸಿಪಿ, ಟಿಎಸ್ಪಿ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಜಾಲತಾಣದಲ್ಲಿ ಅಭಿಪ್ರಾಯ ಹೊರಹಾಕಿದವರ ವಿರುದ್ಧವೂ ಕೇಸ್ ದಾಖಲಿಸಲಾಗುತ್ತಿದೆ. ಅಭಿಪ್ರಾಯ ಹೊರಹಾಕಿದವರ ವಿರುದ್ಧ ಕೇಸ್ ದಾಖಲಿಸುತ್ತಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಬೃಹತ್ ಹೋರಾಟ ನಡೆಸಲಾಗುವುದು. ಆಗಸ್ಟ್ 28 ರಂದು ಬೆಂಗಳೂರಿನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಸೆಪ್ಟೆಂಬರ್ 8ರ ವರೆಗೆ ಜಿಲ್ಲಾಮಟ್ಟದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ರವಿ ಹೇಳಿದ್ದಾರೆ.