ಬಸ್‌ನಲ್ಲಿ ಮಹಿಳೆಗೆ ಥಳಿಸಿದ ಆರೋಪ ಕಂಡಕ್ಟರ್ ಅಮಾನತು; ಇಲ್ಲಿದೆ ಘಟನೆಯ ವಿಡಿಯೊ
ಮಂಗಳವಾರ ಬೆಳಗ್ಗೆ ಬಸ್ ಒಂದರಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದ ಹಿನ್ನೆಲೆಯಲ್ಲಿ ಆರೋಪಿ ಬಸ್ ಕಂಡಕ್ಟರ್‌ನನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದ್ದು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಿಳೇಕಲ್ಲಿನಿಂದ ಶಿವಾಜಿನಗರಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಸಂಚರಿಸುತ್ತಿದ್ದ ಮಹಿಳೆಯೊಬ್ಬರು ಬಿಎಂಟಿಸಿ ಬಸ್ ಕಂಡಕ್ಟರ್ ಜೊತೆ ವಾಗ್ವಾದಕ್ಕಿಳಿದ ಘಟನೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿಎಂಟಿಸಿಯ ಡಿಪೋ ಸಂಖ್ಯೆ 34ಕ್ಕೆ ಸೇರಿದ KA 57 F 1602 ಬಸ್‌ನಲ್ಲಿ ಈ ಘಟನೆ ನಡೆದಿದೆ. ಪ್ರಕರಣ ಸಂಬಂಧ 28 ಸೆಕೆಂಡ್‌ನ ವಿಡಿಯೋ ಆಧರಿಸಿ, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಘಟನೆ ಸಾಮಾಜಿಕ ಜಾಲತಣಾದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮಂಗಳವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಬಸ್ ಕಂಡಕ್ಟರ್ ಅನ್ನು ಅಮಾನತುಗೊಳಿಸಲಾಗಿದೆ. ಘಟನೆಯ ವೀಡಿಯೋದಲ್ಲಿ ಕಂಡಕ್ಟರ್ ಮತ್ತು ಮಹಿಳೆ ಜಗಳವಾಡುವುದನ್ನು ನೋಡಬಹುದು. ಸ್ವಲ್ಪ ಸಮಯದ ನಂತರ ಮಹಿಳೆ ಕಂಡಕ್ಟರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಪ್ರತೀಕಾರವಾಗಿ, ಕಂಡಕ್ಟರ್ ಮಹಿಳೆಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.
A #BMTC bus conductor assaulted a woman passenger after she slapped him over a dispute about buying a ticket in in #Bengaluru's #Siddapura police limits on Tuesday. The incident was recorded on a mobile phone camera and the conductor has since been suspended.
— Hate Detector 🔍 (@HateDetectors) March 26, 2024
The woman… pic.twitter.com/sgVjGtCVyO
ಬಸ್ ಪ್ರಯಾಣದ ಟಿಕೆಟ್ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿತ್ತು. ಈ ವಿಷಯದ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಆಧರಿಸಿ, ಕಂಡಕ್ಟರ್ ಹೊನ್ನಪ್ಪ ನಾಗಪ್ಪ ಅಗಸರ ವಿರುದ್ಧ ಶಿಸ್ತು ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಬಿಎಂಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
“ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಬಸ್‌ಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಆಸನ, ಪ್ರತ್ಯೇಕ ಬಾಗಿಲು, ಪ್ಯಾನಿಕ್ ಬಟನ್ ಅಳವಡಿಕೆ, ಸಿಸಿಟಿವಿ, ಮಾಹಿತಿ ಫಲಕ ಅಳವಡಿಕೆ, ಪ್ರಮುಖ ಬಸ್ ನಿಲ್ದಾಣಗಳಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ, ಸಹಾಯವಾಣಿ ಮುಂತಾದ ಕ್ರಮಗಳನ್ನು ನಿಗಮ ಕೈಗೊಂಡಿದೆ. ಮಹಿಳಾ ಪ್ರಯಾಣಿಕರು ಕಂಪನಿಯ ಬಸ್‌ಗಳಲ್ಲಿ ಸುರಕ್ಷಿತವಾಗಿ ಪ್ರಯಾಣಿಸುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ” ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ಹೇಳಿದೆ.
ಮಹಿಳಾ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಆರಾಮದಾಯಕ ಭಾವನೆ ಮೂಡಿಸಲು ಎಲ್ಲಾ 27,000 ಡ್ರೈವಿಂಗ್ ಸಿಬ್ಬಂದಿಗೆ ಲಿಂಗ ಸಂವೇದನೆ ತರಬೇತಿಯನ್ನು ನೀಡಲಾಗುತ್ತಿದೆ. ನಮ್ಮ ನಿಗಮವು ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿದ್ದು, ಮಹಿಳಾ ಪ್ರಯಾಣಿಕರ ವಿರುದ್ಧ ಯಾವುದೇ ರೀತಿಯ ದೌರ್ಜನ್ಯ, ಅಸಭ್ಯ ವರ್ತನೆ ಮತ್ತು ಅಹಿತಕರ ಘಟನೆಗಳಿಗೆ ತಪ್ಪಿತಸ್ಥರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದೆ. ಇನ್ನು, ಘಟನೆಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಹಲವಾರು ಇಂಟರ್ನೆಟ್ ಬಳಕೆದಾರರು ಮಹಿಳೆ ಮೊದಲು ಕಂಡಕ್ಟರ್‌ಗೆ ಹೊಡೆದಿದ್ದಾರೆ ಹೀಗಾಗಿ ಅವರು ವಾಪಸ್ ಹೊಡೆದಿದ್ದಾರೆ ಎಂದಿದ್ದಾರೆ.