ಬಿಗ್ ಬಾಸ್ ಸ್ಪರ್ಧಿ ಮತ್ತು ನಟಿ ತನಿಷಾ ಕುಪ್ಪಂದ ವಿರುದ್ಧ ದೂರು ದಾಖಲು ; ಆರೋಪವೇನು...?
ಬಿಗ್ಬಾಸ್ ಕನ್ನಡ ಸೀಸನ್ 10ರ (Bigg Boss) ಮತ್ತೊಬ್ಬ ಸ್ಪರ್ಧಿಯ ವಿರುದ್ಧ ದೂರು ದಾಖಲಾಗಿದೆ. ಈ ಹಿಂದೆ ಸ್ಪರ್ಧಿ ವರ್ತೂರು ಸಂತೋಷ್ ವಿರುದ್ಧ ದೂರು ದಾಖಲಾಗಿ ಅವರು ಜೈಲಿಗೆ ಸಹ ಹೋಗಿ, ಈಗ ಮತ್ತೆ ಬಿಗ್ಬಾಸ್ ಮನೆಗೆ ಬಂದು ಆಟ ಆಡುತ್ತಿದ್ದಾರೆ. ಇದೀಗ ವರ್ತೂರು ಸಂತೋಷ್ ಜೊತೆ ಬಿಗ್ಬಾಸ್ ಮನೆಯಲ್ಲಿ ಆತ್ಮೀಯವಾಗಿರುವ ತನಿಷಾ ಕುಪ್ಪಂಡ ಅವರು ವಿವಾದಕ್ಕೆ ಸಿಲುಕಿದ್ದು, ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತನಿಷಾ ಕುಪ್ಪಂಡ, ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಯೊಬ್ಬರ ಬಗ್ಗೆ ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗಿನ ಎಪಿಸೋಡ್ ಒಂದರಲ್ಲಿ ವರ್ತೂರು ಸಂತೋಷ್ ಬಗ್ಗೆ ಮಾತನಾಡುತ್ತಾ, ”ನೀನು ವಡ್ಡ ಅಲ್ಲ ಆದರೆ ವಡ್ಡನ ರೀತಿ ಆಕ್ಟ್ ಮಾಡುತ್ತೀಯ” ಎಂದಿದ್ದರು. ತನಿಷಾರ ಈ ಮಾತುಗಳು ಭೋವಿ ಸಮುದಾಯದ ಸದಸ್ಯರನ್ನು ಕೆರಳಿಸಿದ್ದು, ಜಾತಿ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ತನಿಷಾ ವಿರುದ್ಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
”ತನಿಷಾ, ವಡ್ಡ ಎಂಬ ಪದ ಬಳಸೂವ ಮೂಲಕ ಭೋವಿ ಸಮುದಾಯಕ್ಕೆ ಅಪಮಾನ ಎಸಗಿದ್ದಾರೆ. ಭೋವಿ ಸಮುದಾಯವು ಪರಿಶಿಷ್ಟ ಜಾತಿಗೆ ಸೇರಿದೆ ಎಂದು ತಿಳಿದೂ ಸಹ ಅಪಮಾನ ಮಾಡಲಾಗಿದೆ. ತನಿಷಾ ಅವರನ್ನು ಈ ಕೂಡಲೇ ಬಿಗ್ಬಾಸ್ ಮನೆಯಿಂದ ಹೊರಗೆ ಕಳಿಸಬೇಕು, ಪೊಲೀಸರು ತನಿಷಾರನ್ನು ಬಂಧಿಸಬೇಕು. ಭೋವಿ ಸಮುದಾಯಕ್ಕೆ ಮಾಡಲಾದ ಅಪಮಾನದ ವಿರುದ್ಧ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಭೋವಿ ಸಮುದಾಯವು ಪ್ರತಿಭಟನೆ ನಡೆಸಲಿದೆ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರು ಸ್ವೀಕರಿಸಿರುವ ಕುಂಬಳಗೋಡು ಪೊಲೀಸ್ ಠಾಣೆ ಸಿಬ್ಬಂದಿ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಬಿಗ್ಬಾಸ್ ಮನೆಯಲ್ಲಿರುವ ತನಿಷಾಗೆ ನೊಟೀಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಬಿಗ್ಬಾಸ್ ಮನೆಯಲ್ಲಿಯೇ ತನಿಷಾ ಹೇಳಿಕೆ ದಾಖಲಿಸುತ್ತಾರಾ ಅಥವಾ ಹೊರಗೆ ಬಂದು ಠಾಣೆಗೆ ಭೇಟಿ ನೀಡುತ್ತಾರಾ ಕಾದು ನೋಡಬೇಕಿದೆ.
ಇತ್ತೀಚೆಗೆ ನಟ, ನಿರ್ದೇಶಕ ಉಪೇಂದ್ರ, ಲೈವ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪದವೊಂದನ್ನು ಬಳಕೆ ಮಾಡಿದ್ದು ಸಹ ವಿವಾದಕ್ಕೆ ಕಾರಣವಾಗಿತ್ತು. ಉಪೇಂದ್ರ ವಿರುದ್ಧ ದಲಿತಪರ ಸಂಘಟನೆಗಳು ದೂರು ನೀಡಿದ್ದವು. ಆ ಕುರಿತು ಉಪೇಂದ್ರ ಕ್ಷಮೆಯನ್ನೂ ಸಹ ಕೇಳಿದ್ದರು. ಅದಕ್ಕೂ ಮುನ್ನ ಪ್ರಶಾಂತ್ ಸಂಬರ್ಗಿ ಬಿಗ್ಬಾಸ್ ಮನೆಯಲ್ಲಿದ್ದಾಗ ರೂಪೇಷ್ ರಾಜಣ್ಣ ಅವರ ಮೆಲೆ ಜಗಳವಾಡುತ್ತಾ ಕನ್ನಡಪರ ಸಂಘಟನೆಗಳ ಬಗ್ಗೆ ಅಗೌರವವಾಗಿ ಮಾತನಾಡಿದ್ದಾಗಲೂ ಕನ್ನಡಪರ ಸಂಘಟನೆಗಳವರು ಸಂಬರ್ಗಿ ವಿರುದ್ಧ ದೂರು ಸಲ್ಲಿಸಿದ ಜೊತೆಗೆ ಬಿಗ್ಬಾಸ್ ಮನೆಯ ಮುಂದೆ ಪ್ರತಿಭಟನೆ ಸಹ ನಡೆಸಿದ್ದರು.