ಕಾಲೇಜು ವಿದ್ಯಾರ್ಥಿಗಳ ಕರ್ಕಶ ಧ್ವನಿಯ ಬೈಕ್ ಹುಚ್ಚಾಟಕ್ಕೆ ಸುಬ್ರಹ್ಮಣ್ಯ ಪೊಲೀಸರು ಬ್ರೇಕ್
ಸುಬ್ರಹ್ಮಣ್ಯ: ಕರ್ಕಶ ಧ್ವನಿ ಹೊರಡಿಸುವ ಸೈಲೆನ್ಸರ್ ಜೋಡಿಸಿ ಶರವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳ ಹುಚ್ಚಾಟಕ್ಕೆ ಸುಬ್ರಹ್ಮಣ್ಯ ಪೊಲೀಸರು ಬ್ರೇಕ್ ಹಾಕಿದ್ದಾರೆ.
ಸುಬ್ರಹ್ಮಣ್ಯದ ಕಾಲೇಜಿಗೆ ಬರುವ ಕೆಲ ವಿದ್ಯಾರ್ಥಿಗಳು ಕಾಲೇಜು ಬಿಡುವ ಹೊತ್ತಿನಲ್ಲಿ ಕರ್ಕಶ ಧ್ವನಿ ಹೊರಡಿಸುವ ಬೈಕ್ ನಲ್ಲಿ ಅತೀ ವೇಗದಲ್ಲಿ ಸಂಚಾರಿಸುವುದನ್ನು ಪೊಲೀಸರು ಗಮನಿಸಿದ್ದರು. ಸವಣೂರು ಹಾಗೂ ಸುಬ್ರಹ್ಮಣ್ಯ ಭಾಗದ ಕೆಲ ಯುವಕರು ಸಂಚಾರ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸುವುದನ್ನು ತಿಳಿದು ಕೆ. ಎಸ್. ಎಸ್. ಕಾಲೇಜ್ ಬೈಕನ್ನು ತಡೆದು ನಿಲ್ಲಿಸಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಪೊಲೀಸರು ಮೆಕ್ಯಾನಿಕ್ ಬರ ಹೇಳಿ ಕರ್ಕಶ ಧ್ವನಿ ಬರುವ ಸೈಲೆನ್ಸರ್ ತೆಗೆಸಿ ಹೊಸ ಸೈಲೆನ್ಸರ್ ಜೋಡಿಸಿದ್ದಾರೆ. ಜೊತೆಗೆ ದಂಡವನ್ನೂ ವಸೂಲಿ ಮಾಡಿರುವುದಾಗಿ ತಿಳಿದು ಬಂದಿದೆ.
ನೆಲ್ಯಾಡಿ: ಕೊಣಾಲು ಗ್ರಾಮದ ಸಾರ್ವಜನಿಕ ರಸ್ತೆ ಬಂದ್ ಮಾಡಿದ ವ್ಯಕ್ತಿ :ಗ್ರಾಮಸ್ಥರ ದೂರಿಗೆ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತರು
ನೆಲ್ಯಾಡಿ: ಕೊಣಾಲು ಗ್ರಾಮದ ಕೋಲ್ಪೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 75ರಿಂದ ಕಡೆಂಬಿಲ ಎಂಬಲ್ಲಿಗೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆ ಬಂದ್ ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತ ಗಿರೀಶ್ ನಂದನ್ರವರು ಆ.4ರಂದು ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಡೆಂಬಿಲದಿಂದ ಕೋಲ್ಪೆ ಮೂಲಕ ರಾಷ್ಟ್ರೀಯ ಹೆದ್ದಾರಿ ೭೫ಕ್ಕೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆ ಸುಮಾರು 80 ವರ್ಷಗಳಿಂದ ಬಳಕೆಯಲ್ಲಿದ್ದು, ಇದೀಗ ರಸ್ತೆ ಪಕ್ಕದ ಜಾಗವನ್ನು ಕೇರಳ ಮೂಲದ ವ್ಯಕ್ತಿಯೊಬ್ಬರು ಖರೀದಿಸಿದ್ದು, ಈ ಜಾಗಕ್ಕೆ ರಾಷ್ಟ್ರೀಯ ಹೆದ್ದಾರಿಗಿಂತಲೂ ಎತ್ತರವಾಗಿ ಮಣ್ಣು ತುಂಬಿಸಿದ್ದಾರೆ. ಇದರಿಂದಾಗಿ ಸಾರ್ವಜನಿಕರು ಬಳಕೆ ಮಾಡುತ್ತಿದ್ದ ರಸ್ತೆ ಮುಚ್ಚಿ ಹೋಗಿದ್ದು, ಈ ರಸ್ತೆಯ ಸುಮಾರು 200 ಮೀ.ಗೆ ಜಿ.ಪಂ.ಅನುದಾನದಿಂದ ಮಾಡಲಾಗಿದ್ದ ಕಾಂಕ್ರಿಟೀಕರಣವನ್ನೂ ಅಗೆದು ಹಾಕಲಾಗಿದೆ. ಸುಮಾರು 80 ವರ್ಷ ಊರ್ಜಿತದಲ್ಲಿದ್ದ ಸಂಪರ್ಕ ರಸ್ತೆ ಬಂದ್ ಮಾಡಿರುವುದರಿಂದ ತಮ್ಮ ದೈನಂದಿನ ವ್ಯವಹಾರಕ್ಕೆ ತೊಂದರೆಯಾಗಿದೆ. ಆದ್ದರಿಂದ ಈ ಹಿಂದೆ ಊರ್ಜಿತದಲ್ಲಿದ್ದ ಕೋಲ್ಪೆ-ಕಡೆಂಬಿಲ 20 ಅಡಿ ಅಗಲದ ಪಂಚಾಯತ್ ರಸ್ತೆಯನ್ನು ಮರು ನಿರ್ಮಾಣ ಮಾಡಿಕೊಡಬೇಕೆಂದು ಕಡೆಂಬಿಲ ನಿವಾಸಿಗಳು ಮನವಿ ಮಾಡಿದ್ದರು.
ಸಾರ್ವಜನಿಕ ರಸ್ತೆ ಮುಚ್ಚಿಹೋಗಿದ್ದರೂ ಪಕ್ಕದ ಜಾಗದ ಮಾಲಕರು ತಮ್ಮ ಪಟ್ಟಾ ಜಾಗದ ಮೂಲಕ ಕಡೆಂಬಿಲದಿಂದ ಕೋಲ್ಪೆ ಮೂಲಕ ರಾಷ್ಟ್ರೀಯ ಹೆದ್ದಾರಿ ಸಂಪರ್ಕಕ್ಕೆ ನೇರವಾಗಿ ರಸ್ತೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಆದರೆ ಇದಕ್ಕೆ ಆಕ್ಷೇಪ ಸೂಚಿಸಿರುವ ರಸ್ತೆ ಬಳಕೆದಾರರು ಹಿಂದಿನ ಪಂಚಾಯತ್ ರಸ್ತೆಯನ್ನೇ ಊರ್ಜಿತದಲ್ಲಿಡಬೇಕೆಂದು ಒತ್ತಾಯಿಸಿದ್ದರು. ಕೇರಳದ ವ್ಯಕ್ತಿ ತಾವು ಖರೀದಿಸಿದ್ದ ಜಾಗದ ಪರಿಸರದಲ್ಲಿದ್ದ ಸುಮಾರು ೫ ಎಕ್ರೆ ಸರಕಾರಿ ಜಾಗವನ್ನೂ ಒತ್ತುವರಿ ಮಾಡಿಕೊಂಡಿಕೊಂಡು ಮಣ್ಣು ತುಂಬಿಸಿದ್ದಾರೆ ಎಂದೂ ಗ್ರಾಮಸ್ಥರು ಆರೋಪಿಸಿದ್ದಾರೆ.
ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್ರವರು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಬಳಕೆದಾರರ ಬೇಡಿಕೆ ಆಲಿಸಿದರು. ಬಳಿಕ ಮಾತನಾಡಿ, ಸಾರ್ವಜನಿಕ ರಸ್ತೆ ಮುಚ್ಚಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡುತ್ತೇನೆ. ಗ್ರಾಮ ಪಂಚಾಯತ್ ರಸ್ತೆ ಆಗಿರುವುದರಿಂದ ಅಳತೆ ಮಾಡಿ ಸದ್ರಿ ರಸ್ತೆ ಊರ್ಜಿತದಲ್ಲಿಡುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲು ತಾ.ಪಂ.ಇಒ ನವೀನ್ ಭಂಡಾರಿಯವರಿಗೆ ಸೂಚನೆ ನೀಡಲಾಗುವುದು. ರಸ್ತೆ ಅಗೆದಿರುವುದು ಕಂಡು ಬಂದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. . ಕಂದಾಯ ನಿರೀಕ್ಷಕ ಪೃಥ್ವಿರಾಜ್, ಗ್ರಾಮಕರಣಿಕ ಸತೀಶ್, ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಗೌಡ, ಪಿಡಿಒ ಜಗದೀಶ್ ನಾಯ್ಕ್, ಗ್ರಾ.ಪಂಅ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.