ಸಮೀಕ್ಷೆ ಮೂಲಕ ಸೂಕ್ತ ಅಭ್ಯರ್ಥಿ ಆಯ್ಕೆಗೆ ಮಾಹಿತಿ ಸಂಗ್ರಹ; ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ..
ಬೆಂಗಳೂರು: ಸಾರ್ವತ್ರಿಕ ಚುನಾವಣೆಯಲ್ಲಿ ಶತಾಯಗತಾಯ ಗರಿಷ್ಠ ಸ್ಥಾನಗಳನ್ನು ಗೆಲ್ಲಲು ಪಣ ತೊಟ್ಟಿರುವ ಕಾಂಗ್ರೆಸ್ ಅದಕ್ಕಾಗಿ ಹಲವು ಸಮೀಕ್ಷೆಗಳ ಮೂಲಕ “ಗೆಲ್ಲುವ ಕುದುರೆ’ಗಳ ಪಟ್ಟಿ ಮಾಡಲು ಮುಂದಾಗಿದೆ.
ಇದಕ್ಕೆ ಪೂರಕವಾಗಿ ವೀಕ್ಷಕರ ವರದಿಗಳನ್ನು ಆಧರಿಸಿ ಜನವರಿ ಮೊದಲ ವಾರದಲ್ಲಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿ ದಿಲ್ಲಿಯಲ್ಲಿ ರಾಜ್ಯ ನಾಯಕ ರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸ ಲಾಗಿದೆ. ಅದರ ಮುಂದುವರಿದ ಭಾಗವಾಗಿ ಜ. 10ರ ವರೆಗೆ ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ. ಈ ವಿಷಯವಾಗಿಯೇ ರಾಜ್ಯ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ರಾಜಧಾನಿಯಲ್ಲಿ ಬೀಡು ಬಿಟ್ಟಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಅಭ್ಯರ್ಥಿಗಳ ಆಯ್ಕೆಗೆ ತೆರೆಮರೆಯಲ್ಲಿ “ಗ್ರೌಂಡ್ ರಿಪೋರ್ಟ್’ ಸಿದ್ಧಪಡಿಸಲಾಗುತ್ತಿದೆ.
ಈಗಾಗಲೇ ವೀಕ್ಷಕರು ತಮಗೆ ವಹಿಸಿದ ಜಿಲ್ಲೆಗಳಿಗೆ ಭೇಟಿ ನೀಡಿ, ಸ್ಥಳೀಯ ನಾಯಕ ರೊಂದಿಗೆ ಸಮಾಲೋಚನೆ ನಡೆಸಿ ಮೂರ್‍ನಾಲ್ಕು ಆಕಾಂಕ್ಷಿಗಳ ಹೆಸರುಗಳೊಂದಿಗೆ ವರದಿಯನ್ನು ರಾಜ್ಯ ನಾಯಕರಿಗೆ ನೀಡಿದ್ದಾರೆ. ಅದು ಹೈಕಮಾಂಡ್ ಕೈಗೂ ಸೇರಿದೆ. ಇದರ ಬೆನ್ನಲ್ಲೇ ಸುನಿಲ್ ಕನಗೋಳು ನೇತೃತ್ವದಲ್ಲಿ ಚುನಾವಣ ತಜ್ಞರ ತಂಡದಿಂದ ಸಾಕ್ಷಾತ್ ಸಮೀಕ್ಷೆ ನಡೆಸಿ, ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ. ಆ ತಂಡ ಕೂಡ ಕಾರ್ಯಪ್ರವೃತ್ತವಾಗಿದ್ದು, ಮುಂದಿನ ಹತ್ತು ದಿನಗಳಲ್ಲಿ ಗೌಪ್ಯ ವರದಿಯನ್ನು ಹೈಕಮಾಂಡ್‌ಗೆ ಸಲ್ಲಿಸಲಿದೆ.
ಏನೇನು ಮಾಹಿತಿ ಸಂಗ್ರಹ?
ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿರುವ ಸಚಿವರ ಸಹಿತ ಗೆಲ್ಲುವ ಕುದುರೆ ಯಾವುದು ಎಂಬ ಬಗ್ಗೆ ತಂಡವು ಮಾಹಿತಿ ಕಲೆಹಾಕುತ್ತಿದೆ. ಜಾತಿ ಸಮೀಕರಣ, ಕ್ಷೇತ್ರದಲ್ಲಿ ಹಿಡಿತ, ಶಾಸಕ ರೊಂದಿಗಿನ ಒಡನಾಟ- ಮುನಿಸು, ಹಿಂದಿನ ಚುನಾವಣೆಯಲ್ಲಿ ಪ್ರದರ್ಶನ ಒಳ ಗೊಂಡಂತೆ ಹತ್ತು ಹಲವು ಅಂಶಗಳ ಪಟ್ಟಿ ಮಾಡಿ, ಸ್ಥಳೀಯ ನಾಯಕರಿಂದ ಜಾತಕ ಜಾಲಾಡು ತ್ತಿದೆ. ಅದನ್ನು ಆಧರಿಸಿ ಸೂಕ್ತ ಅಭ್ಯರ್ಥಿ ಗಳನ್ನು ಸೂಚಿಸಲಾಗುತ್ತದೆ.