CM Siddaramaiaha ರೀಡೂ ಕೇಸ್‌ನ ವರದಿ ಕೇಳಿ ಸರ್ಕಾರಕ್ಕೆ ರಾಜ್ಯಪಾಲರ ಪತ್ರ
ಬೆಂಗಳೂರು: ಮುಡಾ ಪ್ರಕರಣದಲ್ಲಿ ರಾಜ್ಯಪಾಲರ ಪ್ರಾಸಿಕ್ಯೂಷನ್ ನಿರ್ಧಾರದ ವಿರುದ್ಧ ಹೋರಾಟ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ (CM Siddaramaiaha) ಅವರಿಗೆ ಮತ್ತೊಂದು ಆಘಾತ ಎದುರಾಗಿದ್ದು, ಇದೀಗ Arkavathy denotification ಪ್ರಕರಣಕ್ಕೆ ಸಂಬಂಧಿಸಿದಂತೆ ‘ರೀಡೂ ವರದಿ ಕೊಡಿ’ ಎಂದು ಸರ್ಕಾರಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋಟ್ ಪತ್ರ ಬರೆದಿದ್ದಾರೆ.
ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಡೆದಿದ್ದ ಅರ್ಕಾವತಿ ಬಿಡಿಎ ಬಡಾವಣೆ ‘ರೀಡೂ’ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಎಚ್.ಎಸ್. ಕೆಂಪಣ್ಣ ವಿಚಾರಣಾ ಆಯೋಗದ ವರದಿ ನೀಡುವಂತೆ ರಾಜ್ಯಪಾಲರು ಸರ್ಕಾರಕ್ಕೆ ಸೂಚಿಸಿದ್ದಾರೆ. ಇದರೊಂದಿಗೆ, ಸರ್ಕಾರ ಮತ್ತು ರಾಜಭವನದ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.
ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiaha) ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬಳಿಕ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷ ಶುರುವಾಗಿದೆ. ಈ ಬೆಳವಣಿಗೆ ನಡುವೆಯೇ ದಶಕದ ಹಿಂದಿನ ರೀಡೂ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. 2014ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ದೊಡ್ಡ ವಿವಾದ ಸೃಷ್ಟಿಸಿದ್ದ ಈ ಪ್ರಕರಣ ಕುರಿತಂತೆ ತನಿಖೆ ನಡೆಸಿದ್ದ ನ್ಯಾ.ಕೆಂಪಣ್ಣ ಆಯೋಗದ ವರದಿ ಹಾಗೂ ಸಂಬಂಧಪಟ್ಟ ದಾಖಲೆ ಒದಗಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ.
ಮೂಲಗಳ ಪ್ರಕಾರ, 2013–18ರ ಅವಧಿಯ ವಿವರಣೆಯನ್ನು ರಾಜ್ಯಪಾಲರು ಕೇಳಿದ್ದು, ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ರಾಜ್ಯಪಾಲರು ಬರೆದಿರುವ ಪತ್ರವನ್ನು ಉಲ್ಲೇಖಿಸಿ, ಆಯೋಗದ ವರದಿಗೆ ಸಂಬಂಧಿಸಿದ ಕಡತವನ್ನು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನಗರಾಭಿವೃದ್ಧಿ ಇಲಾಖೆ ಇದೇ 11ರಂದು ಸಲ್ಲಿಸಿದೆ.
ಅರ್ಕಾವತಿ ಬಡಾವಣೆಗಾಗಿ ಸ್ವಾಧೀನ ಮಾಡಿದ್ದ ಭೂಮಿಯಲ್ಲಿ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಸೂಚನೆಯಂತೆ 2014ರಲ್ಲಿ ಡಿನೋಟಿಫಿಕೇಷನ್ ಮಾಡಲಾಗಿತ್ತು. 472.25 ಎಕರೆ ಬದಲು ಹೆಚ್ಚುವರಿಯಾಗಿ 119 ಎಕರೆ ಸೇರಿಸಿ 541.25 ಎಕರೆ ಕೈ ಬಿಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ನ್ಯಾ. ಎಚ್.ಎಸ್. ಕೆಂಪಣ್ಣ ಆಯೋಗವನ್ನು 2015ರಲ್ಲಿ ಸಿದ್ದರಾಮಯ್ಯ ಸರ್ಕಾರ ರಚನೆ ಮಾಡಿತ್ತು. ಇತ್ತೀಚೆಗೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅರ್ಕಾವತಿ ಬಡಾವಣೆಯ ಡಿನೋಚಿಫಿಕೇಷನ್‌ನಲ್ಲಿ 8 ಸಾವಿರ ಕೋಟಿ ರೂ.ಗಳಷ್ಟು ಅಕ್ರಮವಾಗಿದೆ ಎಂಬ ಆರೋಪ ಮಾಡಿದ್ದರು.
ರಾಜ್ಯಪಾಲರಿಗೆ ಆಗಸ್ಟ್ 24ರಂದು ಪತ್ರ ಬರೆದಿದ್ದ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ. ರವಿ, ಕೆಂಪಣ್ಣ ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದರು.
‘ಕೆಂಪಣ್ಣ ಆಯೋಗವು 2017ರ ಆಗಸ್ಟ್‌ನಲ್ಲಿ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿದೆ. ಜಮೀನುಗಳ ಡಿನೋಟಿಫಿಕೇಷನ್ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಾಗ, ಸಿದ್ದರಾಮಯ್ಯ ಅವರೇ ಈ ಆಯೋಗವನ್ನು ರಚಿಸಿದ್ದರು’ ಎಂದೂ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು. ಇದೀಗ ರಾಜಭವನದಿಂದ ಈ ಬಗ್ಗೆ ಮಾಹಿತಿ ಕೋರಲಾಗಿದೆ.
ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ವಿವರವಾದ ವರದಿ ಸಿದ್ಧಪಡಿಸಿದ್ದು ಅದನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಚೇರಿಗೆ ತಲುಪಿಸಿದ್ದಾರೆ. ಶಿವಕುಮಾರ್ ವರದಿಯನ್ನು ಪರಿಶೀಲನೆ ಮಾಡಿದ ನಂತರ ರಾಜಭವನಕ್ಕೆ ರವಾನಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಸಂತೋಷ್ ಲಾಡ್ ಅವರು ಗಂಗೇನಹಳ್ಳಿ ಡಿ ನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಆರೋಪ ಮಾಡಿದ ಬಳಿಕ ಈ ವಿದ್ಯಮಾನ ನಡೆದಿದೆ. ಆದರೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಸೆ.11 ರಂದೇ ಡಿಸಿಎಂ ಕಚೇರಿಗೆ ದಾಖಲೆ ಸಲ್ಲಿಸಿದ್ದಾರೆ ಎಂದು. ಹೇಳಲಾಗುತ್ತಿದೆ.
ಏನಿದು ಪ್ರಕರಣ?
ಬಿಡಿಎ ಅರ್ಕಾವತಿ ಬಡಾವಣೆಗಾಗಿ ಸ್ವಾಧೀನವಾಗಿದ್ದ ಒಟ್ಟು 541 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಲಾಗಿತ್ತು. ಕೋರ್ಟ್ ಸೂಚನೆಯಂತೆ ರೀಡೂ ಮಾಡಲಾಗಿದೆ ಎಂಬ ಸರ್ಕಾರ ದ ಸಮರ್ಥನೆಯಾಗಿತ್ತು. ಆದರೆ, ಇದರಲ್ಲಿ ಸಾವಿರಾರು ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿ, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿತ್ತು. ಒತ್ತಡ ತೀವ್ರಗೊಂಡ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಎಚ್.ಎಸ್.ಕೆಂಪಣ್ಣ ಅವರ ನೇತೃತ್ವದಲ್ಲಿವಿಚಾರಣಾ ಆಯೋಗ ರಚಿಸಲಾಗಿತ್ತು.
ನ್ಯಾಯಾಂಗ ಆಯೋಗವು ಒಟ್ಟು 4 ಸಂಪುಟಗಳಲ್ಲಿ 1,861 ಪುಟಗಳ ವಿಚಾರಣಾ ವರದಿ ಸಲ್ಲಿಸಿತ್ತು. ಆದರೆ, ಈ ವರದಿ ಸಚಿವ ಸಂಪುಟದ ಮುಂದೆ ಚರ್ಚೆಗೆ ಬಂದಿರಲಿಲ್ಲ ಮತ್ತು ವಿಧಾನ ಮಂಡಲದಲ್ಲಿ ಮಂಡನೆಯೂ ಆಗಿರಲಿಲ್ಲ. ಹಿಂದಿನ ಬಿಜೆಪಿ ಸರ್ಕಾರ ದ ಅವಧಿಯಲ್ಲಿ40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಪ್ರತಿಯಾಗಿ, ರೀಡೂ ಪ್ರಕರಣವೂ ಸದ್ದು ಮಾಡಿತ್ತಾದರೂ ನಂತರ ತೆರೆಮರೆಗೆ ಸರಿದು, ವಿಚಾರಣಾ ಆಯೋಗದ ವರದಿ ಗೌಪ್ಯವಾಗೇ ಉಳಿದಿತ್ತು. ಆದರೆ, ಮೇಲ್ಮನೆ ಸದಸ್ಯ ಸಿ.ಟಿ.ರವಿ ಅವರು ನ್ಯಾ.ಕೆಂಪಣ್ಣ ವರದಿಯನ್ನು ಶಾಸನಸಭೆಗಳಲ್ಲಿ ಮಂಡನೆ ಮಾಡುವಂತೆ ಸಿಎಂ ಹಾಗೂ ರಾಜ್ಯಪಾಲರನ್ನು ಕೋರಿ ಪತ್ರ ಬರೆದಿದ್ದರು.
ಗೌಪ್ಯ ಮಾಹಿತಿ ಸೋರಿಕೆ ಬಗ್ಗೆಯೂ ಗರಂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಹಾಗೂ ಶಶಿಕಲಾ ಜೊಲ್ಲೆವಿರುದ್ಧ ಈ ಹಿಂದೆ ಕೇಳಿಬಂದ ಆರೋಪಗಳ ಸಂಬಂಧ ಲೋಕಾಯುಕ್ತ ಪೊಲೀಸರು ಮುಂದಿನ ಪ್ರಕ್ರಿಯೆಗೆ ಅನುಮತಿ ಕೋರಿ ಸಲ್ಲಿಸಿರುವ ಪ್ರಸ್ತಾವದ ಮಾಹಿತಿ ಸೋರಿಕೆಯಾಗಿದ್ದರ ಬಗ್ಗೆಯೂ ರಾಜ್ಯಪಾಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಆಕ್ಷೇಪಿಸಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಈ ವಿಚಾರ ಸಂಪುಟ ಸಭೆಯವರೆಗೂ ತಲುಪಿದ ಬಗ್ಗೆ ಕಿಡಿಕಾರಿದ್ದಾರೆ.