ಮಕ್ಕಳ ಗುಂಪಿನ ಮೇಲೆ ಹರಿದ ಖಾಸಗಿ ಬಸ್: ಇಬ್ಬರ ಸ್ಥಿತಿ ಗಂಭೀರ
ಚಿಕ್ಕಮಗಳೂರು (ಸೆ.07): ಚಿಕ್ಕಮಗಳೂರು ಜಿಲ್ಲೆಯಲ್ಲಿ ಶಾಲೆಗೆ ಹೋಗಲು ಬಸ್ ನಿಲ್ದಾಣದಲ್ಲಿ ನಿಂತ 7 ಮಕ್ಕಳ ಮೇಲೆ ಖಾಸಗಿ ಬಸ್ ಹರಿಸಿದೆ. ಈ ಘಟನೆಯಲ್ಲಿ ಐವರು ಮಕ್ಕಳು ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದರೆ, ಉಳಿದ ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಹೌದು, ಪ್ರತಿನಿತ್ಯ ಶಾಲೆಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದು ನಿಲ್ಲುವಂತೆ ಇಂದು (ಗುರುವಾರ) ಕೂಡ ಬಸ್ ನಲ್ದಾಣದ ಬಳಿ ಮಕ್ಕಳು ಬಂದು ನಿಂತಿದ್ದಾರೆ. ಆದರೆ, ಅತಿವೇಗದಿಂದ ಬಂದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ, ಬಸ್ ನಿಲ್ದಾಣದ ಬಳಿ ನಿಂತಿದ್ದ ಮಕ್ಕಳ ಗುಂಪಿನ ಮೇಲೆ ಹರಿದಿದೆ. ಈ ವೇಳೆ ಎಲ್ಲ ಮಕ್ಕಳು ಓಡಲು ಮುಂದಾದರೂ ಇಬ್ಬರು ಮಕ್ಕಳಿಗೆ ಬಸ್ ಬಂದು ಗುದ್ದಿದೆ. ಬಸ್‌ನ ಗಾಲಿಗಳು ಮಕ್ಕಳ ಮೇಲೆ ಜರಿಯದ ಕಾರಣ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಬಸ್ ಗುದ್ದಿದ ರಭಸಕ್ಕೆ ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ತರೀಕೆರೆ ತಾಲೂಕಿನ ಸೀತಾಪುರ ಕಾವಲ್ ದುಗ್ಲಾಪುರ ಗೇಟ್ ನಲ್ಲಿ ಘಟನೆ ನಡೆದಿದೆ. ತುಳಸಿ (15), ನಿವೇದಿತ (14), ಗಂಭೀರ ಸ್ಥಿತಿ ಗಂಭೀರವಾಗಿದೆ. ಇಬ್ಬರು ಮಕ್ಕಳ ಸ್ಥಿತಿ ಗಂಭೀರ, ಉಳಿದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓವರ್ ಸ್ಪೀಡ್ ಕಂಟ್ರೋಲ್ ತಪ್ಪಿದ ಖಾಸಗಿ ಬಸ್ ಏಕಾಏಕಿ ಮಕ್ಕಳ ಮೇಲೆ ಹರಿದಿದೆ. ತುರ್ತು ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಮಕ್ಕಳಿಗೆ ಡಿಕ್ಕಿ ಹೊಡೆದ ನಂತರವೂ ಬಸ್ ನಿಯಂತ್ರಣಕ್ಕೆ ಸಿಗದೇ ರಸ್ತೆ ಬದಿಯಲ್ಲಿದ್ದ ಮರ ಹಾಗೂ ಮನೆಯ ಗೋಡೆಗೆ ಗುದ್ದಿದೆ. ಈ ಘಟನೆಯಲ್ಲಿ ರಸ್ತೆ ಬದಿಯಿದ್ದ ಮನೆಯ ಮುಂಭಾಗದ ಛಾವಣಿಯೂ ಸಂಪೂರ್ಣ ಜಖಂ ಆಗಿದೆ.
ಚಿಕ್ಕಮಗಳೂರಿನಲ್ಲಿ ಹೆಚ್ಚಾಗಿ ಕೆಎಸ್ಆರ್‌ಟಿಸಿ ಬಸ್‌ಗಳು ಸಂಚಾರ ಮಾಡದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳ ಸಂಚಾರ ಹೆಚ್ಚಾಗಿದೆ. ಇನ್ನು ಅತಿವೇಗದ ಚಾಲನೆ ಮತ್ತು ನಿರ್ಲಕ್ಷ್ಯ ಚಾಲನೆಯಿಂದಾಗಿ ಮಕ್ಕಳು ಮತತು ವೃದ್ಧರಿಗೆ ಆಗಾಗ ಅಪಘಾತ ಆಗುವ ಘಟನೆಗಳು ನಡೆಯುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಕೂಡ ವೇಗವಾಗಿ ವಾಹನ ಚಾಲನೆ ಮಾಡುವುದರಿಂದ ಈ ಅಪಘಾತ ಸಂಭವಿಸಿದೆ ಎಂದು ಗ್ರಾಮಸ್ಥರು ಖಾಸಗಿ ವಾಹನಗಳ ಚಾಲಕರು ಮತ್ತು ಮಾಲೀಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ.
ಹಗಲೆಲ್ಲ ಆಟೋದಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳಿಗೆ ನುಗ್ಗುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್!
ಬೆಂಗಳೂರು (ಸೆ.7) : ರಾಜಧಾನಿಯಲ್ಲಿ ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕಿ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದ ಏಳು ಮಂದಿ ಖದೀಮರನ್ನು ಪ್ರತ್ಯೇಕವಾಗಿ ಜ್ಞಾನಭಾರತಿ, ಬಾಗಲಗುಂಟೆ ಹಾಗೂ ಸಂಜಯನಗರ ಠಾಣೆಗಳ ಪೊಲೀಸರು ಸೆರೆ ಹಿಡಿದಿದ್ದಾರೆ.
ರಾತ್ರಿ ವೇಳೆ ಮನೆಗಳಲ್ಲಿ ಕಳವು ಮಾಡುತ್ತಿದ್ದ ಇಬ್ಬರು ಜ್ಞಾನಭಾರತಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮೋಹಿನುದ್ದೀನ್ ಹಾಗೂ ಮೊಹಮ್ಮದ್ ಅಶ್ವಕ್ ಬಂಧಿತರಾಗಿದ್ದು, ತಲೆಮರೆಸಿಕೊಂಡಿರುವ ಜುನೈದ್ ಪತ್ತೆಗೆ ತನಿಖೆ ನಡೆದಿದೆ. ಆರೋಪಿಗಳಿಂದ ಸುಮಾರು 230 ಗ್ರಾಂ ಚಿನ್ನಾಭರಣ, 72 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ .4 ಲಕ್ಷ ನಗದು ಒಟ್ಟು .18 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಚಿಕ್ಕಬಸ್ತಿಯಲ್ಲಿ ಶಬರಿನ್ ತಾಜ್ ಎಂಬುವರ ಮನೆಗೆ ಆರೋಪಿಗಳು ಕನ್ನ ಹಾಕಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಖದೀಮರನ್ನು ಸೆರೆ ಹಿಡಿದಿದ್ದಾರೆ.
ವಸತಿ ಪ್ರದೇಶಗಳಲ್ಲಿ ಆಟೋದಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರು ಬಾಗಲಗುಂಟೆ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ರವಿ ಅಲಿಯಾಸ್ ರವಿ ಕುಮಾರ್, ಇಮ್ರಾನ್ ಹಾಗೂ ಜೈ ಕುಮಾರ್ ಬಂಧಿತರಾಗಿದ್ದು, ಆರೋಪಿಗಳಿಂದ .1.8 ಲಕ್ಷ ನಗದು ಹಾಗೂ .6.45 ಲಕ್ಷ ಮೌಲ್ಯದ 129 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಶೆಟ್ಟಿಹಳ್ಳಿಯ ಬೈರವೇಶ್ವರ ನಿವಾಸಿ ಶಾಂತಿಬಾಯಿ ಅವರು ದೇವರ ದರ್ಶನಕ್ಕೆ ಹೋಗಿದ್ದಾಗ ಆ.12ರಂದು ಮನೆಯ ಬೀಗ ಮುರಿದು ಆರೋಪಿಗಳು ಕಳ್ಳತನ ಮಾಡಿದ್ದರು. ಈ ಕೃತೃದಲ್ಲಿ ಖದೀಮರ ಬೆನ್ನುಹತ್ತಿದ್ದ ಪೊಲೀಸರು, ಸಿಸಿಟಿವಿ ನೀಡಿದ ಸುಳಿವಿನ ಮೇರೆಗೆ ಆರೋಪಿಗಳು ಗಾಳಕ್ಕೆ ಹಾಕಿದ್ದಾರೆ.
ಈ ಆರೋಪಿಗಳ ಪೈಕಿ ರವಿ ವೃತ್ತಿಪರ ಕಳ್ಳನಾಗಿದ್ದು, ಆತನ ಮೇಲೆ ರಾಮಮೂರ್ತಿ ನಗರ, ಬೈಯಪ್ಪನಹಳ್ಳಿ, ಯಶವಂತಪುರ ಹಾಗೂ ಮಹಾಲಕ್ಷ್ಮಿ ಲೇಔಟ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಗಲು ಹೊತ್ತು ವಸತಿ ಪ್ರದೇಶಗಳಲ್ಲಿ ಆಟೋದಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಬಳಿಕ ರಾತ್ರಿ ವೇಳೆ ನಿಗದಿತ ಮನೆಗಳಲ್ಲಿ ರವಿ ಗ್ಯಾಂಗ್ ಕಳ್ಳತನ ಮಾಡುತ್ತಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.