ವಕೀಲರ ವಿರುದ್ದ ಬೀದಿಗಿಳಿದು ದಿಢೀರ್ ಕೆಲಸ ನಿಲ್ಲಿಸಿ ಪ್ರತಿಭಟನೆ ನಡೆಸಿದ ಚಿಕ್ಕಮಗಳೂರು ಪೊಲೀಸರು!
ಚಿಕ್ಕಮಗಳೂರು ಡಿಸೆಂಬರ್ 03: ವಕೀಲರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಅಮಾನಾತಾಗಿರುವ ಪೊಲೀಸರಿಗೆ ಬೆಂಬಲ ಘೋಷಿಸಿ ಚಿಕ್ಕಮಗಳೂರಿನ ಪೊಲೀಸರು ದಿಢೀರ್ ಕೆಲಸ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ.
ಇತ್ತೀಚೆಗೆ ನಗರಠಾಣೆಯಲ್ಲಿ ವಕೀಲನ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಆರು ಜನ ಪೊಲೀಸರ ಅಮಾನತುಗೊಳಿಸಿರುವುದನ್ನು ಕೈಬಿಡಬೇಕು, ಪೊಲೀಸರನ್ನು ಬಂಧಿಸಬಾರದು. ಪೊಲೀಸರ ಮೇಲೆ ಹಲ್ಲೆ ನಡೆಸಿದ ವಕೀಲರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವವರೆಗೂ ಕರ್ತವ್ಯಕ್ಕೆ ತೆರಳುವುದಿಲ್ಲ ಎಂದು ಪೊಲೀಸರು ಪಟ್ಟುಹಿಡಿದು ಕುಳಿತರು.
ಅಮಾನತಾಗಿರುವ ಪೊಲೀಸ್ ಪೇದೆ ಗುರುಪ್ರಸಾದನನ್ನು ವಶಕ್ಕೆ ಪಡೆದು ನ್ಯಾಯಾಧೀಶರ ಮನೆಗೆ ಹಾಜರುಪಡಿಸುವ ಮಾಹಿತಿ ಆಧಾರದ ಮೇಲೆ ನಗರ ಠಾಣೆಯಿಂದ ಡಿವೈಎಸ್ಪಿ ಕಚೇರಿಗೆ ತೆರಳಿದ ಸಿಬ್ಬಂದಿ, ಹನುಮಂತಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕಾಗಮಿಸಿದ ಐಜಿಪಿ, ಎಸ್ಪಿ ಮಾತಿಗೂ ಜಗ್ಗದ ಪ್ರತಿಭಟನಾನಿರತರು: ವಾಟ್ಸ್ಆ್ಯಪ್ ಗ್ರೂಪ್ ಮೂಲಕ ಜಿಲ್ಲೆಯ 800 ಪೊಲೀಸರು ಒಂದಾಗಿದ್ದು, ಪ್ರಕರಣ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದೆ
ಸ್ಥಳದಲ್ಲಿ ಪಶ್ಚಿಮ ವಲಯದ ಐಜಿಪಿ ಡಾ.ಚಂದ್ರಗುಪ್ತ, ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಅವರು ಸಮಾಧಾನ ಪಡಿಸುವ ಪ್ರಯತ್ನ ನಡೆಸಿದರಾದರೂ ಪೋಲಿಸರು ಪಟ್ಟು ಸಡಿಲಿಸಲಿಲ್ಲ. ಇನ್ನು ವಕೀಲರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿ ಅಮಾನತುಗೊಳಿಸಿದ ಘಟನೆ ಖಂಡಿಸಿ ಕುಟುಂಬಸ್ಥರು ಕೂಡ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ.