ಚಿಕ್ಕಮಗಳೂರು : ಕುಡಿದ ಮತ್ತಿನಲ್ಲಿ ಯುವಕರ ಪುಂಡಾಟ; ಕೆಎಸ್‌ಅರ್‌ಟಿಸಿ ಬಸ್ಸಿನ ಗ್ಲಾಸ್ ಒಡೆದು, ಚಾಲಕನ ಮೇಲೆ ಹಲ್ಲೆ

ಚಿಕ್ಕಮಗಳೂರು: ಎಣ್ಣೆ ಮತ್ತಿನಲ್ಲಿ ಯುವಕರ ಪುಂಡಾಟ ಮೆರೆದಿದ್ದು, ಕೆಎಸ್ಆರ್ಟಿಸಿ(KSRTC) ಬಸ್ಸಿನ ಗ್ಲಾಸ್ ಒಡೆದು, ಬಸ್ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ಕಡೂರು(Kaduru) ತಾಲೂಕಿನ ಬೀರೂರು ಸಮೀಪದ ಹೋರಿತಿಮ್ಮನಹಳ್ಳಿ ಗೇಟ್ ಬಳಿ ನಡೆದಿದೆ. ನಿನ್ನೆ(ಜು.7) ಸಂಜೆ ಕಡೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ಸಿನ ಮುಂಭಾಗದಲ್ಲಿ ಚಲಿಸುತ್ತಿದ್ದ ಕಾರಿನಿಂದ ಗಾಜಿನ ಮದ್ಯದ ಬಾಟಲಿಯನ್ನ ಎಸೆದಿದ್ದಾರೆ. ಇದು ಬಸ್ಸಿನ ಮುಂಭಾಗದ ಗ್ಲಾಸಿಗೆ ತಗುಲಿ ಗಾಜು ಪುಡಿಯಾಗಿದೆ. ಈ ವೇಳೆ ಕಡೂರು KSRTC ವಿಭಾಗದ ಚಾಲಕ ಸತೀಶ್, ಕಾರಿನಲ್ಲಿದ್ದವರನ್ನ ಪ್ರಶ್ನೆ ಮಾಡಿದ್ದಾರೆ. ಇಷ್ಟಕ್ಕೇ ಕೋಪಗೊಂಡ ಯುವಕರು ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ.
ನಾಲ್ವರು ಪುಂಡರ ವಿರುದ್ಧ ಪ್ರಕರಣ ದಾಖಲು
ಇನ್ನು ಘಟನೆ ವೇಳೆ ನಾಲ್ವರು ಮಧ್ಯ ಸೇವಿಸಿದ್ದು, ಅದರ ಅಮಲಿನಲ್ಲಿದ್ದ ಪುಂಡರು ಬಸ್ಸಿನ ಗ್ಲಾಸ್ ಒಡೆಯುವುದರ ಜೊತೆಗೆ ಪ್ರಶ್ನೆ ಮಾಡಿದ ಕೆಎಸ್ಆರ್ಟಿಸಿ ಬಸ್ ಚಾಲಕನ ಮೇಲೂ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಚಾಲಕನನ್ನ ಬೀರೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನು ಚಲಿಸುತ್ತಿದ್ದ ಬಸ್ಸಿನ ಮೇಲೆ ಗಾಜಿನ ಬಾಟಲಿ ಎಸೆದ ನಾಲ್ವರ ವಿರುದ್ದ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಡಿದ ಮತ್ತಿನಲ್ಲಿ ಹಲ್ಲೆ ಮಾಡಿದ ಕಿರಣ್, ಸತೀಶ್, ಸಚಿನ್, ಸುಪ್ರೀತ್ ಎಂಬುವವರನ್ನ ಬಂಧಿಸಲಾಗಿದೆ. ಇನ್ನು ಹಲ್ಲೆ ಮಾಡುತ್ತಿರುವ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ.
ಬೆಸ್ಕಾಂ ಗ್ರಾಹಕರೇ ಎಚ್ಚರ! ವಿದ್ಯುತ್ ಬಿಲ್ ಬಾಕಿ ಇದೆ ಎಂದು ಕರೆ ಮಾಡುತ್ತಾರೆ ಸೈಬರ್ ಕಳ್ಳರು; ಅಕೌಂಟ್ನಿಂದ ಹಣ ಮಾಯ
ಬೆಂಗಳೂರು: ಕರ್ನಾಟಕ ಸರ್ಕಾರ (Karnataka Government) ಮಹತ್ವದ 5 ಗ್ಯಾರಂಟಿ (5 Guarantee) ಯೋಜನೆಗಳಲ್ಲಿ ಒಂದಾದ “ಗೃಹ ಜ್ಯೋತಿ”ಗೆ (Gruha Jyothi) ಅಭೂತಪೂರ್ವ ರೆಸ್ಪಾನ್ಸ್ ದೊರೆತಿದೆ. ಆದರೆ ಆರಂಭದ ವೇಳೆಯೇ ಸೈಬರ್ ಕಳ್ಳರ (Cyber thieves) ಕೈಚಳಕ ಆತಂಕ ಮೂಡಿಸಿದೆ. ಆರೋಪಿಗಳು ಬೆಸ್ಕಾಂ (BESCOM) ಗ್ರಾಹಕರಿಗೆ ಕರೆ ಮಾಡಿ ಬಿಲ್ ಬಾಕಿ ಇದೆ ಬೇಗ ಬಿಲ್ ಕಟ್ಟಿ ಇಲ್ಲವಾದರೆ ಕನೆಕ್ಷನ್ ಕಟ್ ಆಗುತ್ತದೆ ಎಂದು ಸಾವಿರಾರು ರೂಪಾಯಿ ದೋಚಿರುವ ಆರೋಪ ಕೇಳಿಬಂದಿದೆ. ಹೀಗೆ ನಗರದ ಕಾಡುಗೋಡಿ ನಿವಾಸಿ ನಾರಾಯಣ್ ಪ್ರಸಾದ್ ಅವರಿಗೆ ಕರೆ ಮಾಡಿ ಸುಳ್ಳು ಹೇಳಿ ಅಕೌಂಟ್ನಿಂದ 53 ಸಾವಿರ ರೂ. ವಂಚಿಸಿದ್ದಾರೆ.
ಸೈಬರ್ ಕಳ್ಳರು ಮೊದಲಿಗೆ ನಾರಾಯಣ್ ಅವರ ಮೊಬೈಲ್ ನಂಬರ್ಗೆ ಒಂದು ಲಿಂಕ್ ಕಳಿಸಿದ್ದಾರೆ. ಬಳಿಕ ಕರೆ ಮಾಡಿ ಬೆಸ್ಕಾಂ ಬಿಲ್ ಬಾಕಿ ಇದೆ ಎಂದು ಹೇಳಿದ್ದಾರೆ. ನೀವು ಇಂದೇ ಬೆಸ್ಕಾಂ ಬಿಲ್ ಕಟ್ಟಬೇಕು ಇಲ್ಲವಾದರೇ ಕನೆಕ್ಷನ್ ಕಟ್ ಆಗುತ್ತೆ ಎಂದು ಹೇಳಿದ್ದಾರೆ. ಅದಕ್ಕೆ ನಾರಾಯಣ್ ಪ್ರಸಾದ್ ಗಾಬರಿಯಾಗಿ ಹೇಗೆ ತುಂಬುವುದು ಎಂದಿದ್ದಾರೆ.
ಆರೋಪಿಗಳು ನಾವು ಕಳುಹಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ ಫಾಲೋ ಮಾಡಿ ಎಂದಿದ್ದಾರೆ. ಸೈಬರ್ ಕಳ್ಳರ ಮಾತು ಕೇಳಿ ನಾರಾಯಣ್ ಪ್ರಸಾದ್ ಲಿಂಕ್ ಕ್ಲಿಕ್ ಮೇಲೆ ಕ್ಲಿಕ್ ಮಾಡಿದ್ದಾರೆ. ಈ ವೇಳೆ ನಾರಾಯಣ್ ಪ್ರಸಾದ್ ಮೊದಲು ಒಂದು ರೂಪಾಯಿ ಕಳುಹಿಸಿದ್ದಾರೆ. ಬಳಿಕ ಹಂತ ಹಂತವಾಗಿ 9 ಸಾವಿರ 10 ಸಾವಿರ ಹಣ ಅಕೌಂಟ್ನಿಂದ ಕಟ್ ಆಗಿತ್ತು. ಬಳಿಕ ನಾರಾಯಣ್ ಪ್ರಸಾದ್ ಅಕೌಂಟ್ ಚೆಕ್ ಮಾಡಿದಾಗ 53 ಸಾವಿರ ರೂ. ಕಟ್ ಆಗಿರುವುದು ತಿಳಿದಿದೆ. ಸದ್ಯ ನಾರಾಯಣ್ ಪ್ರಸಾದ್ ಕಾಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಪೊಲೀಸರು 420 ವಂಚನೆ ಅಡಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.