ಚಿಕ್ಕಬಳ್ಳಾಪುರ: ಮಳೆಗಾಗಿ ಮಕ್ಕಳ ಅಣಕು ಮದುವೆ!
ಚಿಕ್ಕಬಳ್ಳಾಪುರ: ಮಳೆಗಾಗಿ ಮಕ್ಕಳ (Children) ಅಣಕು ಮದುವೆ (Mock Wedding) ಮಾಡಿಸಿರೋ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಮಗಳಕೊಪ್ಪೆ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಗ್ರಾಮದ ಇಬ್ಬರು ಬಾಲಕರಲ್ಲಿ ಒಬ್ಬ ಹುಡುಗನಿಗೆ ವಧು ವೇಷ ಹಾಕಿ ಮತ್ತೋರ್ವ ಹುಡುಗನಿಗೆ ವರನ ಪೋಷಾಕು ಹಾಕಿ ಶಾಸ್ತ್ರೋಕ್ತವಾಗಿ ಅರ್ಚಕರ ನೇತೃತ್ವದಲ್ಲಿ ಅಣಕು ಮದುವೆ ಮಾಡುವ ಮೂಲಕ ಮಳೆಗಾಗಿ ಗ್ರಾಮಸ್ಥರು ಮೊರೆಯಿಟ್ಟಿದ್ದಾರೆ.
ಗ್ರಾಮದ ಮಧ್ಯಭಾಗದ ಬೀದಿಯಲ್ಲಿ ಮಹಿಳೆಯರೆಲ್ಲ ಕೂತು ಸೋಬಾನೆ ಗೀತೆ ಹಾಡಿ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಚಿಕ್ಕ ಬಾಲಕರು ಥೇಟ್ ವರ-ವಧುವಿನಂತೆ ಕಂಗೊಳಿಸಿದ್ದಾರೆ. ವರನ ಪೋಷಾಕುನಲ್ಲಿದ್ದ ಬಾಲಕ ವಧು ವೇಷದಲ್ಲಿದ್ದ ಮತ್ತೋರ್ವ ಬಾಲಕನಿಗೆ ಅರಿಶಿನ ಕೊಂಬು (ತಾಳಿ) ಕಟ್ಟುವ ಮೂಲಕ ಮದುವೆ ಮಾಡಲಾಗಿದೆ.
ಅಂದಹಾಗೆ ಮಳೆ ಬಾರದಂತಹ ಸಂದರ್ಭದಲ್ಲಿ ಈ ರೀತಿ ಮಕ್ಕಳಿಗೆ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥಿಸಿದರೆ ಮಳೆ ಬರುತ್ತದೆ ಎನ್ನುವ ನಂಬಿಕೆ ಜನರದ್ದು. ಹೀಗಾಗಿ ಮಕ್ಕಳ ಮದುವೆ ಮಾಡಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಬಾರಿ ನೀರಿಕ್ಷಿಸಿದಷ್ಟು ಮಳೆ ಬಾರದೆ ಇದ್ದುದರಿಂದ ರಾಗಿ, ಮೆಕ್ಕೆಜೋಳ, ಅವರೆ, ತೊಗರಿ ಸೇರಿದಂತೆ ಮಳೆಯಾಶ್ರಿತ ಬೆಳೆಗಳೆಲ್ಲವೂ ಒಣಗಿ ಬಾಡಿ ಹೋಗುತ್ತಿವೆ. ಹೀಗಾಗಿ ಅನ್ನದಾತರು ಆಕಾಶದತ್ತ ಮುಖ ಮಾಡಿ ಮಳೆ ಯಾವಾಗ ಬರುತ್ತದೆ ಎಂದು ಕಾದು ನೋಡುವಂತಾಗಿದೆ. ಮಳೆಗಾಗಿ ಹಾತೊರೆಯುತ್ತಿರುವ ಜನರು ಹಳೆಯ ಸಂಪ್ರದಾಯಗಳ ಮೊರೆ ಹೋಗಿದ್ದಾರೆ.
ಆಗಸ್ಟ್‌ನಲ್ಲಿ ಮಳೆ ಕೊರತೆ – ಯಾವ ಜಿಲ್ಲೆಯಲ್ಲಿ ಎಷ್ಟು ಕೊರತೆಯಾಗಿದೆ?
ಬೆಂಗಳೂರು: ರಾಜ್ಯ (Karnataka) ಆಗಸ್ಟ್ ತಿಂಗಳಲ್ಲಿ ತೀವ್ರ ಮಳೆ (Rain) ಕೊರತೆ ಎದುರಿಸಿತ್ತಿದೆ. ಈ ತಿಂಗಳಲ್ಲಿ ಸುಮಾರು 73% ರಷ್ಟು ಮಳೆಯ ಕೊರತೆ ಉಂಟಾಗಿದೆ. ವಾಡಿಕೆಯ ಪ್ರಕಾರ ಆ.29 ರವರೆಗೆ ರಾಜ್ಯದಲ್ಲಿ 211 ಎಂಎಂ ಮಳೆಯಾಗಬೇಕಾಗಿತ್ತು. ಆದರೆ 58 ಎಂಎಂ ಮಾತ್ರ ಮಳೆಯಾಗಿದೆ.
ಈ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರ (KSNDMC) ಮಳೆಯ ದಾಖಲಾತಿ ಬಿಡುಗಡೆ ಮಾಡಿದೆ. ದಾಖಲೆಯಲ್ಲಿ ಮಳೆಯ ಕೊರತೆಯಿಂದಾಗಿ ಈ ತಿಂಗಳಲ್ಲಿ ತೀವ್ರ ತಾಪಮಾನ ಕೂಡ ಏರಿಕೆಯಾಗಿದೆ ಎಂದು ತಿಳಿಸಿದೆ. ಇದು ರಾಜ್ಯದ ಜನರ ಆತಂಕಕ್ಕೆ ಸಹ ಕಾರಣವಾಗಿದೆ.
ಬೆಂಗಳೂರಿನಲ್ಲಿ (Bengaluru) ವಾಸ್ತವಿಕವಾಗಿ 116 ಎಂಎಂ ಮಳೆ ಆಗಬೇಕಿತ್ತು. ಆದರೆ ಈಗ 24 ಎಂಎಂ ಮಾತ್ರ ಮಳೆಯಾಗಿದೆ. ಚಿಕ್ಕ ಬಳ್ಳಾಪುರದಲ್ಲಿ 103 ಎಂಎಂ ವಾಸ್ತವಿಕ ಮಳೆ ಬೀಳಬೇಕಿತ್ತು. ಆದರೆ ಈಗ 16 ಎಂಎಂ ಮಾತ್ರ ಮಳೆ ಸುರಿದಿದೆ. ಕಲುಬುರ್ಗಿಯಲ್ಲಿ 148 ಎಂಎಂ ಮಳೆ ನಿರೀಕ್ಷೆ ಇತ್ತು, ಈಗ 29 ಎಂಎಂ ಮಳೆಯಾಗಿದೆ. ಮಲೆನಾಡಿನ ಭಾಗವಾದ ಶಿವಮೊಗ್ಗದಲ್ಲಿ ವಾಡಿಕೆಯಂತೆ ಯಾವಾಗಲೂ 535 ಎಂಎಂ ಮಳೆಯಾಗುತ್ತಿತ್ತು. ಆದರೆ ಈ ವರ್ಷ 106 ಎಂಎಂ ಮಾತ್ರ ಮಳೆ ಆಗಿದೆ. ಕೊಡಗಿನಲ್ಲಿ 551 ಎಂಎಂ ವಾಸ್ತವಿಕ ಮಳೆಯ ವಾಡಿಕೆ ಇತ್ತು, ಆದರೆ 102 ಎಂಎಂ ಮಳೆ ಮಾತ್ರ ಬಿದ್ದಿದೆ ಎಂದು ಕೆಎಸ್‍ಎನ್‍ಡಿಎಂಸಿ ತಿಳಿಸಿದೆ.