Chandrayaan-3 ರಿಂದ ಭಾರತ ವಿಶ್ವಕ್ಕೇ ತನ್ನ ಸಾಮರ್ಥ್ಯ ತೋರಿಸಿದೆ- ಮೋದಿ
ಅಥೆನ್ಸ್: ಭಾರತ ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಇಡೀ ವಿಶ್ವಕ್ಕೇ ತನ್ನ ಸಾಮರ್ಥ್ಯವನ್ನ ತೋರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ನಾವೀನ್ಯತೆ ಜಾಗತಿಕವಾಗಿ ಅಲೆಯನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ.
ಸುಮಾರು 40 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಗ್ರೀಸ್ (Greece) ದೇಶಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದು, ಪ್ರಧಾನಿ ಮೋದಿ ಅವರನ್ನ ಗ್ರೀಸ್ ರಾಷ್ಟ್ರಪತಿ ಹಾಗೂ ಪ್ರಧಾನಿ ಬರಮಾಡಿಕೊಂಡರು. ಭಾರತೀಯ ಸಮುದಾಯ ಸಾಂಪ್ರದಾಯಿಕವಾಗಿ ಮೋದಿ ಅವರನ್ನು ಸ್ವಾಗತಿಸಲಾಯಿತು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ರೀಸ್ ನಾಗರಿಕ ಗೌರವ ‘ದಿ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಹಾನರ್’ ನೀಡಿ ಗೌರವಿಸಲಾಯಿತು. ಅಧ್ಯಕ್ಷೆ ಕ್ಯಾಥರೀನಾ ಸಕೆಲ್ಲರೊಪೌಲೊ ಅವರು ಮೋದಿಗೆ ಅವರಿಗೆ ಗ್ರೀಸ್ ನಾಗರಿಕ ಗೌರವ ನೀಡಿ ಸನ್ಮಾನಿಸಿದರು.
ಗ್ರೀಸ್ ನಲ್ಲಿರುವ ಭಾರತೀಯ ಮೂಲದ ಸಮುದಾಯವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ, ತಮ್ಮ ಸರ್ಕಾರ 9 ವರ್ಷಗಳಲ್ಲಿ ಸಾಧಿಸಿದ ಮೈಲಿಗಲ್ಲುಗಳನ್ನು ಹಂಚಿಕೊಂಡಿದ್ದು, ಮೂಲಸೌಕರ್ಯ ಕ್ಷೇತ್ರ ಹಿಂದೆಂದೂ ಕಾಣದಷ್ಟು ಹೂಡಿಕೆಯನ್ನು ಪಡೆದಿದೆ ಎಂದು ಹೇಳಿದ್ದಾರೆ.
ಭೂಮಿ ಮತ್ತು ಚಂದ್ರನ ನಡುವಿನ ಅಂತರದ 6 ಪಟ್ಟು ಅಂತರದಷ್ಟು ಅಂದರೆ 25 ಲಕ್ಷ ಕಿ.ಮೀ ಆಪ್ಟಿಕಲ್ ಫೈಬರ್ ಕೇಬಲ್ ಗಳನ್ನು 2014 ರಿಂದ ಈ ವರೆಗೂ ಭಾರತದಲ್ಲಿ ಅಳವಡಿಸಲಾಗಿದೆ. ಭಾರತ ದಾಖಲೆಯ ಸಮಯದಲ್ಲಿ 700 ಕ್ಕೂ ಹೆಚ್ಚಿನ ಜಿಲ್ಲೆಗಳಿಗೆ ದೇಶೀಯವಾದ 5 ಜಿ ತಂತ್ರಜ್ಞಾನವನ್ನು ತಲುಪಿಸಿದೆ ಎಂದು ಮೋದಿ ಹೇಳಿದ್ದಾರೆ.
ವಿಶ್ವದ ದೊಡ್ಡ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಮುಂಚೂಣಿಯಲ್ಲಿವೆ. ಭಾರತದ ಜಗತ್ತಿನ 5ನೇ ಅತಿ ದೊಡ್ಡ ಆರ್ಥಿಕ ಶಕ್ತಿಯನ್ನು ಹೊಂದಿರುವ ದೇಶವಾಗಿದ್ದು, ತಜ್ಞರ ಪ್ರಕಾರ ದೇಶವು 3ನೇ ಸ್ಥಾನಕ್ಕೆ ಏರಲಿದೆ. ಆರ್ಥಿಕತೆ ಬೆಳೆಯುತ್ತಿದ್ದಂತೆ ದೇಶವು ಬಡತನದಿಂದ ವೇಗವಾಗಿ ಹೊರಬರುತ್ತದೆ. ಭಾರತದಲ್ಲಿ 5 ವರ್ಷಗಳಲ್ಲಿ 13.5 ಕೋಟಿ ಭಾರತೀಯರು ಬಡತನ ಮಟ್ಟದಿಂದ ಹೊರಬಂದಿದ್ದಾರೆ ಎಂದು ಹೇಳಿದರಲ್ಲದೇ, ಭಾರತ ತಾಂತ್ರಿಕವಾಗಿಯೂ ಬೆಳೆಯುತ್ತಿದ್ದ ಸುಮಾರು 700 ಜಿಲ್ಲೆಗಳಲ್ಲಿ ಈಗಾಗಲೇ 5 ಜಿ ತಂತ್ರಜ್ಞಾನವನ್ನು ಹೊಂದಿದೆ ಎಂದು ಬೀಗಿದರು.
ವಿಶ್ವದ ಅತಿ ಎತ್ತರದ ರೈಲು ಸೇತುವೆ ಮತ್ತು ಮೋಟಾರು ರಸ್ತೆ ಜೊತೆಗೆ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಮತ್ತು ಅತಿ ಎತ್ತರದ ಪ್ರತಿಮೆ ಈಗ ಭಾರತದಲ್ಲಿದೆ ಎಂದು ಮೋದಿ ಅನಿವಾಸಿ ಭಾರತೀಯ ಸಮುದಾಯಕ್ಕೆ ಹೇಳಿದ್ದಾರೆ.
ವಿಶ್ವ ಬ್ಯಾಂಕ್ ಮತ್ತು IMF ನಂತಹ ಉನ್ನತ ಜಾಗತಿಕ ಸಂಸ್ಥೆಗಳು ಭಾರತೀಯ ಆರ್ಥಿಕತೆಯನ್ನು ಹೊಗಳುತ್ತಿದ್ದು, ಭಾರತದಲ್ಲಿ ಹೂಡಿಕೆ ಮಾಡಲು ಪ್ರಮುಖ ಕಂಪನಿಗಳು ಪರಸ್ಪರ ಸ್ಪರ್ಧಿಸುತ್ತಿವೆ. ಕೋವಿಡ್ -19 ರ ನಂತರದ ವಿಶ್ವ ಕ್ರಮದಲ್ಲಿ ದೇಶದ ಪಾತ್ರವು ವೇಗವಾಗಿ ಬದಲಾಗುತ್ತಿದೆ ಎಂದು ಮೋದಿ ಪ್ರತಿಪಾದಿಸಿದರು.
ಪ್ರಧಾನಮಂತ್ರಿಯವರು ಭಾರತ ಮತ್ತು ಗ್ರೀಸ್‌ನ ನಾಗರಿಕತೆಗಳ ನಡುವಿನ ಪ್ರಾಚೀನ ಸಂಬಂಧಗಳನ್ನು ಪ್ರಸ್ತಾಪಿಸಿದರು ಮತ್ತು ಅವರ ಸಂಬಂಧಗಳನ್ನು ಬಲಪಡಿಸುವಲ್ಲಿ ಸಿಖ್ ಗುರುಗಳ ಪಾತ್ರವನ್ನು ಶ್ಲಾಘಿಸಿದರು. ಸಿಖ್ಖರಿಗೆ ಸಂಬಂಧಿಸಿದ ಘಟನೆಗಳನ್ನು ಸ್ಮರಿಸುವಲ್ಲಿ ನಮ್ಮ ಸರ್ಕಾರ ಸಮರ್ಪಣೆಯೊಂದಿಗೆ ಕೆಲಸ ಮಾಡಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಈ ತಿಂಗಳು ಶಿವನನ್ನು ಪೂಜಿಸುವ ಪರ್ವಕಾಲ, ಶ್ರಾವಣ ಮಾಸದಲ್ಲಿ ದೇಶವು ಹೊಸ ಸಾಧನೆ ಮಾಡಿದೆ. ಚಂದ್ರನ ಕತ್ತಲಿನ ವಲಯವಾದ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ. ತಿರಂಗವನ್ನು ಚಂದ್ರನ ಮೇಲೆ ಹಾರಿಸುವ ಮೂಲಕ ಜಗತ್ತಿಗೆ ನಮ್ಮ ಸಾಮರ್ಥ್ಯ ತೋರಿಸಿದ್ದೇವೆ. ಜಗತ್ತಿನ ಮೂಲೆಮೂಲೆಗಳಿಂದ ಅಭಿನಂದನೆಯ ಸಂದೇಶಗಳು ಹರಿದು ಬರುತ್ತಿವೆ. ಸಾಧನೆಯು ಇಷ್ಟು ದೊಡ್ಡದಾಗಿರುವಾಗ ಸಂಭ್ರಮವೂ ಸಹ ಮುಂದುವರಿಯುತ್ತದೆ. ಚಂದ್ರಯಾನ-3ರ ಯಶಸ್ಸಿಗೆ ನಾನು ಮತ್ತೊಮ್ಮೆ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಮುಖದ ಭಾವನೆಗಳೇ ಹೇಳುತ್ತಿವೆ, ನೀವು ಜಗತ್ತಿನ ಯಾವುದೇ ಜಾಗದಲ್ಲಿದ್ದರೂ ಹೃದಯದಲ್ಲಿ ಭಾರತವು ಮಿಡಿಯುತ್ತಿರುತ್ತದೆ ಎಂದು ಹೊಗಳಿದರು.