ಕರಾವಳಿ ಹಾಗೂ ಕೆಲ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಗುಡುಗು ಸಹಿತ ಸಾಧಾರಣ ಮಳೆ ಸಾಧ್ಯತೆ!
ಬೆಂಗಳೂರು, ನ.04: ಬೆಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆ ಭಾರೀ ಮಳೆಯಾಗುವ ಸಾಧ್ಯೆತೆಯಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ (Karnataka Rains). ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಪೂರ್ವ ದಿಕ್ಕಿನಿಂದ ಬೀಸುವ ಗಾಳಿಯಲ್ಲಿ ಹೆಚ್ಚು ತೇವಾಂಶದ ಪ್ರಮಾಣವಿರಲಿದ್ದು ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ನ.9ರ ವರೆಗೂ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಂಗಳೂರು, ಶಿವಮೊಗ್ಗ, ಬೆಳಗಾವಿ, ಉಡುಪಿ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಇಂದಿನಿಂದ (ನ. 04) ಕರಾವಳಿ, ಪಶ್ಚಿಮ ಘಟ್ಟದ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇಡೀ ರಾಜ್ಯದಲ್ಲಿ 3 ವಾರಗಳಿಗೆ ವಾಡಿಕೆಯಷ್ಟು ಮಳೆಯಾಗುವ ನಿರೀಕ್ಷೆ ಇದೆ.
ಬೆಂಗಳೂರು ಸುತ್ತಮುತ್ತ ಮೂರು ದಿನ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ನವೆಂಬರ್ 4ರಿಂದ ಐದು ದಿನಗಳ ಕಾಲ ಮಳೆಯಾಗೋ ಸಾಧ್ಯತೆ ಇದೆ. ಕೆಲ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನವೆಂಬರ್ 5ರಂದು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಸಂಜೆ/ರಾತ್ರಿಯ ವೇಳೆಗೆ ಕೆಲವು ಕಡೆಗಳಲ್ಲಿ ಹಗುರ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಾಧ್ಯತೆ ಇರುತ್ತದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮುಂದಿನ 48 ಗಂಟೆಗಳು ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಕರಾವಳಿಯ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ.
ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಕರಾವಳಿಯ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ.
ದಕ್ಷಿಣ ಕನ್ನಡ: ಸುಳ್ಯ ಪೇಟೆಯಲ್ಲಿ ಏಕಾಏಕಿ ಭೂಕುಸಿತ, ತಪ್ಪಿದ ಭಾರೀ ಅನಾಹುತ
ಮಂಗಳೂರು, ನವೆಂಬರ್ 3: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ (Sullia) ಶುಕ್ರವಾರ ರಾತ್ರಿ ಏಕಾಏಕಿ ಭೂಕುಸಿತ (Landslide) ಸಂಭವಿಸಿದ್ದು, ಭಾರೀ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ. ಸುಳ್ಯ ಪೇಟೆಯಲ್ಲಿರುವ ‘ಪರಿವಾರಕಾನ ಉಡುಪಿ ಗಾರ್ಡನ್’ ಹೋಟೆಲ್ ಬಳಿ ಭೂಕುಸಿತ ಸಂಭವಿಸಿದೆ. ಭೂಕುಸಿತವಾದ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್ಫಾರ್ಮರ್ ಇತ್ತು. ಭುಕುಸಿತವಾದ ಬೆನ್ನಲ್ಲೇ ಟ್ರಾನ್ಸ್ಫಾರ್ಮರ್ ಧರಾಶಾಯಿಯಾಗಿದೆ. ಅದೃಷ್ಟವಶಾತ್ ವಿದ್ಯುತ್ ಕಂಬ ಹಾಗೂ ಟ್ರಾನ್ಸ್ಫಾರ್ಮರ್ ಬೀಳುವ ಸಂದರ್ಭ ಪವರ್ ಕಟ್ ಆಗಿದ್ದ ಕಾರಣ ದುರಂತ ತಪ್ಪಿದೆ.
ದಿಢೀರ್ ಭೂಕುಸಿತವಾಗಿದ್ದರಿಂದ ಸುಳ್ಯದ ಜನತೆ ಬೆಚ್ಚಿ ಬಿದ್ದಿದೆ. ಘಟನಾ ಸ್ಥಳಕ್ಕೆ ಮೆಸ್ಕಾ ಸಿಬ್ಬಂದಿಗಳು ಆಗಮಿಸಿ ವಿದ್ಯುತ್ ಕಂಬ ತೆರವುಗೊಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ, ಭೂಕುಸಿತ ಉಂಟಾದ ಭಾಗಕ್ಕೆ ಯಾರೂ ಹೋಗದಂತೆ ತಡೆದಿದ್ದಾರೆ.
ಈ ಮಧ್ಯೆ, ಸುಳ್ಯವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಶುಕ್ರವಾರ ಮಳೆಯಾಗಿದೆ.
ನೆರೆಯ ಕೊಡಗು ಜಿಲ್ಲೆಯಲ್ಲಿಯೂ ಶುಕ್ರವಾರ ಸಂಜೆ ಹಾಗೂ ರಾತ್ರಿ ಭಾರೀ ಮಳೆಯಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ ಸುತ್ತಮುತ್ತ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿದಿದೆ. ಮಡಿಕೇರಿ ನಗರ, ಮೇಕೇರಿ, ಕಗ್ಗೋಡ್ಲು, ತಾಳತ್ಮನೆ ಸುತ್ತಮುತ್ತ ಮಳೆಯಾಗಿದೆ.