ಚೈತ್ರ ಕುಂದಾಪುರ ವಂಚನೆ ಪ್ರಕರಣ: ಹಾಲಶ್ರೀ ಮಠಕ್ಕೆ 56 ಲಕ್ಷ ಹಣ ತಂದಿಟ್ಟ ವಕೀಲ; ವಿಡಿಯೋದಲ್ಲೇನಿದೆ?
ಬೆಂಗಳೂರು: ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ವಂಚಿಸಿರುವ ಪ್ರಕರಣವು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು, ಅಭಿನವ ಹಾಲಶ್ರೀ ಸಿಸಿಬಿ ಬಲೆಗೆ ಬೀಳುತ್ತಿದ್ದಂತೆ ಅವರ ಆಪ್ತ ಪ್ರಣವ್ 56 ಲಕ್ಷ ರೂ. ನಗದನ್ನು ಹಾಲಸ್ವಾಮಿ ಮಠಕ್ಕೆ ಕೊಟ್ಟು ತೆರಳಿರುವುದು ಕುತೂಹಲಕ್ಕೀಡು ಮಾಡಿದೆ.
ಹಾಲಶ್ರೀ ಸಿಕ್ಕಿ ಬಿದ್ದರೆ ಪ್ರಕರಣದಲ್ಲಿರುವ ದೊಡ್ಡವರ ಹೆಸರೂ ಬಹಿರಂಗಗೊಳ್ಳಲಿದೆ ಎಂದು ಚೈತ್ರಾ ಕುಂದಾಪುರ ಸಿಸಿಬಿ ಕಸ್ಟಡಿಯಲ್ಲಿದ್ದಾಗ ಮಾಧ್ಯಮಗಳ ಮುಂದೆ ಹೇಳಿದ್ದಳು. ಇದೀಗ ಹಾಲಶ್ರೀಗಳಿಗೆ ಸಿಸಿಬಿ ಡ್ರಿಲ್ ಮಾಡುತ್ತಿದ್ದು, ಪ್ರಕರಣದಲ್ಲಿ ಶಾಮೀಲಾಗಿರುವ ಪ್ರಭಾವಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ಇದರ ಬೆನ್ನಲ್ಲೇ ಹಾಲಶ್ರೀ ಆಪ್ತ ಪ್ರಣವ್ ಈ ಕುರಿತಾಗಿ ವೀಡಿಯೋ ಹೇಳಿಕೆ ನೀಡಿ, ಬ್ಯಾಗ್‌ವೊಂದರಲ್ಲಿದ್ದ 56 ಲಕ್ಷ ರೂ. ನೋಟನ್ನು ತೋರಿಸಿ ಇದು ಅಭಿನವ ಹಾಲಶ್ರೀಗೆ ಸೇರಿದ್ದು ಎಂದಿದ್ದಾರೆ. ಬಳಿಕ ದುಡ್ಡಿನ ಬ್ಯಾಗ್ ಅನ್ನು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿರುವ ಹಾಲಸ್ವಾಮಿ ಮಠದಲ್ಲಿ ಇಟ್ಟು ತೆರಳಿದ್ದಾರೆ.
ಇದೀಗ ಸಿಸಿಬಿ ಪೊಲೀಸರು ಈ ದುಡ್ಡಿನ ಮೂಲದ ಬಗ್ಗೆ ಕೆದಕುತ್ತಿದ್ದು, ಹಾಲಶ್ರೀಗಳನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ವೀಡಿಯೋದಲ್ಲೇನಿದೆ? – ಹಡಗಲಿ ಮಠದ ಅಭಿನವ ಹಾಲಶ್ರೀ ಈ ಹಣವನ್ನು ನನ್ನ ಮೈಸೂರಿನ ಕಚೇರಿಯಲ್ಲಿ ಅವರ ಕಾರು ಚಾಲಕ ರಾಜು ತಂದುಕೊಟ್ಟಿರುತ್ತಾನೆ. ಈ ಹಣ ಯಾರಿಗೆ ಸೇರಬೇಕು ಎಂಬುದು ನನಗೆ ಮಾಹಿತಿ ಇಲ್ಲ. ಈಗ ಅವರ ತಂದೆ ಹಡಗಲಿ ಮಠದಲ್ಲಿ ವಾಸವಿದ್ದು, ಅವರಿಗೆ ಈ ಹಣ ತಲುಪಿಸಲು ಈಗ ಹೋಗುತ್ತಿದ್ದೇನೆ. ಹಾಲಶ್ರೀ 60 ಲಕ್ಷ ರೂ. ಕೊಟ್ಟಿದ್ದರು. ಅದರಲ್ಲಿ 4 ಲಕ್ಷ ರೂ. ಅನ್ನು ಅವರ ಕಾರು ಚಾಲಕ ವಕೀಲರ ಶುಲ್ಕವೆಂದು ಕೊಟ್ಟಿದ್ದಾನೆ. 56 ಲಕ್ಷ ರೂ. ನನ್ನ ಕಚೇರಿಯಲ್ಲಿ ಇಟ್ಟು ಹೋಗಿರುತ್ತಾರೆ. ಇಷ್ಟು ದಿನವಾದರೂ ಅವರು ಬಾರದ ಕಾರಣ ಈ ಹಣವನ್ನು ಹಾಲಶ್ರೀ ಅಪ್ಪನವರಿಗೆ ಕೊಡುತ್ತೇನೆ ಎಂದು ಒಂದು ವೀಡಿಯೋದಲ್ಲಿ ಪ್ರಣವ್ ಹೇಳಿದ್ದಾರೆ. ಇದಾದ ಅನಂತರ ಮಠದಲ್ಲಿ ದುಡ್ಡನ್ನು ಇಟ್ಟಿರುವ ದೃಶ್ಯವನ್ನು ವೀಡಿಯೋ ಮಾಡಿದ್ದಾರೆ.
ಪತ್ರದಲ್ಲಿ ಏನಿದೆ?
ಪ್ರಣವ್ ಪುಸಾದ್ 53 ವರ್ಷ, ಆದ ನಾನು ಮೈಸೂರಿನನಲ್ಲಿ ನೆಲೆಸಿದ್ದು ವಕೀಲ ವೃತ್ತಿ ಮಾಡಿಕೊಂಡಿರುತ್ತೇನೆ. ಚೈತ್ರ ಕುಂದಾಪುರ ಪಕರಣದಲ್ಲಿ ಸುದ್ದಿಯಲ್ಲಿರುವ ಅಭಿನವ ಹಾಲಶ್ರೀ ಸ್ವಾಮಿಜಿಗಳು ನನಗೂ ಮತ್ತು ನನ್ನ ಕುಟುಂಬಸ್ಥರಿಗೂ ಪರಿಚಯವಿದ್ದು, ಕಳೆದ ಎಂಟು ತಿಂಗಳಿನಿಂದ ನಮ್ಮ ಒಡನಾಟದಲ್ಲಿ ಇದ್ದರು.
ಇವರು ನಮ್ಮ ಮನೆಗೆ ಬರುವುದು, ಆಶೀರ್ವಚನ ನೀಡುವುದು, ಪ್ರಸಾದ ಸ್ವೀಕರಿಸುವುದು ಮಾಡುತ್ತಾ ಬಂದಿದ್ದರು. ಹೀಗಾಗಿ ಇವರ ಬಗ್ಗೆ ನನಗೆ ವಿಶ್ವಾಸ ಹಾಗೂ ಗೌರವ ಇತ್ತು. ಇವರು ನಿಜವಾದ ಧರ್ಮಭೀರು ಸ್ವಾಮೀಜಿ ಎಂದು ನಾವು ಇದುವರೆಗೆ ನಂಬಿದ್ದೆವು. ಆದರೆ, ಮಾಧ್ಯಮಗಳಲ್ಲಿ ವರದಿಯಾದ ವಿಚಾರ ನೋಡಿ ನಮಗೆ ಆಘಾತವಾಯಿತು. ಇದಕ್ಕೂ ಮುನ್ನ ಕೆಲ ದಿನಗಳ ಹಿಂದೆ ಸದಾ ಸ್ವಾಮೀಜಿಯ ಜೊತೆಗೆ ನಮ್ಮ ಮನೆಗೆ ಬರುತ್ತಿದ್ದ ಚಾಲಕ ರಾಜು ಎಂಬಾತ ನಾಲ್ಕು ದಿನಗಳ ಹಿಂದೆ ನಮ್ಮ ಕಚೇರಿಗೆ ಬಂದಿದ್ದ. ಅಂದು ಅವನು ಒಂದು ಬ್ಯಾಗನ್ನು ಬಿಟ್ಟು ಹೋಗಿದ್ದ. ಯಾವುದೋ ಲಗೇಜ್ ಇರಬೇಕೆಂದು ನಾವು ಸುಮ್ಮನಾಗಿದ್ದೆವು.
ಅದಾದ ನಂತರ ಕರೆ ಮಾಡಿದ ಚಾಲಕ ರಾಜು, ಆ ಬ್ಯಾಗನ್ನು ಮೈಸೂರಿನ ಯಾರಿಗೋ ಕೊಡಲು ಹೇಳಿದ್ದರು. ಜೊತೆಗೆ ವಕೀಲರಿಗೆ ಒಂದಷ್ಟು ಬ್ಯಾಗ್ ತಲುಪಿಸಲು ಹೇಳಿದ್ದರು. ಆದರೆ ಆ ವಕೀಲರು ನನಗೆ ಸಿಗದ ಕಾರಣ ಆ ಬ್ಯಾಗನ್ನು ನಿಮ್ಮ ಕಚೇರಿಯಲ್ಲಿ ಇಟ್ಟಿದ್ದೇನೆ ಎಂದರು. ಕೂಡಲೇ ಅವನನ್ನು ಗದರಿಸಿ ಆ ಬ್ಯಾಗನ್ನು ತೆಗೆದುಕೊಂಡು ಹೋಗಲು ಸೂಚನೆ ಕೊಟ್ಟೆ. ಅದಾದ ನಂತರ ಆ ಬ್ಯಾಗ್‌ನಿಂದ ನಾಲ್ಕು ಲಕ್ಷ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಉಳಿದ ಹಣವನ್ನು ದಯಮಾಡಿ ನಮ್ಮ ಮಠದ ಪೂಜಾರಿ ಹಾಲಸ್ವಾಮಿಯವರಿಗೆ ತಲುಪಿಸಿ ಎಂದು ಸ್ವಾಮೀಜಿಯವರು ಹೇಳಿದ್ದಾರೆ ಎಂದು ಹೇಳಿದ. ಆ ಬ್ಯಾಗನ್ನು ತೆಗೆದುಕೊಂಡು ಹೋಗಲು ಅವರಿಗೆ ಹಲವು ಬಾರಿ ಹೇಳಿದ. ಮೂರ್ನಾಲ್ಕು ದಿನವಾದರೂ ಅವರು ಯಾರು ಈ ಕಡೆ ತಲೆಹಾಕಲಿಲ್ಲ.
ಸ್ವಾಮೀಜಿ ಹೇಳಿದಂತೆ ಮಠದಲ್ಲಿ ಹಾಲಸ್ವಾಮಿ ಎಮಬವರಿಗೆ ಈ ಹಣವನ್ನು ಇಂದು ಬೆಳಗ್ಗೆ ತಲುಪಿಸಿ ಬಂದಿರುತ್ತೇನೆ. ಈ ಸ್ವಾಮೀಜಿಯವರ ವ್ಯವಹಾರಗಳಿಗೂ ನಮ್ಮ ಕುಟುಂಬಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ತಮ್ಮ ಗಮನಕ್ಕೆ ಈ ವಿಚಾರಗಳನ್ನು ತರುತ್ತಿದ್ದು, ಈ ವಿಚಾರಗಳು ಮುಂದಿನ ತನಿಖೆಗೆ ಅನುಕೂಲವಾಗುವುದು ಎಂಬ ಉದ್ದೇಶದಿಂದ ಹಂಚಿಕೊಳ್ಳುತ್ತಿದ್ದೇನೆ. ನನಗೆ ಜೀವ ಭಯವಿದ್ದು ರಕ್ಷಣೆ ನೀಡಬೇಕೆಂದು ಡಿಸಿಪಿಯವರಲ್ಲಿ ಮನವಿ ಮಾಡಿದ್ದಾರೆ.