ಪೂನಂ ಪಾಂಡೆಯನ್ನು ಬಲಿ ಪಡೆದ ಗರ್ಭಕಂಠದ ಕ್ಯಾನ್ಸರ್; ಹೇಗಿದೆ ಇದರ ಲಕ್ಷಣ ಮತ್ತು ಲಸಿಕೆ..!
ಸಿದ್ಧ ಮಾಡೆಲ್ ಮತ್ತು ನಟಿ ಪೂನಂ ಪಾಂಡೆ ಸರ್ವಿಕಲ್ ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ. 32 ವರ್ಷದ ಪೂನಂ ಹಲವಾರು ರಿಯಾಲಿಟಿ ಶೋ, ಮಾಡೆಲಿಂಗ್, ಆಲ್ಬಂ ವಿಡಿಯೋಗಳ ಮೂಲಕ ಪ್ರಸಿದ್ಧಿ ಗಳಿಸಿ ಅನೇಕ ಅಭಿಮಾನಿಗಳನ್ನು ಹೊಂದ್ಇದ್ದರು. ಕೆಲ ತಿಂಗಳಿಂದ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಏನಿದು ಗರ್ಭಕಂಠದ ಕ್ಯಾನ್ಸರ್? ಇದರ ಲಕ್ಷಣಗಳೇನು? ಹೆಣ್ಣುಮಕ್ಕಳು ತೆಗೆದುಕೊಳ್ಳಲೇಬೇಕಾದ ಮುಂಜಾಗ್ರತಾ ಕ್ರಮಗಳು ಯಾವವು ಎಂಬುದರ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಗರ್ಭಕಂಠದ ಕ್ಯಾನ್ಸರ್ ಮಹಿಳೆಯರನ್ನು ಅತಿ ಹೆಚ್ಚು ಕಾಡುವ ಮಾರಣಾಂತಿಕ ಕಾಯಿಲೆಯಾಗಿದೆ. ಇದು ಹ್ಯೂಮನ್ ಪ್ಯಾಪಿಲೋಮಾ ವೈರಸ್‌ನಿಂದ (HPV) ಮಹಿಳೆಯರಿಗೆ ಹರಡುತ್ತದೆ. ಯೋನಿಯಿಂದ ಗರ್ಭಾಶಯದವರೆಗೆ ಇದು ವ್ಯಾಪಿಸುತ್ತದೆ. 40-45 ವರ್ಷದ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಜಗತ್ತಿನಲ್ಲಿ ಸರಾಸರಿ ಐವರು ಗರ್ಭಕಂಠ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೆ, ಅವರಲ್ಲಿ ಭಾರತದವರು ಒಬ್ಬರಿರುತ್ತಾರೆ. ಭಾರತದಲ್ಲಿ ಪ್ರತಿ 53 ಮಹಿಳೆಯರಲ್ಲಿ ಒಬ್ಬರು ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿರುತ್ತಾರೆ ಎಂದು ವರದಿಗಳಿಂದ ತಿಳಿದುಬಂದಿದೆ.
ಹೆಣ್ಣುಮಕ್ಕಳು 9 ವರ್ಷದಿಂದ 22 ವರ್ಷದೊಳಗೆ ಮುನ್ನೆಚ್ಚರಿಕೆ ವಹಿಸಿದರೆ ಗರ್ಭಕಂಠದ ಕ್ಯಾನ್ಸರ್‌ಅನ್ನು ತಡೆಗಟ್ಟಬಹುದು. ಇದಕ್ಕೆ ಎಚ್‌ಪಿವಿ ಲಸಿಕೆ ಇದ್ದು, ಅದರನ್ನು ಪಡೆಯಬೇಕು. ಮಹಿಳೆಯರು ರಕ್ತಸ್ರಾವದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಹೆಣ್ಣುಮಕ್ಕಳು 21ನೇ ವಯಸ್ಸಿನಲ್ಲಿ ಪ್ಯಾಪ್ ಸ್ಮೀಯರ್ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು. 26ನೇ ವಯಸ್ಸಿನಲ್ಲಿ ಕೂಡ ಹೆಣ್ಣುಮಕ್ಕಳು ಎಚ್‌ಪಿವಿ ಲಸಿಕೆ ಪಡೆಯಬಹುದಾಗಿದೆ. ಸುರಕ್ಷಿತ ಲೈಂಗಿಕ ಸಂಪರ್ಕ, ಅತಿಯಾದ ಜನನ ನಿಯಂತ್ರಣ ಮಾತ್ರೆ ಸೇವಿಸದಿರುವುದು ಮುಂಜಾಗ್ರತಾ ಕ್ರಮಗಳಾಗಿವೆ.
ಹಣ್ಣು, ತರಕಾರಿಗಳ ಸೇವನೆ, ನಿಯಮಿತ ವ್ಯಾಯಾಮ ಮಾಡಬೇಕು. ರೇಡಿಯೇಷನ್ ಥೆರಪಿ ಮೂಲಕ ಕಾಯಿಲೆಯನ್ನು ಗುಣಪಡಿಸಬಹುದು. ಆದರೆ, ಅದು ಯಾವ ಹಂತದಲ್ಲಿದೆ ಎಂಬುದು ಮುಖ್ಯವಾಗುತ್ತದೆ. ಸಂಭೋಗದ ಸಮಯದಲ್ಲಿ ಅತಿಯಾದ ನೋವು, ಅತಿಯಾದ ರಕ್ತಸ್ರಾವ, ಮೂತ್ರ ವಿಸರ್ಜನೆ ವೇಳೆ ಅಸಹನೀಯ ನೋವು, ಬೆನ್ನು ನೋವು, ಅತಿಸಾರ ಇದರ ಲಕ್ಷಣಗಳಾಗಿವೆ.
ಉಚಿತವಾಗಿ ಲಸಿಕೆ ನೀಡಲು ಕೇಂದ್ರ ತೀರ್ಮಾನ
ಗರ್ಭಕಂಠ ಕ್ಯಾನ್ಸರ್ ತಡೆಗಾಗಿ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಮಹತ್ವದ ಘೋಷಣೆ ಮಾಡಿದೆ. ಗರ್ಭಕಂಠ ಕ್ಯಾನ್ಸರ್ ತಡೆಗಾಗಿ ದೇಶಾದ್ಯಂತ 9-14 ವರ್ಷದೊಳಗಿನ ಬಾಲಕಿಯರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಗುರುವಾರ (ಫೆಬ್ರವರಿ 1) ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದಾರೆ. ಈಗ ಗರ್ಭಕಂಠ ಕ್ಯಾನ್ಸರ್ ನಿರೋಧಕ ವ್ಯಾಕ್ಸಿನ್‌ಗೆ 3 ಸಾವಿರ ರೂ. ಇದೆ. ಇನ್ನುಮುಂದೆ ಶಾಲೆಗಳ ಮೂಲಕವೇ ಬಾಲಕಿಯರಿಗೆ ಉಚಿತವಾಗಿ ಕ್ಯಾನ್ಸರ್ ನಿರೋಧಕ ಲಸಿಕೆ ನೀಡಲಾಗುತ್ತದೆ ಎಂದು ಘೋಷಿಸಿದೆ. ಕೇಂದ್ರ ಸರ್ಕಾರ ನೀಡುವ ಲಸಿಕೆಯು ಶೇ.70ರಷ್ಟು ಪರಿಣಾಮಕಾರಿಯಾಗಿದ್ದು, ಹೆಣ್ಣುಮಕ್ಕಳು ಗರ್ಭಕಂಠ ಕ್ಯಾನ್ಸರ್‌ಗೆ ತುತ್ತಾಗುವುದರಿಂದ ತಡೆಗಟ್ಟುತ್ತದೆ.