ತಿಹಾರ್ ಜೈಲಿನಿಂದಲೇ ತನಿಖೆಗೆ ಕೆ ಕವಿತಾರನ್ನು ಬಂಧಿಸಿದ ಸಿಬಿಐ..!
ದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಿಆರ್ಎಸ್ ನಾಯಕಿ ಕೆ. ಕವಿತಾ (K Kavitha) ಅವರನ್ನು ಸಿಬಿಐ ಗುರುವಾರ ಬಂಧಿಸಿದೆ. ವಿಶೇಷವೆಂದರೆ, ಕವಿತಾ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ ಮತ್ತು ಕಳೆದ ಶನಿವಾರ ಜೈಲಿನೊಳಗೆ ತನಿಖಾ ಸಂಸ್ಥೆ ಅವರನ್ನು ಪ್ರಶ್ನಿಸಿತ್ತು. ಇದೀಗ ಅವರನ್ನು ಕೋರ್ಟ್ ಅನುಮತಿ ಮೇರೆಗೆ ಬಂಧಿಸಲಾಗಿದೆ. ಕವಿತಾ ಅವರು ಇದೇ ಪ್ರಕರಣದಲ್ಲಿ ಇಡಿ ವಶಕ್ಕೆ ಒಳಗಾಗಿದ್ದರು. ಅಲ್ಲಿಂದ ಅವರು ಜೈಲು ಸೇರಿದ್ದರು.
ಇದಕ್ಕೂ ಮುನ್ನ ಬುಧವಾರ ತಿಹಾರ್ ಜೈಲಿನಲ್ಲಿರುವ ಕೆ ಕವಿತಾ ಅವರನ್ನು ಸಿಬಿಐ ಪ್ರಶ್ನಿಸಿತು. ಕವಿತಾ ಅವರನ್ನು ಜೈಲಿನಲ್ಲಿ ಪ್ರಶ್ನಿಸಲು ದೆಹಲಿ ನ್ಯಾಯಾಲಯವು ಏಪ್ರಿಲ್ 5 ರಂದು ಸಿಬಿಐಗೆ ಅನುಮತಿ ನೀಡಿತ್ತು. ತೆಲಂಗಾಣ ಎಂಎಲ್ಸಿ ಮತ್ತು ಬಿಆರ್ಎಸ್ ನಾಯಕ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿಯಾಗಿರು ಅವರನ್ನು ಮಾರ್ಚ್ 15 ರಂದು ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಹೈದರಾಬಾದ್ನ ಬಂಜಾರಾ ಹಿಲ್ಸ್ ನಿವಾಸದಿಂದ ಬಂಧಿಸಿತ್ತು.
ಸಿಬಿಐ ತನ್ನ ಹೇಳಿಕೆಯನ್ನು ಜೈಲಿನಲ್ಲಿ ದಾಖಲಿಸಿದೆ. ಈ ಬಳಿಕ ಹೇಳಿಕೆ ನೀಡಿದ್ದ ಕವಿತಾ ಅವರು ಇದು “ರಾಜಕೀಯ ಪ್ರಕರಣ” ಎಂಬುದಾಗಿ ಹೇಳಿದ್ದರು.
ಇದು ಸಂಪೂರ್ಣವಾಗಿ ಹೇಳಿಕೆಯನ್ನು ಆಧರಿಸಿದ ಪ್ರಕರಣವಾಗಿದೆ. ಇದೊಂದು ರಾಜಕೀಯ ಪ್ರಕರಣ. ಇದು ವಿರೋಧ ಪಕ್ಷಗಳನ್ನು ಗುರಿಯಾಗಿಸುವ ಪ್ರಕರಣವಾಗಿದೆ. ಸಿಬಿಐ ಈಗಾಗಲೇ ಜೈಲಿನಲ್ಲಿ ನನ್ನ ಹೇಳಿಕೆಯನ್ನು ದಾಖಲಿಸಿದೆ ಎಂದು ಅವರು ಹೇಳಿದ್ದಾರೆ.
ಸಹ ಆರೋಪಿ ಬುಚ್ಚಿ ಬಾಬು ಅವರ ಫೋನ್ನಿಂದ ವಶಪಡಿಸಿಕೊಳ್ಳಲಾದ ವಾಟ್ಸ್ಆ್ಯಪ್ ಚಾಟ್ಗಳು ಮತ್ತು ಭೂ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳ ಬಗ್ಗೆ ಬಿಆರ್ಎಸ್ ನಾಯಕಿಯನ್ನು ಪ್ರಶ್ನಿಸಲಾಗಿತ್ತು. ದೆಹಲಿ ಅಬಕಾರಿ ನೀತಿಯಡಿ ಮದ್ಯದ ಲಾಬಿಯ ಪರವಾಗಿ ಕೆಲಸ ಮಾಡಲು ಎಎಪಿಗೆ ಪಕ್ಷಕ್ಕೆ 100 ಕೋಟಿ ರೂ.ಗಳನ್ನು ಪಾವತಿಸಲಾಗಿದೆ ಎಂದು ಈ ಪ್ರಕರಣದಲ್ಲಿ ಆರೋಪಿಸಲಾಗಿದೆ.
ಪ್ರಕರಣದ ಈ ಅಂಶಗಳ ಬಗ್ಗೆ ಕವಿತಾ ಅವರನ್ನು ಪ್ರಶ್ನಿಸಲು ಸಿಬಿಐ ಏಪ್ರಿಲ್ 6 ರಂದು ತಿಹಾರ್ ಜೈಲಿಗೆ ಹೋಗಿತ್ತು ಎಂದು ಮೂಲಗಳು ತಿಳಿಸಿವೆ.