ಸಂಘದಲ್ಲಿ ಜಾತಿ ಕೇಳುವ ಪ್ರಶ್ನೆ, ಪದ್ಧತಿ ಇಲ್ಲವೇ ಇಲ್ಲ - ಎಸ್‍ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು, ಡಿಸೆಂಬರ್ 07: ಗೂಳಿಹಟ್ಟಿ ಶೇಖರ್ ಅವರು ಆರೆಸ್ಸೆಸ್ ಕುರಿತಂತೆ ಸತ್ಯಕ್ಕೆ ದೂರವಾದ ಪ್ರಸ್ತಾಪ ಮಾಡಿದ್ದಾರೆ. ಆರೆಸ್ಸೆಸ್‍ನಲ್ಲಿ ಜಾತಿಭೇದ ಇಲ್ಲ. ರಿಜಿಸ್ಟರ್‍ನಲ್ಲಿ ಸಹಿ ಮಾಡುವ ಪದ್ಧತಿಯೂ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಮತ್ತು ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಮ್ಮ ಪಕ್ಷದ ಮಾಜಿ ಸಚಿವರು, ಹೊಸದುರ್ಗದ ಮಾಜಿ ಶಾಸಕರಾದ ಗೂಳಿಹಟ್ಟಿ ಶೇಖರ್ ಅವರ ಆಡಿಯೋ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದನ್ನು ಗಮನಿಸಿದ್ದೇನೆ. ಅದು ನಿಜಕ್ಕೂ ಅವರದೇ ಅಥವಾ ಅಲ್ಲವೇ ಎಂಬುದು ಬೇರೆ ವಿಷಯ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಬಂದ ವಿಷಯ ನಮ್ಮ ಪಕ್ಷದ ಮೇಲೆ ಪರಿಣಾಮ ಬೀರುವ ರೀತಿಯಲ್ಲಿದೆ. ಅವರು ನಮ್ಮ ಪಕ್ಷದ ಸದಸ್ಯರಾಗಿದ್ದರು ಎಂದು ತಿಳಿಸಿದರು.
ನಾಗಪುರ ಆರೆಸ್ಸೆಸ್ ಕಚೇರಿಗೆ ಹೋಗಿದ್ದೆ. ಮ್ಯೂಸಿಯಂ ಒಳಗೆ ಹೋಗಲು ಪರಿಶಿಷ್ಟ ಜಾತಿಯವನು ಎಂಬ ಕಾರಣಕ್ಕೆ ಬಿಟ್ಟಿಲ್ಲ. ಅಲ್ಲಿ ರಿಜಿಸ್ಟರ್ ಇತ್ತು. ಅಲ್ಲಿ ಹೆಸರು ಬರೆದಾಗ ಜಾತಿ ತಿಳಿದು ಒಳಕ್ಕೆ ಬಿಟ್ಟಿಲ್ಲ ಎಂದಿದ್ದು, ಅದನ್ನು ಪ್ರಶ್ನಿಸಿದ್ದಾರೆ. ಇದು ನಡೆದು 10 ತಿಂಗಳಾಗಿದೆ ಎಂದು ತಿಳಿಸಿದ್ದಾರೆ.
ಒಬ್ಬ ಸ್ವಾಭಿಮಾನಿ ವ್ಯಕ್ತಿ, ಪರಿಶಿಷ್ಟ ಜಾತಿಯವನಾಗಿದ್ದರೆ, ಡಾ. ಅಂಬೇಡ್ಕರ್ ಅವರ ರಕ್ತ ಅವರಲ್ಲಿ ಹರಿಯುತ್ತಿದ್ದರೆ ಇಂಥದ್ದು ನಡೆದ ಸಂದರ್ಭದಲ್ಲೇ ಪ್ರತಿಭಟಿಸಬೇಕಿತ್ತು. ಆ ಜಾಗದಲ್ಲಿ ನಾನಿದ್ದರೂ ಪ್ರತಿಭಟಿಸುತ್ತಿದ್ದೆ ಎಂದು ತಿಳಿಸಿದರು. ಸಂಘದವರು ನೀವು ಯಾವ ಜಾತಿ ಎಂದು ಕೇಳಿದ್ದನ್ನು ನಾನು ಯಾವತ್ತೂ ಗಮನಿಸಿಲ್ಲ ಎಂದು ಹೇಳಿದರು.
ನನ್ನ ಅನುಭವದಲ್ಲಿ ಸಂಘದಲ್ಲಿ ಯಾವುದೇ ತಾರತಮ್ಯ ಇಲ್ಲ. ಇದು ಸ್ಪಷ್ಟ ಎಂದ ಅವರು, ಇವತ್ತು ಗೂಳಿಹಟ್ಟಿಯವರು ರಾಜಕೀಯ ಕಾರಣಕ್ಕಾಗಿ, ಕಾಂಗ್ರೆಸ್ ಬಾಗಿಲು ತಟ್ಟುವ ಸಂದರ್ಭದಲ್ಲಿ ಪಕ್ಷಕ್ಕೆ ಈ ರೀತಿ ಹಾನಿ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದು ಅಕ್ಷಮ್ಯ ಕ್ರಮ. ಸುಳ್ಳುಗಳನ್ನು ಹಬ್ಬಿಸುವ ಕೆಲಸ ಮಾಡಬಾರದು ಎಂದು ತಿಳಿಸಿದರು.
ನೀವು ಕಾಂಗ್ರೆಸ್‍ಗೆ ಹೋಗುವುದಾದರೆ ನಮ್ಮ ಅಡ್ಡಿ ಇಲ್ಲ; ಹೋಗಬಹುದು. ಆದರೆ, ನೀವು ಉಂಡ ತಟ್ಟೆಯಲ್ಲಿ ಮಣ್ಣು ಹಾಕಿ ಹೋಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಅವರು ಬೇರೆಯವರಲ್ಲ; ನನ್ನ ಸಹೋದರರು. ದಯವಿಟ್ಟು ಈ ಥರ ತಪ್ಪು ದಾರಿಯಲ್ಲಿ ಹೋಗಬೇಡಿ ಎಂದು ಮನವಿ ಮಾಡಿದರು. ಹಾಗಾಗಿರಲು ಸಾಧ್ಯವಿಲ್ಲ. ಆಗಿದ್ದರೆ, ತಕ್ಷಣವೇ ಪ್ರಶ್ನಿಸಬೇಕಿತ್ತು. ಅಪಪ್ರಚಾರ ಮಾಡಿ ತಪ್ಪು ದಾರಿಗೆ ಎಳೆಯುವುದು ಸರಿಯಲ್ಲ. ಅವರ ನಡೆಯನ್ನು ನಾನು ಖಂಡತುಂಡವಾಗಿ ಖಂಡಿಸುತ್ತೇನೆ ಎಂದು ತಿಳಿಸಿದರು. ಸಂಘದಲ್ಲಿ ಜಾತಿ ಕೇಳುವ ಪ್ರಶ್ನೆ, ಪದ್ಧತಿ ಇಲ್ಲವೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.