ಕಾರು-ಬಸ್ ಮುಖಾಮುಖಿ ಢಿಕ್ಕಿ: ಗ್ರಾ.ಪಂ.ಸದಸ್ಯ ದಾರುಣ ಸಾವು
ಹುಣಸೂರು: ಸಾರಿಗೆ ಸಂಸ್ಥೆ ಬಸ್ ಮತ್ತು ಸ್ವಿಫ್ಟ್ ಕಾರಿನ ನಡುವೆ ನಡೆದ ಮುಖಾಮುಖಿ ಢಿಕ್ಕಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ದಾರುಣವಾಗಿ ಮೃತಪಟ್ಟಿದ್ದರೆ, ಮೂವರು ತೀವ್ರಗಾಯಗೊಂಡಿರುವ ಘಟನೆ ಹುಣಸೂರು-ಮೈಸೂರು ಹೆದ್ದಾರಿಯ ಬನ್ನಿಕುಪ್ಪೆ ಬಳಿ ಭಾನುವಾರ ನಡೆದಿದೆ.
ಮೃತ ಭಾಸ್ಕರ್ ತಮ್ಮ ಕಾರಿನಲ್ಲಿ ಕುಟುಂಬ ಸಮೇತ ತಾಲೂಕಿನ ಮನುಗನಹಳ್ಳಿಯ ಮಾವನ ಮನೆಗೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ಹೆದ್ದಾರಿಯ ಬನ್ನಿಕುಪ್ಪೆ ಬಳಿ ಪಿರಿಯಾಪಟ್ಟಣ ಡಿಪೋಗೆ ಸೇರಿದ ಬಸ್ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಭಾಸ್ಕರ್ ಸ್ಥಳದಲ್ಲೇ ಮೃತಪಟ್ಟರೆ, ಕುಟುಂಬದವರಿಗೆ ತೀವ್ರಗಾಯಗಳಾಗಿದ್ದು, ನಜ್ಜುಗುಜ್ಜಾದ ಕಾರಿನಿಂದ ಗಾಯಾಳುಗಳನ್ನು ಗ್ರಾಮಸ್ಥರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸ್ಥಳಕ್ಕೆ ಹುಣಸೂರು ಬಸ್ ಡಿಪೋ ಮ್ಯಾನೇಜರ್ ಸುಬ್ರಹ್ಮಣ್ಯ ಭೇಟಿ ನೀಡಿ ಪರಿಶೀಲಿಸಿದರು.
ಅಪಘಾತದ ನಂತರ ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಗಂಟೆ ಕಾಲ ಟ್ರಾಫಿಕ್ ಜಾಮ್ ಆಗಿದ್ದರಿಂದ ಎರಡೂ ಬದಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪೊಲೀಸರು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು
ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ, ಪಾದಾಚಾರಿ ಸ್ಥಳದಲ್ಲೇ ಸಾವು:
ಹಾಸನ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಇನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗೂಳಿಹೊನ್ನೇನಹಳ್ಳಿ ಗ್ರಾಮದ ಬಳಿ ನಡೆದಿದೆ. ಜಗದೀಶ್ (55) ಮೃತ ದುರ್ದೈವಿ.
ಘಟನೆ ಖಂಡಿಸಿ ಸ್ಥಳದಲ್ಲಿ ಪ್ರತಿಭಟನೆ ಮಾಡಿದ್ದು, ಇನೋವಾ ಕಾರು ಸರ್ವೀಸ್ ರಸ್ತೆಯಲ್ಲಿ ಬಂದು ಅಪಘಾತ ಮಾಡಿದ್ದಾರೆಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಕಳೆದು ಒಂದು ಗಂಟೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಗುತ್ತಿದ್ದು, ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ರಜೆ ಮುಗಿಸಿ ಬೆಂಗಳೂರಿಗೆ ವಾಪಸ್ಸು ತೆರಳುತ್ತಿದ್ದವರಿಗೆ ಪ್ರತಿಭಟನೆ ಬಿಸಿ ತಟ್ಟಿದ್ದು, ಪೊಲೀಸರು ಪ್ರತಿಭಟನಾಕಾರರ ಮನವೋಲಿಸಲು ಪ್ರಯತ್ನಿಸುತ್ತಿದ್ದಾರೆ.