ಪೆಟ್ರೋಲ್ ಬಂಕ್ ನಲ್ಲಿ ಕಾರಿಗೆ ಆಕಸ್ಮಿಕ ಬೆಂಕಿ!
ಬೆಳಗಾವಿ: ನಗರದ ಕೃಷ್ಣದೇವರಾಯ ವೃತ್ತ(ಕೊಲ್ಲಾಪುರ ಸರ್ಕಲ್) ಬಳಿಯ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ಬಿ.ಬಿ. ಹೊಸಮನಿ ಆ್ಯಂಡ್ ಸನ್ಸ್ ಅವರಿಗೆ ಸೇರಿದ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಕೊಳ್ಳುವಾಗ ಕಾರಿನ ಮುಂಭಾಗಕ್ಕೆ ಆಕಸ್ಮಿಕ ಬೆಂಕಿ ಹತ್ತಿದೆ. ಆದರೆ ಅದೃಷ್ಟವಶಾತ್ ಭಾರೀ ಪ್ರಮಾಣದ ದೊಡ್ಡ ಅನಾಹುತ ತಪ್ಪಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಪೆಟ್ರೋಲ್ ಬಂಕ್ ನಲ್ಲಿಯ ಸಿಬ್ಬಂದಿ ಕೂಡಲೇ ನೀರು, ಮರಳು ಹಾಕಿ ಬೆಂಕಿ ನಂದಿಸಿದ್ದಾರೆ. ದೊಡ್ಡ ಅವಘಡ ತಪ್ಪಿದೆ. ಕಾರಿನಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಅದರಲ್ಲಿ ಇದ್ದವರು ಕೂಡಲೇ ಕೆಳಗೆ ಇಳಿದಿದ್ದಾರೆ. ಪೆಟ್ರೋಲ್ ಬಂಕ್ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.
ರೈಲಿನಲ್ಲಿ ಪ್ರಜ್ಞೆ ತಪ್ಪುವ ಚಾಕೋಲೆಟ್ ಕೊಟ್ಟು ಮೊಬೈಲ್ ಕಳವು
ಬೆಳಗಾವಿ: ವಾಸ್ಕೋಡಗಾಮ -ಹಜರತ್ ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸಂಚರಿಸುತ್ತಿದ್ದ ಎಂಟು ಜನ ಪ್ರಯಾಣಿಕರಿಗೆ ಪ್ರಜ್ಞೆ ತಪ್ಪುವ ಚಾಕಲೇಟ್ ಹಾಗೂ ಕುರಕುರೆ ನೀಡಿ ಮೊಬೈಲ್ ಗಳನ್ನು ಕದ್ದುಕೊಂಡು ಹೋದ ಘಟನೆ ಸೋಮವಾರ ರಾತ್ರಿ ಸಂಭವಿಸಿದ್ದು, ಪ್ರಜ್ಞೆ ತಪ್ಪಿದ ಎಲ್ಲರನ್ನೂ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೈಲಿನಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದ ಎಂಟು ಜನ ಕೂಲಿ ಕಾರ್ಮಿಕರನ್ನು ಕೂಡಲೇ ಬೆಳಗಾವಿಯಲ್ಲಿ ರೈಲು ಬರುತ್ತಿದ್ದಂತೆ ಆಂಬುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದು ಪ್ರಜ್ಞೆ ಬಂದ ಬಳಿಕ ಮಾಹಿತಿ ಪಡೆದು ಪೊಲೀಸರು ಮುಂದಿನ ತನಿಖೆ ನಡೆಸಲಿದ್ದಾರೆ.
ಮಧ್ಯ ಪ್ರದೇಶ ಮೂಲದ ಈ ಎಂಟು ಜನ ಕೂಲಿ ಕಾರ್ಮಿಕರು ಗೋವಾದಿಂದ ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲಿನಲ್ಲಿ ತಮ್ಮ ಊರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕೆಲ ಅಪರಿಚಿತರು ಬಂದು ಇವರಿಗೆ ಚಾಕೊಲೇಟ್ ಹಾಗೂ ಕುರುಕುರೆ ತಿನ್ನಲು ಕೊಟ್ಟಿದ್ದಾರೆ. ಇದನ್ನು ತಿಂದ ಎಂಟೂ ಜನ ಕೂಲಿ ಕಾರ್ಮಿಕರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ನಂತರ ಇವರ ಬಳಿ ಇದ್ದ ಮೊಬೈಲ್ ಗಳನ್ನು ಕಳವು ಮಾಡಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆದರೆ ಇವರ ಎಲ್ಲ ಲಗೇಜ್ ಗಳು ಇವೆ.
ಸದ್ಯ ಆಸ್ಪತ್ರೆಯಲ್ಲಿರುವ ಈ ಕೂಲಿ ಕಾರ್ಮಿಕರ ಪ್ರಜ್ಞೆ ಬಂದ ಬಳಿಕ ಮಾಹಿತಿ ಪಡೆದು ಮುಂದಿನ ತನಿಖೆ ನಡೆಸಲಾಗುವುದು ಎಂದು ರೈಲ್ವೆ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಆರ್. ಕಾರೇಕರ ತಿಳಿಸಿದ್ದಾರೆ.