ಬಸ್ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ, ಕಾರಣವೇನು ಗೊತ್ತಾ?
ಚಿಕ್ಕಬಳ್ಳಾಪುರ: ಸಾರಿಗೆ ಅವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳು (Students) ತೊಂದರೆ ಅನುಭವಿಸುತಂತಾಗಿದೆ ಎಂದು ಆರೋಪಿಸಿ ಬಸ್ (Bus) ತಡೆದು ಪ್ರತಿಭಟನೆ ನಡೆಸಿದ ಘಟನೆ ದೊಡ್ಡಬಳ್ಳಾಪುರದಲ್ಲಿ (Doddaballapura) ನಡೆದಿದೆ.
ಸೋಮವಾರ ಬೆಳಗ್ಗೆ ಹುಲಿಕುಂಟೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಬಸ್ಸನ್ನು ವಿದ್ಯಾರ್ಥಿಗಳು ತಡೆದಿದ್ದಾರೆ. ದೊಡ್ಡಬಳ್ಳಾಪುರ-ತುಮಕೂರು ಮಾರ್ಗಕ್ಕೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೆ ಒಂದೇ ಬಸ್ಸಿನಲ್ಲಿ 130 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಸಾಗಬೇಕಾಗಿದೆ. ಬಸ್ಸಿನ ಡೋರಿನಲ್ಲೇ ನೇತಾಡಿಕೊಂಡು ತೆರಳಬೇಕಾದ ಪರಿಸ್ಥಿತಿ ಇದೆ. ಈ ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಮಾಹಿತಿ ಇದೆ. ಆದರೂ ಬಸ್‍ಗಳ ವ್ಯವಸ್ಥೆ ಮಾಡಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ಆಯತಪ್ಪಿ ಬಿದ್ದು ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. ಈ ಕುರಿತಂತೆ ಸ್ಥಳಕ್ಕೆ ಸಾರಿಗೆ ಅಧಿಕಾರಿಗಳು ಸಮರ್ಪಕ ಬಸ್ ವ್ಯವಸ್ಥೆ ಮಾಡುವ ಭರವಸೆ ನೀಡುವ ವರೆಗೂ ಬಸ್ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಜನ ಪ್ರತಿನಿಧಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ 55 ಸರಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ
ಉಡುಪಿ/ದಕ್ಷಿಣ ಕನ್ನಡ: 2023-24ನೇ ಸಾಲಿನ ಶೈಕ್ಷಣಿಕ ವರ್ಷ (2023-24 Academic Year) ಆರಂಭವಾಗಿ ಒಂದು ತಿಂಗಳು ಕಳೆಯಿತು. ಶಾಲೆಗಳ (School) ಬಾಗಿಲು ತೆರದಿದ್ದು, ಬೇಸಿಗೆ ರಜೆ ಕಳೆದು ಮಕ್ಕಳು ಶಾಲೆಗಳಿಗೆ ಹೋಗುತ್ತಿದ್ದಾರೆ. ಇನ್ನು ಹೊಸದಾಗಿ ಮಕ್ಕಳು ಶಾಲೆಗಳಿಗೆ ದಾಖಲಾಗುತ್ತಿದ್ದಾರೆ. ಆದರೆ ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ (Udupi) ಜಿಲ್ಲೆಗಳ ಹಲವು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ (Government Primary School) ಒಂದನೇ ತರಗತಿಗೆ ಮಕ್ಕಳ ದಾಖಲೆ ಸಂಖ್ಯೆ ಶೂನ್ಯವಾಗಿರುವುದು ಅಚ್ಚರಿ ಮೂಡಿಸಿದೆ. ಹೌದು ಎರಡು ಜಿಲ್ಲೆಗಳ 55 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಒಂದನೇ ತರಗತಿಗೆ ಯಾವುದೇ ವಿದ್ಯಾರ್ಥಿ ದಾಖಲಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಸಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ದಿ ಇಂಡಿಯನ್ ಎಕ್ಸಪ್ರೆಸ್ ವರದಿ ಮಾಡಿದೆ.
ದಕ್ಷಿಣ ಕನ್ನಡದ 24 ಶಾಲೆಗಳಲ್ಲಿ ಒಂದನೇ ತರಗತಿಗೆ ಶೂನ್ಯ ದಾಖಲಾತಿ. ಪುತ್ತೂರು ತಾಲೂಕಿನ ಎರಡು, ಬಂಟ್ವಾಳದ ನಾಲ್ಕು, ಬೆಳ್ತಂಗಡಿಯಲ್ಲಿ ಮೂರು, ಮಂಗಳೂರು ಉತ್ತರದಲ್ಲಿ ಎರಡು, ಮಂಗಳೂರು ದಕ್ಷಿಣದಲ್ಲಿ ಎರಡು, ಮೂಡುಬಿದಿರೆಯ ಮೂರು ಮತ್ತು ಸುಳ್ಯ ತಾಲೂಕಿನ ಎಂಟು ಶಾಲೆಗಳಿಗೆ ಮಕ್ಕಳ ದಾಖಲಾತಿ ಸಂಖ್ಯೆ ಶೂನ್ಯವಾಗಿದೆ.
ಈ ಬಗ್ಗೆ ದಕ್ಷಿಣ ಕನ್ನಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (DDPI) ಆರ್ ದಯಾನಂದ ಮಾತನಾಡಿ, ಪ್ರವೇಶಕ್ಕೆ ಇನ್ನೂ ಸಮಯವಿದ್ದು, ಮಕ್ಕಳು ಶಾಲೆಗಳಿಗೆ ಸೇರುವ ಸಾಧ್ಯತೆಯಿದೆ. ಗ್ರೇಡ್‌ವಾರು ಡೇಟಾ ಕ್ರೋಢೀಕರಣ ಪ್ರಕ್ರಿಯೆಯು ನಡೆಯುತ್ತಿದೆ ಎಂದರು.
ಉಡುಪಿ ಜಿಲ್ಲೆಯಲ್ಲಿ 31 ಶಾಲೆಗಳಲ್ಲಿ ಒಂದನೇ ತರಗತಿಗೆ ಶೂನ್ಯ ದಾಖಲಾತಿ ಇದೆ. ಉಡುಪಿಯಲ್ಲಿ ನಾಲ್ಕು, ಬ್ರಹ್ಮಾವರದಲ್ಲಿ ನಾಲ್ಕು, ಕುಂದಾಪುರದಲ್ಲಿ ಐದು, ಬೈಂದೂರಿನಲ್ಲಿ ಒಂಬತ್ತು, ಕಾರ್ಕಳ ತಾಲೂಕಿನಲ್ಲಿ ಒಂಬತ್ತು ಶಾಲೆಗಳ ಒಂದನೇ ತರಗತಿಗೆ ದಾಖಲಾದ ಮಕ್ಕಳ ಸಂಖ್ಯೆ ಶೂನ್ಯವಾಗಿದೆ.
ಉತ್ತಮ ಮೂಲಸೌಕರ್ಯ ಮತ್ತು ಸಾರಿಗೆ ಸೌಲಭ್ಯ ಹೊಂದಿರುವ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಏರಿಕೆಯಾಗಿರುವುದು ಸರ್ಕಾರಿ ಶಾಲೆಗಳ ಪ್ರವೇಶದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಉಡುಪಿ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.