ಇಸ್ರೇಲ್ ಗೆ ಭೇಟಿ ನೀಡಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್
ಲಂಡನ್: ಇಸ್ರೇಲ್ ಹಮಾಸ್ ಸಂಘರ್ಷದ ನಡುವೆ ಇಸ್ರೇಲ್‌ಗೆ ಪ್ರಮುಖ ದೇಶಗಳ ನಾಯಕರು ಭೇಟಿ ನೀಡಲು ಆರಂಭಿಸಿದ್ದಾರೆ. ಬುಧವಾರ ಯುಎಸ್ ಅಧ್ಯಕ್ಷ ಜೋ ಬೈಡೆನ್ ಭೇಟಿ ನೀಡಿದ್ದ ಬೆನ್ನಲ್ಲೇ ಗುರುವಾರ ಯುಕೆ ಪ್ರಧಾನಿ ರಿಷಿ ಸುನಕ್ ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ.
ಗುರುವಾರ ಇಸ್ರೇಲ್ ಭೇಟಿ ನೀಡಿದ ಅವರು ಪ್ರಧಾನಿ ಹಾಗೂ ಅಧ್ಯಕ್ಷರ ಜೊತೆ ಯುದ್ಧದ ಪರಿಸ್ಥಿತಿಯ ಬಗ್ಗೆ ಚರ್ಚಿಸಲಿದ್ದಾರೆ. ಅಲ್ಲದೆ ಈ ಹಿಂದೆ ಹೇಳಿದಂತೆ ಇಸ್ರೇಲ್ ಗೆ ಎಲ್ಲ ರೀತಿಯ ಸಹಾಯ ನೀಡುವುದಾಗಿ ಹೇಳಿಕೊಂಡಿದ್ದಾರೆ.
ಬುಧವಾರ ಇಸ್ರೇಲ್ ಗೆ ಭೇಟಿ ನೀಡಿದ್ದ ಅಮೇರಿಕ ಅಧ್ಯಕ್ಷ ಜೋ ಬೈಡೆನ್ ಅವರು ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಆ ಬಳಿಕ ಪ್ರತಿಕ್ರಿಯಿಸಿದ ಇಸ್ರೇಲ್ ಪ್ರಧಾನಿ ಯುದ್ಧ ಪೀಡಿತ ಪ್ರದೇಶ ಗಾಜಾಕ್ಕೆ ನೀರು, ಆಹಾರ ಮತ್ತು ಇತರ ಸರಬರಾಜುಗಳನ್ನು ಅನುಮತಿಸಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಗಾಜಾ ಆಸ್ಪತ್ರೆಯ ಮೇಲೆ ರಾಕೆಟ್ ದಾಳಿ ನಡೆಸಿ ಸುಮಾರು ಐನೂರು ಮಂದಿ ಸಾವನ್ನಪ್ಪಿದ್ದು ಇಸ್ರೇಲ್ ಸೇನೆಯೇ ಈ ದಾಳಿ ನಡೆಸಿತ್ತು ಎಂದು ಹಮಾಸ್ ಹೇಳಿಕೊಂಡಿತ್ತು ಆದರೆ ಈ ಹೇಳಿಕೆಯನ್ನು ಇಸ್ರೇಲ್ ತಿರಸ್ಕರಿಸಿತ್ತು. ಅಲ್ಲದೆ ಅಮೇರಿಕ ಕೂಡ ಗಾಜಾ ಮೇಲಿನ ದಾಳಿ ಇಸ್ರೇಲ್ ಮಾಡಿರುವುದಲ್ಲ ಎಂದು ಹೇಳಿತ್ತು.
ಇತ್ತ ಗಾಜಾ ಮೇಲಿನ ದಾಳಿಗೆ ಪ್ರತಿಕ್ರಿಯಿಸಿದ ಬ್ರಿಟನ್ ಪ್ರಧಾನಿ “ಸಂಘರ್ಷ ಮತ್ತಷ್ಟು ತೀವ್ರವಾಗುವದನ್ನು ತಪ್ಪಿಸಲು ವಿಶ್ವದ ಎಲ್ಲಾ ನಾಯಕರು ಈ ಕ್ಷಣದಲ್ಲಿ ಒಗ್ಗೂಡಬೇಕಾಗಿದೆ, ನಾವು ಕೂಡ ಆ ಪ್ರಯತ್ನ ಮಾಡುತ್ತೇವೆ” ಎಂದು ತಿಳಿಸಿದರು, ಸಾಧ್ಯವಾದಷ್ಟು ಬೇಗ ಗಾಜಾಕ್ಕೆ ಮಾನವೀಯ ಸಹಾಯವನ್ನು ಅನುಮತಿಸಲು ಮತ್ತು ಗಾಜಾದಲ್ಲಿ ಸಿಕ್ಕಿಬಿದ್ದಿರುವ ಬ್ರಿಟಿಷ್ ಪ್ರಜೆಗಳನ್ನು ತೊರೆಯಲು ಅನುವು ಮಾಡಿಕೊಡುವ ಮಾರ್ಗವನ್ನು ತೆರೆಯುವಂತೆ ಸುನಕ್ ಇಸ್ರೇಲ್‌ಗೆ ಒತ್ತಾಯಿಸಿದ್ದಾರೆ.
ಅಕ್ಟೋಬರ್ 7 ರಂದು ಪ್ರಾರಂಭವಾದ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಮಾರಣಾಂತಿಕ ದಾಳಿಯ ನಂತರ ನಡೆದ ಎರಡೂ ಕಡೆಯ ಯುದ್ಧದಲ್ಲಿ ಇದುವರೆಗೆ 4000 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ.
https://x.com/RishiSunak/status/1714622673827885300?s=20