ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ಬಾಲಕ ಸಾವು

ಹೈದರಾಬಾದ್ (ಜನವರಿ 14, 2024): ಅಪಾರ್ಟ್‌ಮೆಂಟ್ ಕಟ್ಟಡದ ಟೆರೇಸ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್ ಅವಘಡಕ್ಕೆ 11 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಅಪಾರ್ಟ್‌ಮೆಂಟ್ ಕಟ್ಟಡದ ಟೆರೇಸ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್ ಅವಘಡಕ್ಕೆ ಬಾಲಕ ಬಲಿಯಾಗಿರುವ ಘಟನೆ ತೆಲಂಗಾಣ ರಾಜಧಾನಿಯಲ್ಲಿ ನಡೆದಿದೆ.
ಅತ್ತಾಪುರದ ಲಕ್ಷ್ಮೀ ವಾಣಿ ಟವರ್ಸ್‌ನಲ್ಲಿ ಘಟನೆ ನಡೆದಿದ್ದು, ಅಪಾರ್ಟ್‌ಮೆಂಟ್ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 304A ಅಡಿಯಲ್ಲಿ ನಿರ್ಲಕ್ಷ್ಯದಿಂದ ಸಾವಿಗೆ ಕಾರಣ ಆರೋಪದಡಿ ಕೇಸ್ ದಾಖಲಿಸಲಾಗಿದೆ.
ಬಾಲಕ ತನಿಷ್ಕ್ ತನ್ನ ಸೋದರ ಸಂಬಂಧಿ ಹಾಗೂ ಸ್ನೇಹಿತರೊಂದಿಗೆ ಟೆರೇಸ್ ಮೇಲೆ ಗಾಳಿಪಟ ಹಾರಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಟೆರೇಸ್ ಮೇಲಿನ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಸಂಬಂಧಿ ಅಭಿಷೇಕ ಉಬಾಳೆ ಅತ್ತಾಪುರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಜನವರಿ 12 ರಂದು ಮಧ್ಯಾಹ್ನ 3.15 ರ ಸುಮಾರಿಗೆ ಈ ಘಟನೆ ನಡೆದಿದ್ದು, ಅದೇ ದಿನ ಲಕ್ಷ್ಮೀ ವಾಣಿ ಟವರ್ಸ್ ಆಡಳಿತದ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ತನಿಷ್ಕ್ ತನ್ನ 15 ವರ್ಷದ ಸೋದರಸಂಬಂಧಿ ಮೋಹಿತ್ ಜೊತೆ ಟೆರೇಸ್ ಮೇಲೆ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿದೆ.
ಗಾಳಿಪಟ ಹಾರಿಸುತ್ತಿದ್ದ ತಾನು ಹಾಗೂ ತನ್ನ ಸ್ನೇಹಿತರನ್ನು ತನಿಷ್ಕ್ ಸೇರಿಕೊಂಡಿದ್ದ ಎಂದು ಮೋಹಿತ್ ಮಾಧ್ಯಮಗಳಿಗೆ ತಿಳಿಸಿದ್ದಾನೆ. ಕೆಲವು ಮೆಟಾಲಿಕ್ ರಾಡ್‌ಗಳಿಗೆ ವಿದ್ಯುತ್ ತಂತಿ ತಗುಲಿತ್ತು. ಅಂತಹ ರಾಡ್ ಅನ್ನು ಸ್ಪರ್ಶಿಸಿದ ಬಳಿಕ ತನಿಷ್ಕ್ ಕುಸಿದು ಬಿದ್ದಿದ್ದಾನೆ ಎಂದೂ ಹೇಳಿದ್ದಾನೆ.