ಬಸ್ನಲ್ಲಿ ಬಾಟಲ್ ಸ್ಫೋಟ; ಹಲವರಿಗೆ ಗಾಯ!
ತುಮಕೂರು, ಮಾ.20: ಇತ್ತೀಚೆಗೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಆದ ಸ್ಫೋಟ ಜನರನ್ನ ಬೆಚ್ಚಿ ಬೀಳುವಂತೆ ಮಾಡಿತ್ತು. ಇದೀಗ ಖಾಸಗಿ ಬಸ್ನಲ್ಲಿ ಶೌಚಾಲಯಕ್ಕೆ ಬಳಸುವ ಆ್ಯಸಿಡ್ ಬಾಟಲ್(Acid Bottle)ಸ್ಫೋಟವಾಗಿ ಹಲವರಿಗೆ ಸಣ್ಣಪುಟ್ಟ ಗಾಯವಾದ ಘಟನೆ ತುಮಕೂರು ತಾಲೂಕಿನ ಗೂಳೂರು ಬಳಿ ನಡೆದಿದೆ. ಕೂಡಲೇ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶೌಚಾಲಯಕ್ಕೆ ಬಳಸುವ ಆ್ಯಸಿಡ್ ಬಾಟಲ್ಗಳನ್ನು ಶಕೀಲಾ ಬಾನು (48) ಎಂಬ ಮಹಿಳೆ ತಂದಿದ್ದಳು.
ಬಾಟಲ್ಗಳಲ್ಲಿ ಒತ್ತಡ ಹೆಚ್ಚಾಗಿ ಸ್ಫೋಟಗೊಂಡಿರುವ ಶಂಕೆ
ಬಸ್ನಲ್ಲಿ ಬಾಟಲ್ಗಳನ್ನು ಇಟ್ಟುಕೊಂಡು ತುಮಕೂರು ತಾಲೂಕಿನ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ನಿಂದ ಬರುತ್ತಿದ್ದರು. ಈ ವೇಳೆ ಬಾಟಲ್ಗಳು ಸ್ಫೋಟಗೊಂಡಿದೆ. ಒಂದು ಕ್ಷಣ ಖಾಸಗಿ ಬಸ್ನಲ್ಲಿದ್ದ ಪ್ರಯಾಣಿಕರು ಶಾಕ್ ಆಗಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೇಲ್ನೋಟಕ್ಕೆ ಬಾಟಲ್ಗಳಲ್ಲಿ ಒತ್ತಡ ಹೆಚ್ಚಾಗಿ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.