ಕರ್ನಾಟಕದಲ್ಲಿಯೂ ಬಾಂಬೆ ಮಿಠಾಯಿ ನಿಷೇಧ ಸಾಧ್ಯತೆ..!
ಜಾತ್ರೆ ಬಂತೆಂದರೆ ಸಾಕು ಎಲ್ಲೆಡೆ ಬಾಂಬೆ ಮಿಠಾಯಿಯದ್ದೇ ಹವಾ. ಗುಲಾಬಿ ಬಣ್ಣದ ಜೊತೆಗೆ ಬಾಯಲ್ಲಿ ಇಟ್ಟೊಡನೆ ಕರಗುವುದರಿಂದ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಸಖತ್ ಫೇವರೇಟ್. ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ‘ಬಾಂಬೆ ಮಿಠಾಯಿ’ ಮಾರಾಟ ನಿಷೇಧಿಸಲಾಗಿದೆ. ಈ ಕಾಟನ್ ಕ್ಯಾಂಡಿಯಲ್ಲಿ ಆರೋಗ್ಯಕ್ಕೆ ಹಾನಿಕರವಾದ ರೊಡಮೈನ್-ಬಿ ಎಂಬ ವಿಷಕಾರಿ ಅಂಶ ಪತ್ತೆಯಾಗಿರುವ ಹಿನ್ನಲೆಯಲ್ಲಿ ಈಗಾಗಲೇ ಪುದುಚೇರಿ ಮತ್ತು ತಮಿಳುನಾಡು ಸರ್ಕಾರಗಳು ಹತ್ತಿ ಕ್ಯಾಂಡಿ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸುವಂತೆ ಒತ್ತಾಯಿಸಿದೆ. ಪರಿಣಾಮ ಇದೀಗಾ ಕರ್ನಾಟಕ ಸರ್ಕಾರವೂ ಕಾಟನ್ ಕ್ಯಾಂಡಿಯ ಮಾದರಿಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ.
ಕರ್ನಾಟಕ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಜಂಟಿ ಆಯುಕ್ತ ಡಾ.ಹರೀಶ್ವರ ಮಾತನಾಡಿ, “ರಾಜ್ಯದಾದ್ಯಂತ ವ್ಯಾಪಾರ ಮೇಳಗಳು, ಮದುವೆಗಳು ಮತ್ತು ಉದ್ಯಾನವನಗಳು ಸೇರಿದಂತೆ ವಿವಿಧ ಸ್ಥಳಗಳಿಂದ ಕಾಟನ್ ಕ್ಯಾಂಡಿಯ ತಯಾರಿಕ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಪರೀಕ್ಷೆಯ ಫಲಿತಾಂಶಗಳ ನಂತರ ಅದರ ನಿಷೇಧದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಹೇಳಿದ್ದಾರೆ.
ಆರೋಗ್ಯ ಆಯುಕ್ತರಾದ ಡಿ ರಂದೀಪ್ ಮಾತನಾಡಿ, ಆಹಾರ ಸುರಕ್ಷತಾ ಆಯುಕ್ತರು ಈಗಾಗಲೇ ಕಾಟನ್ ಕ್ಯಾಂಡಿ ಮಾದರಿಗಳ ಸಂಗ್ರಹವನ್ನು ಪ್ರಾರಂಭಿಸಿದ್ದಾರೆ. “ನಾವು ಫಲಿತಾಂಶಗಳನ್ನು ವಿಶ್ಲೇಷಿಸುತ್ತೇವೆ. ಇದಲ್ಲದೆ, ಆರೋಗ್ಯ ಕಮಿಷನರೇಟ್‌ನಿಂದಲೂ ನಾವು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಮೌಲ್ಯಮಾಪನ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಫೋರ್ಟಿಸ್ ಆಸ್ಪತ್ರೆಯ ವೈದ್ಯಕೀಯ ಆಂಕೊಲಾಜಿಯ ಹಿರಿಯ ಸಲಹೆಗಾರ ಡಾ ವಿವೇಕ್ ಬೆಳತ್ತೂರ್ ಮಾತನಾಡಿ, ರೋಡಮೈನ್-ಬಿ ಬಣ್ಣವು ಕ್ಯಾನ್ಸರ್ ಕಾರಕ ಎಂದು ತಿಳಿದುಬಂದಿದೆ. ಕಾಟನ್ ಕ್ಯಾಂಡಿಗೆ ಮಾತ್ರವಲ್ಲದೆ ಜೆಲ್ಲಿಗಳು ಮತ್ತು ಮಿಠಾಯಿಗಳಿಗೆ ಆಕರ್ಷಕ ಬಣ್ಣಗಳನ್ನು ನೀಡಲು ಬಳಸಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ರೋಡಮೈನ್-ಬಿ ಆಹಾರಕ್ಕೆ ಸೇರಿಸಿದಾಗ ಆಹಾರದ ಬಣ್ಣವನ್ನು ಹೆಚ್ಚಿಸುತ್ತದೆ. ಇದು ಮಕ್ಕಳು ಮತ್ತು ವಯಸ್ಕರನ್ನು ಆಕರ್ಷಿಸುತ್ತದೆ. ರೋಡಮೈನ್ ಬಿ ಮಾನವರಿಗೆ ವಿಷಕಾರಿಯಾಗಿದೆ ಮತ್ತು ಸೇವಿಸಿದರೆ ಜೀವಕೋಶಗಳು ಮತ್ತು ಅಂಗಾಂಶಗಳ ಮೇಲೆ ಆಕ್ಸಿಡೇಟಿವ್ ಒತ್ತಡವನ್ನು ಉಂಟುಮಾಡಬಹುದು. ಆಹಾರದೊಂದಿಗೆ ಬೆರೆಸಿದಾಗ ಇದು ವಿಶೇಷವಾಗಿ ಅಪಾಯಕಾರಿಯಾಗಿದೆ, ಕಾಲಾನಂತರದಲ್ಲಿ ಯಕೃತ್ತು ಹಾನಿ, ಗೆಡ್ಡೆಗಳು ಮತ್ತು ಕ್ಯಾನ್ಸರ್ಗೆ ಕಾರಣವಾಗುತ್ತದೆ. ಇದಲ್ಲದೆ, ಜೆಲ್ಲಿಗಳು ಮತ್ತು ಮಿಠಾಯಿಗಳಂತಹ ಉತ್ಪನ್ನಗಳನ್ನು ಸೇವಿಸುವುದರಿಂದ ಉಂಟಾಗುವ ಸಂಭಾವ್ಯ ಆರೋಗ್ಯದ ಅಪಾಯಗಳನ್ನು ಜನರು ನಿರ್ಲಕ್ಷಿಸುತ್ತಾರೆ ಎಂದು ಅವರು ಹೇಳಿದರು.