ಬಾಲಿವುಡ್ ಖ್ಯಾತ ಯುವನಟ ಶ್ರೇಯಸ್ ತಲ್ಪಾಡೆಗೆ ಹೃದಯಾಘಾತ!
ಬಾಲಿವುಡ್ (Bollywood) ನ ಖ್ಯಾತ ಯುವನಟ ಶ್ರೇಯಸ್ ತಲ್ಪಾಡೆಗೆ (Shreyas Talpade) ಹೃದಯಾಘಾತವಾಗಿದೆ (Heart Attack). ಶೂಟಿಂಗ್ ಸಮಯದಲ್ಲಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ. ಲಘು ಹೃದಯಾಘಾತವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಅಂಧೇರಿ ಪ್ರದೇಶದ ಬೆಲ್ಲೆವ್ಯೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ನಿನ್ನೆ ರಾತ್ರಿ 10 ಗಂಟಗೆ ವೈದ್ಯರು ಆಂಜಿಯೋಪ್ಲಾಸ್ಟಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಆರೋಗ್ಯ ಸ್ಥಿರವಾಗಿದ್ದು, ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕೆಲವೇ ದಿನಗಳಲ್ಲೇ ನಟ ಮನೆಗೆ ವಾಪಸ್ಸಾಗಲಿದ್ದಾರೆ.
ಲಘು ಹೃದಯಾಘಾತವಾದಾಗ ಶ್ರೇಯಸ್ ವೆಲ್ ಕಲ್ ಟು ಜಂಗಲ್ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಹೃದಯಾಘಾತ ಸಂದರ್ಭದಲ್ಲಿ ಕುಸಿದು ಬಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ.
ಸಲ್ಮಾನ್ ಆಪ್ತನಿಗೆ ರಾಡ್ ನಿಂದ ಹೊಡೆದು ಹಲ್ಲೆ
ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಅವರ ಆಪ್ತ, ಹಾಗೂ ಅವರದ್ದೇ ಪ್ರೊಡಕ್ಷನ್ ಹೌಸ್ ನಲ್ಲಿ ಕೆಲಸ ಮಾಡುತ್ತಿರುವ ಪಾಲೇಶ್ವರ್ ಚೌಹಾಣ್ (Paleshwar Chauhan) ಎನ್ನುವವರ ಮೇಲೆ ರಾಡ್ ನಿಂದ ಹಲ್ಲೆ ಮಾಡಲಾಗಿದೆ. ಹಣಕಾಸಿಗೆ ಸಂಬಂಧಿಸಿದಂತೆ ಈ ಗಲಾಟೆ ನಡೆದಿದ್ದು, ಬಾರ್ ವೊಂದರ ಮುಂದೆ ಹಲ್ಲೆ ಮಾಡಲಾಗಿದೆ ಎನ್ನುವ ವಿಚಾರ ಗೊತ್ತಾಗಿದೆ. ಈ ಹಲ್ಲೆ ಮೊದ ಮೊದಲು ಭಾರೀ ಆತಂಕ ಸೃಷ್ಟಿಯಾಗಿತ್ತು. ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಇರುವ ಕಾರಣದಿಂದಾಗಿ ಆ ಘಟನೆಗೂ ಇದಕ್ಕೂ ತಳಕು ಹಾಕಲಾಗಿತ್ತು.
ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಈ ಹಿಂದೆ ಲಾರೆನ್ಸ್ ಸಹಚರರನ್ನು ಬಂಧಿಸಿ ಅಗತ್ಯ ಮಾಹಿತಿಯನ್ನು ಮುಂಬೈ ಪೊಲೀಸ್ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಗಾಬರಿ ಹುಟ್ಟಿಸುವಂತಹ ಹೇಳಿಕೆಗಳು ಆ ಟೀಮ್ ನಿಂದ ಬಂದಿವೆ ಎಂದು ಸುದ್ದಿ ಆಗಿತ್ತು. ಹಾಗಾಗಿ ಈ ಹಿಂದೆಯೂ ಸಲ್ಮಾನ್ ಖಾನ್ ಗೆ ಭಾರೀ ಭದ್ರತೆ ನೀಡಲಾಗಿತ್ತು.
ಸಲ್ಮಾನ್ ಖಾನ್ ಗೆ ಈ ಹಿಂದೆ ಬರೆದ ಪತ್ರದಲ್ಲಿ ಮನೆಯ ಮುಂದೇ ಅವರನ್ನು ಕೊಲ್ಲಲು ಪ್ಲ್ಯಾನ್ ಮಾಡಿರುವ ವಿಷಯವನ್ನು ಲಾರೆನ್ಸ್ ಅಂಡ್ ಟೀಮ್ ಬಹಿರಂಗಪಡಿಸಿತ್ತು. ಈ ಹತ್ಯೆಗಾಗಿ ಗನ್ ಕೂಡ ಖರೀದಿಸಲಾಗಿತ್ತು ಎನ್ನುವ ವಿಷಯವನ್ನು ಬಾಯ್ಬಿಟ್ಟಿದ್ದರು. ಅಲ್ಲದೇ, ಯಾವುದೇ ಕಾರಣಕ್ಕೂ ಸಲ್ಮಾನ್ ಖಾನ್ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದೂ ಹೇಳಿರುವ ಅಂಶ ಬೆಳಕಿಗೆ ಬಂದಿತ್ತು.
ಪ್ರತಿ ವರ್ಷವೂ ಸಲ್ಮಾನ್ ಖಾನ್ ಮನೆಯ ಮುಂದೆ ನಿಂತು ಅಭಿಮಾನಿಗಳಿಗೆ ಈದ್ ಶುಭಾಶಯ ಹೇಳುವುದನ್ನು ಸಂಪ್ರದಾಯದಂತೆ ಪಾಲಿಸಿಕೊಂಡು ಬಂದಿದ್ದರು. ಆದರೆ, ಈ ಬಾರಿ ಅವರು ಹಾಗೆ ಮಾಡಲಿಲ್ಲ. ಅಭಿಮಾನಿಗಳ ಮಧ್ಯೆಯ ಆಗಂತುಕರು ಬರಬಹುದು ಎನ್ನುವ ಆತಂಕದಿಂದಾಗಿ ವಿಶ್ ಮಾಡಲಿಲ್ಲ. ಮುಂಬೈ ಮತ್ತು ದೆಹಲಿ ಪೊಲೀಸರು ಲಾರೆನ್ಸ್ ಅಂಡ್ ಟೀಮ್ ಬೆನ್ನು ಬಿದ್ದಿದ್ದು, ಹಲವು ಆಘಾತಕಾರಿ ಅಂಶಗಳನ್ನು ಅವರಿಂದ ಪಡೆಯುತ್ತಿದ್ದಾರೆ. ಈ ನಡುವೆ ಲಾರೆನ್ಸ್ ಮತ್ತೊಂದು ಸಂದೇಶವನ್ನು ಕಳುಹಿಸಿ ಮತ್ತಷ್ಟು ನಿದ್ದೆಗೆಡಿಸಿದ್ದಾರೆ.