Board Exam:5, 8, 9ನೇ ತರಗತಿ ಪರೀಕ್ಷೆ ಮುಂದೂಡಿಕೆ; ಶಿಕ್ಷಣ ಇಲಾಖೆ ಆದೇಶ
ಬೆಂಗಳೂರು: ರಾಜ್ಯದಲ್ಲಿ ಪಬ್ಲಿಕ್ ಪರೀಕ್ಷೆಗೆ (Public Exam) ಸುಪ್ರೀಂಕೋರ್ಟ್ ತಡೆಯಾಜ್ಞೆ (Supreme Court Stay) ನೀಡಿರುವ ಹಿನ್ನೆಲೆಯಲ್ಲಿ 5,8 ಮತ್ತು 9ನೇ ತರಗತಿಗೆ ಮಾರ್ಚ್ 13ರಿಂದ 16ರವರೆಗೆ ನಡೆಯಬೇಕಾಗಿದ್ದ ಮೌಲ್ಯಾಂಕನ ಪರೀಕ್ಷೆಯನ್ನು ಮುಂದಿನ ಸೂಚನೆವರೆಗೆ ಮುಂದೂಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ (School Education department) ಸುತ್ತೋಲೆ ಹೊರಡಿಸಿದೆ. ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಹೊರಡಿಸಿರುವ ಈ ಸುತ್ತೋಲೆಯಲ್ಲಿ 2023-24ನೇ ಸಾಲಿನಲ್ಲಿ ರಾಜ್ಯ ಪಠ್ಯ ಕ್ರಮ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5,8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಬೇಕಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪ್ರಕಟಿಸಿದೆ.
ರಾಜ್ಯದಲ್ಲಿ ಮಾರ್ಚ್ 11ರಂದು ಆರಂಭವಾಗಿರುವ 5,8 ಮತ್ತು 9ನೇ ತರಗತಿ ಪಬ್ಲಿಕ್ ಪರೀಕ್ಷೆಯನ್ನು ತಕ್ಷಣವೇ ಮುಂದೂಡುವಂತೆ (Order to Postpone Exam) ಸುಪ್ರೀಂಕೋರ್ಟ್ (Supreme court Order) ಆದೇಶ ನೀಡಿತ್ತು. ಪಬ್ಲಿಕ್ ಪರೀಕ್ಷೆ ವಿಚಾರದಲ್ಲಿ ಶಿಕ್ಷಣ ಇಲಾಖೆ ಮತ್ತು ಖಾಸಗಿ ಶಾಲೆಗಳ ಒಕ್ಕೂಟದ ನಡುವೆ ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದ ಕಾನೂನು ಸಮರ ಸುಪ್ರೀಂಕೋರ್ಟ್ ಕೋರ್ಟ್ ಮೆಟ್ಟಿಲು ಹತ್ತಿ ಇದೀಗ ಸುಪ್ರೀಂಕೋರ್ಟ್ ಪರೀಕ್ಷೆಯನ್ನು ಮುಂದೂಡಲು ಆದೇಶಿಸಿದೆ.
ಪರೀಕ್ಷೆ ಮಾಡಬೇಡಿ: ಪ್ರಶ್ನೆಪತ್ರಿಕೆ ಸುರಕ್ಷಿತವಾಗಿಡಿ
- 2023-24ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಕಾರ್ಯವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಕೆ.ಎಸ್.ಕ್ಯು.ಎ.ಎ.ಸಿ ವತಿಯಿಂದ ನಡೆಸಲಾಗುತ್ತಿದೆ.
- ಸದರಿ ಮೌಲ್ಯಾಂಕನವನ್ನು ಹೈಕೋರ್ಟ್ ಏಕಸದಸ್ಯ ಪೀಠವು ರದ್ದುಪಡಿಸಿ ನೀಡಿದ್ದ ತೀರ್ಪಿಗೆ ವಿಭಾಗೀಯ ಪೀಠವು ಮಧ್ಯಂತರ ತಡೆಯಾಜ್ಞೆ ನೀಡಿರುತ್ತದೆ.
- ಸದರಿ ವಿಭಾಗೀಯ ಪೀಠವು ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಘನ ಸರ್ವೋಚ್ಛ ನ್ಯಾಯಾಲಯವು ರದ್ದುಪಡಿಸಿರುತ್ತದೆ.
- ಹಾಗಾಗಿ 5ನೇ ತರಗತಿಯ ವಿದ್ಯಾರ್ಥಿಗಳಿಗೆ ದಿನಾಂಕ: 13.03.2024 ರಿಂದ 14.03.2024 ರವರೆಗೆ ಹಾಗೂ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ:13.03.2024 ರಿಂದ 16.03.2024 ರವರೆಗೆ ನಡೆಸಬೇಕಿರುವ ಮೌಲ್ಯಾಂಕನವನ್ನು ಮುಂದೂಡಲಾಗಿರುತ್ತದೆ.
- ಸದರಿ ಮಾಹಿತಿಯನ್ನು ಸಂಬಂಧಿಸಿದ ಉಪನಿರ್ದೇಶಕರು(ಆಡಳಿತ) ಮತ್ತು ಬ್ಲಾಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಮುಖ್ಯ ಶಿಕ್ಷಕರು/ ಪ್ರಾಂಶುಪಾಲರಿಗೆ ತಿಳಿಸಿ ಸೂಕ್ತ ಕ್ರಮವಹಿಸುವುದು.
- ಈ ಕಚೇರಿಯ ಮುಂದಿನ ಆದೇಶದವರೆಗೆ ಈಗಾಗಲೇ ಕ್ಷೇತ್ರಶಿಕ್ಷಣಾಧಿಕಾರಿಗಳ ಹಂತಕ್ಕೆ ಸರಬರಾಜಾಗಿರುವ ಪ್ರಶ್ನೆಪತ್ರಿಕೆಗಳನ್ನು ತಮ್ಮ ಹಂತದಲ್ಲಿ ಸಂರಕ್ಷಿಸಿ ಸುರಕ್ಷಿತವಾಗಿಡಲು ಎಲ್ಲಾ ಬ್ಲಾಕುಗಳ ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರು (ಆಡಳಿತ) ರವರು ಸೂಕ್ತ ಕ್ರಮವಹಿಸುವುದು.
ಸುಪ್ರೀಂಕೋರ್ಟ್ ಆದೇಶದಂತೆ ಶಾಲಾ ಶಿಕ್ಷಣ ಇಲಾಖೆ ಪರೀಕ್ಷೆಗಳನ್ನು ಮುಂದೂಡಿದೆ. ಕೆಲವು ಖಾಸಗಿ ಶಾಲೆಗಳು ಮುಂದಿನ ಆದೇಶದವರೆಗೆ ಮಕ್ಕಳು ಶಾಲೆಗೆ ಬರುವುದು ಬೇಡ. ಮನೆಯಲ್ಲೇ ಇದ್ದು ಓದಿಕೊಳ್ಳುವಂತೆ, ಪರೀಕ್ಷೆ ಇಲ್ಲದ ಅವಧಿಯನ್ನು ಓದುವ ರಜೆ ಎಂದು ಪರಿಗಣಿಸಬೇಕು ಎಂದು ಸೂಚಿಸಿದೆ.
ಮಾ. 13ರಂದು ಹೈಕೋರ್ಟ್ ವಿಚಾರಣೆ ಸಾಧ್ಯತೆ
- ಸದ್ಯದ ಸೂಚನೆ ಪ್ರಕಾರ, ಈಗ ನಡೆಯುತ್ತಿರುವ ಪರೀಕ್ಷೆಯನ್ನು ಮುಂದೂಡುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
- ಮುಂದಿನ ಆದೇಶದ ವರೆಗೆ ಪರೀಕ್ಷೆಗಳನ್ನು ಮುಂದೂಡುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಶಾಲೆಗಳು ಪರೀಕ್ಷೆಯನ್ನು ಮುಂದೂಡಿವೆ.
- ರಾಜ್ಯ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದ ಮಧ್ಯಂತರ ಆದೇಶದ ಬಗ್ಗೆ ತ್ವರಿತ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ಹೈಕೋರ್ಟ್‌ಗೆ ಸೂಚಿಸಿದೆ.
- ಹೈಕೋರ್ಟ್ ವಿಚಾರಣೆಯ ವೇಳೆ ಹೈಕೋರ್ಟ್ ಸ್ವಂತ ವಿವೇಚನೆಯನ್ನು ಬಳಸಲಿ ಮತ್ತು ಸುಪ್ರೀಂಕೋರ್ಟ್‌ನ ಅಭಿಪ್ರಾಯಗಳಿಂದ ಪ್ರಭಾವಿತವಾಗದಿರಲಿ ಎಂದು ಹೇಳಿದೆ.
- ಅಂದರೆ ಹೈಕೋರ್ಟ್‌ನ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿ ತನ್ನ ತೀರ್ಪನ್ನು ನೀಡಬಹುದಾಗಿದೆ. ಮತ್ತು ಇದು ಅಂತಿಮವಾಗಿರುವ ಸಾಧ್ಯತೆ ಇದೆ.