ಹರಿಯಾಣದಲ್ಲಿ ಬಿಜೆಪಿಯಿಂದ ಮಹಿಳೆಯರಿಗೆ ಹಾಗೂ ಪುರುಷರಿಗೂ ಉಚಿತ ಬಸ್ ಪ್ರಯಾಣ ಘೋಷಣೆ!
ಚಂಡೀಗಢ: ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಿಸಿ ಕಳೆದ ಚುನಾವಣೆಯಲ್ಲಿ ಗೆದ್ದು ನಂತರ ಶಕ್ತಿ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಇದೇ ಮಾದರಿಯಲ್ಲಿ ಉಚಿತ ಬಸ್ ಪ್ರಯಾಣದ ಯೋಜನೆಯನ್ನು ಹರಿಯಾಣದ ಬಿಜೆಪಿ ಸರ್ಕಾರ ಘೋಷಣೆ ಮಾಡಿದೆ. ಶುಕ್ರವಾರ ಬಜೆಟ್ ಮಂಡಿಸಿದ ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು ಉಚಿತ ಬಸ್ ಪ್ರಯಾಣದ ಘೋಷಣೆಯನ್ನು ಮಾಡಿದರು.
ಆದರೆ ಹರಿಯಾಣ ರಾಜ್ಯ ಸರ್ಕಾರ ಘೋಷಿಸಿರುವ ಉಚಿತ ಬಸ್ ಪ್ರಯಾಣ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲರೂ ಇದನ್ನು ಬಳಸಬಹುದು. ಬಹುತೇಕ ಬರುವ ಏಪ್ರಿಲ್ 1 ರಿಂದ ಇದು ಜಾರಿಯಾಗಲಿದೆ.
ಆದರೆ ಇದನ್ನು ಬಳಸುವವರು ಆದಾಯ ಮಿತಿ 1 ಲಕ್ಷದ ಒಳಗೆ ಇರಬೇಕು. ಈ ಆದಾಯ ಮಿತಿ ಹೊಂದಿರುವವರು ಹರಿಯಾಣ ಸಾರಿಗೆ ಬಸ್ ಸಂಸ್ಥೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶವಿದೆ. ಒಂದು ಸಾವಿರ ಕಿ.ಮಿ.ವರೆಗೂ ಉಚಿತವಾಗಿ ಸಂಚರಿಸಲು ಅವಕಾಶವಿದೆ ಎಂದು ಖಟ್ಟರ್ ತಿಳಿಸಿದರು.
ಹರಿಯಾಣದಲ್ಲಿರುವ ಸುಮಾರು 22.89 ಲಕ್ಷ ಕುಟುಂಬಗಳಿಗೆ ಉಚಿತ ಬಸ್ ಪ್ರಯಾಣ ಯೋಜನೆಯಿಂದ ಲಾಭವಾಗಲಿದೆ. ಇದಕ್ಕಾಗಿ ಯೋಜನೆಯನ್ನು ರೂಪಿಸಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಇದಲ್ಲದೇ ಪಂಜಾಬ್, ಹರಿಯಾಣದಲ್ಲಿ ರೈತರು ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಬದ್ದವಾಗಿ ನೀಡಬೇಕು ಎನ್ನುವುದು ಸೇರಿದಂತೆ ಹಲವಾರು ಬೇಡಿಕೆಗಳೊಂದಿಗೆ ಹೋರಾಟ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಹರಿಯಾಣ ಸರ್ಕಾರ ಹಲವಾರು ಅಂಶಗಳನ್ನು ರೈತಪರವಾಗಿ ಪ್ರಕಟಿಸಿ ಅನ್ನದಾತ ಆಕ್ರೋಶದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ.
ಹರಿಯಾಣ ರಾಜ್ಯ ಸರ್ಕಾರ ಸಹಕಾರ ಸಂಸ್ಥೆಗಳು ಹಾಗೂ ಬ್ಯಾಂಕ್‌ಗಳಿಂದ ಪಡೆದ ಕೃಷಿ ಸಾಲದ ಬಡ್ಡಿ ಮನ್ನಾ ಮಾಡುವ ಘೋಷಣೆಯೂ ಆಗಿದೆ. ಇದರಲ್ಲಿ ರೈತರ ದಂಡವೂ ಸೇರಿದೆ. ಆದರೆ ರೈತರು 2024ರ ಮೇ ಒಳಗೆ ಸಾಲದ ಅಸಲನ್ನು ಕಡ್ಡಾಯವಾಗಿ ತುಂಬಬೇಕು. ಸಾಲ ತುಂಬಿದವರಿಗೆ ಬಡ್ಡಿ ಹಾಗೂ ದಂಡದ ಮನ್ನಾ ಆಗಲಿದೆ ಎಂದು ಖಟ್ಟರ್ ವಿವರಿಸಿದರು.
ಮುಂದಿನ ವರ್ಷ ಹರಿಯಾಣದಲ್ಲಿ ಚುನಾವಣೆ ನಡೆಯುವುದರಿಂದ ಸರ್ಕಾರ ಎಲ್ಲ ವರ್ಗಗಳನ್ನು ಮೆಚ್ಚಿಸುವ ಕೆಲಸ ಮಾಡಿದೆ. ಇದರಲ್ಲಿ ಉಚಿತ ಬಸ್ ಪ್ರಯಾಣ ಕೂಡ ಸೇರಿದೆ.
ಕರ್ನಾಟಕದಲ್ಲಿ ಶಕ್ತಿ ಯೋಜನೆಯೂ ಸೇರಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದೆ. ಪ್ರಧಾನಿ ಮೋದಿ ಅವರು ಗ್ಯಾರಂಟಿ ಯೋಜನೆಯಿಂದ ಸರ್ಕಾರ ದಿವಾಳಿಯಾಗುತ್ತವೆ ಎನ್ನುವ ಹೇಳಿಕೆ ನೀಡಿದ್ದರು. ಇದರ ನಡುವೆ ಬಿಜೆಪಿ ಆಡಳಿತದ ಹರಿಯಾಣ ಸರ್ಕಾರ ಯೋಜನೆಗಳನ್ನು ಬಜೆಟ್ ನಲ್ಲಿ ಘೋಷಿಸಿದೆ.