ಬೈಕ್ ಕಾರು ಅಪಘಾತ; ಬೈಕ್ ಸವಾರ ಮೃತ್ಯು
ಹುಣಸೂರು: ಕಾರು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟು ಬೈಕ್ ನಲ್ಲಿದ್ದ ಬಾಲಕಿ ಗಂಭೀರ ಗಾಯಗೊಂಡಿರುವ ಘಟನೆ ಕೋಟ್೯ ಸರ್ಕಲ್ ನಲ್ಲಿ ಬುಧವಾರ ಸಂಭವಿಸಿದೆ.
ಮೃತ ಯುವಕನನ್ನು ನಗರದ ಮಾರಿಗುಡಿ ಬೀದಿಯ ಮಂಜುನಾಥ್ (26) ಎನ್ನಲಾಗಿದ್ದು ಈತ ಎಚ್ ಡಿ ಎಫ್ ಸಿ ಬ್ಯಾಂಕ್ ನ ಉದ್ಯೋಗಿಯಾಗಿದ್ದ ಎನ್ನಲಾಗಿದೆ.
ಮಂಜುನಾಥ್ ತನ್ನ ತಂಗಿ ಮಗಳು ಪೂರ್ವಿಕಾಳೊಂದಿಗೆ ಬುಲೆಟ್ ಬೈಕಿನಲ್ಲಿ ಬೈಪಾಸ್ ರಸ್ತೆ ಕಡೆ ತೆರಳುತ್ತಿದ್ದ ವೇಳೆ ಮೈಸೂರು ಕಡೆಯಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರೊಂದು ಕೋಟ್೯ ಸರ್ಕಲ್ ನಲ್ಲಿ ಡಿಕ್ಕಿ ಹೊಡೆದಿದೆ ಪರಿಣಾಮ ಮಂಜುನಾಥ್ ಹಾಗೂ ಪೂರ್ವಿಕಾ ಗಂಭೀರ ಗಾಯಗೊಂಡಿದ್ದರು, ಕೂಡಲೇ ಇಬ್ಬರನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಬುಧವಾರ ಮಧ್ಯರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮಂಜುನಾಥ್ ಮೃತಪಟ್ಟಿದ್ದಾರೆ.
ಬಾಲಕಿಯ ಸ್ಥಿತಿ ಚಿಂತಾಜನಕವಾಗಿಯಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಿಕೇಟ್ ಕೇಳಿದ್ದು ಒಂದು ಊರಿಗೆ ನಿರ್ವಾಹಕ ಕೊಟ್ಟಿರುವುದು ಇನ್ನೊಂದು ಊರಿಗೆ
ಕುಷ್ಟಗಿ: ಶಕ್ತಿ ಯೋಜನೆಯಲ್ಲಿ ಬಸ್ ನಿರ್ವಾಹಕನಿಗೆ ಟಿಕೇಟ್ ಕೇಳಿರುವುದು ಒಂದು ಊರು, ಕೊಟ್ಟಿರುವುದು ಮುಂದಿನ ಊರು…ಕೊಡುತ್ತಿರುವ ಆರೋಪ ಕೇಳಿ ಬಂದಿದೆ. ಇಲ್ಲೊಬ್ಬ ಕುಷ್ಟಗಿ ಘಟಕದ ಬಸ್ ನಿರ್ವಾಹಕ ಶಾಲಾ ಬಾಲಕಿ ಕೇಳಿದ್ದು ತಳವಗೇರಾ, ಟಿಕೇಟ್ ಕೊಟ್ಟಿರುವುದು ಹನುಮಸಾಗರಕ್ಕೆ…ಟಿಕೇಟ್ ಕೇಳಿ ಪಡೆದರೆ ಹೀಗೆ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಳೆದ ಸೆ.6 ರಂದು ಕುಷ್ಟಗಿಯ 6ನೇ ತರಗತಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಕುಷ್ಟಗಿ ಯಿಂದ ತಳವಗೇರಾಕ್ಕೆ 12 ರೂ. ಪಡೆದು ಇಳಿಸಬೇಕಿತ್ತು. ನಿರ್ವಾಹಕ ಮಹಾಶಯ, ಮುಂದಿನ ಊರು ಹನುಮಸಾಗರಕ್ಕೆ 28 ರೂ. ಟಿಕೇಟ್ ನೀಡಿ ತಳವಗೇರಾಕ್ಕೆ ಇಳಿಸಿದ್ದಾನೆ.
ಕುಷ್ಟಗಿಯಿಂದ ಬಸ್ ಹತ್ತಿಸಿಕೊಂಡ ಈ ನಿರ್ವಾಹಕನಿಗೆ ವಿದ್ಯಾರ್ಥಿನಿ ತಂದೆ ಮಂಜುನಾಥ ಕಟ್ಟಿಮನಿ ಅವರು ಆಧಾರ್ ಕಾರ್ಡ ಇಲ್ಲ, ತಿದ್ದುಪಡಿ ಪ್ರಕ್ರಿಯಲ್ಲಿದ್ದು ವಿದ್ಯಾರ್ಥಿನಿಯಿಂದ ಹಣ ಪಡೆದು ತಳವಗೇರಾಕ್ಕೆ ಇಳಿಸಲು ವಿನಂತಿಸಿದ್ದಾರೆ.
ತಳವಗೇರಾಕ್ಕೆ ಇಳಿಸಿರುವುದೇನೋ ಸರಿ. ಆದರೆ ಹನುಮಸಾಗರಕ್ಕೆ 28 ರೂ. ಟಿಕೇಟ್ ಯಾಕೆ ನೀಡಿದ? ಎಂಬುದು ವಿದ್ಯಾರ್ಥಿನಿ ಪೋಷಕ ಮಂಜುನಾಥ ಕಟ್ಟಿಮನಿ ಪ್ರಶ್ನಿಸಿದ್ದಾರೆ. ಈ ರೀತಿಯಾಗಿದ್ದಾರೆ ಪ್ರಯಾಣಿಕರು ದೊಡ್ಡವರಾದವರು ನಿರ್ವಾಹಕನನ್ನು ಪ್ರಶ್ನಿಸುತ್ತಿದ್ದರು. ಪಾಪ 6ನೇ ತರಗತಿ ವಿದ್ಯಾರ್ಥಿನಿ ಆಗಿದ್ದರಿಂದ ಪ್ರಶ್ನಿಸದೇ ಟಿಕೇಟ್ ನಷ್ಟೇ ಮೊತ್ತ ನೀಡಿ ಟಿಕೇಟ್ ಪಡೆದುಕೊಂಡಿದ್ದಾಳೆ. ನನ್ನ ಮಗಳು ತಳವಗೇರಾ ಎಂದು ಬಾಯ್ಬಿಟ್ಟು ಹೇಳಿದರೂ, ನಿರ್ವಾಹಕ ಟಿಕೇಟ್ ಮಾತ್ರ ಹನುಮಸಾಗರಕ್ಕೆ ನೀಡಿದ್ದಾನೆ . ನಿರ್ವಾಹಕನ ಎಡವಟ್ಟಿಗೆ ಪಾಲಕ ಮಂಜುನಾಥ ಕಟ್ಟಿಮನಿ ಅವರು, ಕುಷ್ಟಗಿ ಘಟಕ ವ್ಯವಸ್ಥಾಪಕ ಜಡೇಶ್ ಅವರಿಗೆ ವಿಚಾರಿಸಿದರೆ ಸಮಂಜಸ ಉತ್ತರ ನೀಡದೇ ಹಾರಿಕೆ ಉತ್ತರ ನೀಡಿರುವುದಕ್ಕೆ ಮಂಜುನಾಥ ಕಟ್ಟಿಮನಿ ಸಾರ್ವಜನಿಕ ಬಸ್ ಸೇವೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.