ಬಿಗ್ಬಾಸ್ ಕನ್ನಡ ಸೀಸನ್ 10 ವಿನ್ನರ್ ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್ ರನ್ನರ್ ಅಪ್...!
112 ದಿನಗಳ ಸುದೀರ್ಘ ಪಯಣ ಇಂದು ಅಂತ್ಯವಾಗಿದೆ. ಬಿಗ್ಬಾಸ್ (BiggBoss) ಗೆಲ್ಲಲು 16 ಮಂದಿಯಿಂದ ಪ್ರಾರಂಭವಾದ ಓಟದಲ್ಲಿ ಕೊನೆಯದಾಗಿ ಗೆಲುವು ಕಂಡಿರುವುದು ಕಾರ್ತಿಕ್ ಮಹೇಶ್. ಕೊನೆಯ ಕ್ಷಣದಲ್ಲಿ ಬಿಗ್ಬಾಸ್ ಮನೆಗೆ ಬರಲು ತೆಗೆದುಕೊಂಡ ನಿರ್ಣಯ ಅವರ ಕೈಹಿಡಿದಿದೆ. ಹಲವು ಏಳು-ಬೀಳುಗಳಿದ್ದ ಪಯಣದಲ್ಲಿ ಕಾರ್ತಿಕ್ ಮಹೇಶ್ ಗಮ್ಯ ತಲುಪಿದ್ದಾರೆ. ಅವರಿಗೆ ಬರೋಬ್ಬರಿ 2,97,39,904 ಮತ ಗಳಿಸಿದ್ದಾರೆ. ಹಲವು ಏಳು-ಬೀಳು, ನೋವು, ಬೇಸರ, ಖುಷಿಗಳನ್ನು ಸಹ ಕಂಡಿದ್ದ ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿದ್ದಾರೆ.
ಸ್ವತಃ ಕಾರ್ತಿಕ್ ಮಹೇಶ್ ಹೇಳಿಕೊಂಡಿರುವಂತೆ ಬಿಗ್ಬಾಸ್ಗೆ ಬರುವ ನಿರ್ಧಾರವನ್ನು ಒಂದೇ ದಿನದಲ್ಲಿ ತೆಗೆದುಕೊಂಡು ಅವರು ಬಿಗ್ಬಾಸ್ಗೆ ಬಂದರಂತೆ. ಆ ಆತುರದ ನಿರ್ಧಾರ ಅವರಿಗೆ ಗೆಲುವು ತಂದುಕೊಟ್ಟಿದೆ. ಆರನೇ ಕಂಟೆಸ್ಟೆಂಟ್ ಆಗಿ ಕಷ್ಟದಲ್ಲೇ ಕಾರ್ತಿಕ್ ಮಹೇಶ್ ಫಿನಾಲೆ ವಾರಕ್ಕೆ ಬಂದಿದ್ದರು. ಫಿನಾಲೆ ವಾರದಲ್ಲಿ ಯಾರು ಮನೆಯಿಂದ ಹೊರಗೆ ಹೋಗುತ್ತಾರೆ ಎಂದಾಗ ಬಹುತೇಕರು ಹೇಳಿದ್ದಿದ್ದು ಕಾರ್ತಿಕ್ ಹೆಸರನ್ನು ಆದರೆ ಅದೆಲ್ಲವೂ ಸುಳ್ಳಾಗಿದೆ.
ಕಾರ್ತಿಕ್ರ ಬಿಗ್ಬಾಸ್ ಜರ್ನಿ ಹಲವು ಏರು-ಪೇರುಗಳನ್ನು ಒಳಗೊಂಡಿತ್ತು. ಆರಂಭದಲ್ಲಿ ಅವರು ಅಸಮರ್ಥರಾಗಿ ಮನೆಗೆ ಎಂಟ್ರಿ ಕೊಟ್ಟರು. ಆರಂಭದಲ್ಲಿ ಸಂಗೀತಾ ಜೊತೆ ಗೆಳೆತನ ಮಾಡಿ ಬೆನ್ನೆಲುಬಾಗಿದ್ದರು. ಸಂಗೀತಾ ಹಾಗೂ ಕಾರ್ತಿಕ್ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಜೊತೆಗೆ ತನಿಷಾ ಸಹ ಕಾರ್ತಿಕ್ಗೆ ಒಳ್ಳೆಯ ಗೆಳೆಯರಾಗಿದ್ದರು. ಆರಂಭದ ಹಲವು ದಿನ ಮನೆಯ ಗಟ್ಟಿ ಸ್ಪರ್ಧಿಯಾಗಿದ್ದ ವಿನಯ್ಗೆ ಪ್ರಬಲ ಎದುರಾಳಿಯಾಗಿ ಆಡಿದ್ದರು ಕಾರ್ತಿಕ್. ವಿನಯ್ ‘ಗ್ಯಾಂಗ್’ ಅನ್ನು ಸಂಗೀತಾ ಪ್ರಬಲವಾಗಿ ಎದುರಿಸಲು ಕಾರ್ತಿಕ್ ಸಹ ಕಾರಣವಾಗಿದ್ದರು.
ಆದರೆ ಬರಬರುತ್ತಾ ಸಂಗೀತಾ ಕಾರ್ತಿಕ್ರಿಂದ ದೂರಾದರು. ಕಾರ್ತಿಕ್ ವಿರುದ್ಧ ನಂಬಿಕೆ ದ್ರೋಹದ ಆರೋಪವೂ ಬಂತು. ಜೊತೆಗಿದ್ದ ತನಿಷಾ ಸಹ ದೂರಾದರು. ನಮ್ರತಾ ಜೊತೆ ಹತ್ತಿರವಾದರಾದರೂ ಅವರ ಸ್ನೇಹ ಸಂಬಂಧವೂ ಮುರಿದುಬಿತ್ತು. ಮನೆಯಲ್ಲಿ ಒಂಟಿಯಾಗಿದ್ದ ಕಾರ್ತಿಕ್ ಕೆಲ ವಾರ ತುಸು ಲೋ ಆಗಿದ್ದರು.
ಸುದೀಪ್ ಅವರು ಸಹ ಕಾರ್ತಿಕ್ಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಅದಾದ ಬಳಿಕ ಆಟ ಸುಧಾರಿಸಿಕೊಂಡ ಕಾರ್ತಿಕ್ ಫಿನಾಲೆ ವಾರಕ್ಕೆ ಮುನ್ನ ಮತ್ತೆ ಚಿಗುರಿ ನಿಂತು ವಿನ್ನರ್ ಎನಿಸಿಕೊಂಡಿದ್ದಾರೆ. ತನ್ನ ತಾಯಿಗಾಗಿ ಒಂದು ಮನೆ ಕಟ್ಟಿಕೊಡಬೇಕು ಎಂಬ ಆಸೆಯನ್ನು ಕಾರ್ತಿಕ್ ಹೇಳಿಕೊಂಡಿದ್ದರು. ಅಂತೆಯೇ ಈಗ 50 ಲಕ್ಷ ಗೆದ್ದಿದ್ದಾರೆ. ಜೊತೆಗೆ ಒಂದು ಬ್ರಿಜಾ ಕಾರು ಸಹ ಗೆದ್ದಿದ್ದಾರೆ. ಆರಂಭದಿಂದಲೂ ಚೆನ್ನಾಗಿಯೇ ಆಡಿಕೊಂಡು ಬಂದಿದ್ದ ಡ್ರೋನ್ ಪ್ರತಾಪ್ ಎರಡನೇ ಸ್ಥಾನ ಪಡೆದಿದ್ದಾರೆ