ಕಾಂಗ್ರೆಸ್ ಗೆ ಬಿಗ್ ಶಾಕ್; ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರನ್ ಪುತ್ರಿ ಬಿಜೆಪಿ ಸೇರ್ಪಡೆ..!
ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ನಾಯಕ ಪ್ರಕಾಶ್ ಜಾವ್ಡೇಕರ್ ಅವರು ಪದ್ಮಜಾ ವೇಣುಗೋಪಾಲ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಇದಾದ ಬಳಿಕ ಪದ್ಮಜಾ ವೇಣುಗೋಪಾಲ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕೇರಳ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಪದ್ಮಜಾ ವೇಣುಗೋಪಾಲ್ ಅವರು ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ನಾಯಕತ್ವ ಕುರಿತು ಬೇಸರ ಬಿಜೆಪಿ ಸೇರಿದ ಬಳಿಕ ಮಾತನಾಡಿದ ಪದ್ಮಜಾ ವೇಣುಗೋಪಾಲ್ ಅವರು ಕಾಂಗ್ರೆಸ್ ನಾಯಕತ್ವದ ಕುರಿತು ಬೇಸರ ವ್ಯಕ್ತಪಡಿಸಿದರು. “ಕಾಂಗ್ರೆಸ್ ನಾಯಕತ್ವದ ಬಗ್ಗೆ ನನಗೆ ಹಲವು ದಿನಗಳಿಂದಲೂ ಅಸಮಾಧಾನವಿತ್ತು. ಇದರ ಕುರಿತು ಹೈಕಮಾಂಡ್‌ಗೂ ಕೆಲವು ಬಾರಿ ದೂರು ನೀಡಿದ್ದೆ. ಆದರೆ, ಹೈಕಮಾಂಡ್‌ನಿಂದ ನನಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದರಿಂದಾಗಿ ನನಗೆ ತುಂಬ ಬೇಸರವಾಯಿತು. ನನ್ನ ತಂದೆಯೂ ಕಾಂಗ್ರೆಸ್ ನಾಯಕತ್ವದ ಬಗ್ಗೆ ಇದೇ ಅಭಿಪ್ರಾಯ ಹೊಂದಿದ್ದರು. ಕೊನೆಗೆ ನಾನು ಬಿಜೆಪಿ ಸೇರ್ಪಡೆಯಾಗುವ ತೀರ್ಮಾನ ಮಾಡಿದೆ” ಎಂದು ಹೇಳಿದ್ದಾರೆ.
ಪದ್ಮಜ್ಜ ವೇಣುಗೋಪಾಲ್ ರವರ ಹಿನ್ನಲೆ ಏನು? ಕೇರಳದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಕೆ. ಕರುಣಾಕರನ್ ಅವರ ಪುತ್ರಿಯಾಗಿರುವ 64 ವರ್ಷದ ಪದ್ಮಜಾ ವೇಣುಗೋಪಾಲ್ ಅವರು ಬಿಜೆಪಿ ಸೇರುವ ಮೊದಲು ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದರು. ತ್ರಿಶ್ಶೂರ್ ವಿಧಾನಸಭೆ ಕ್ಷೇತ್ರದಿಂದ ಕಳೆದ ಎರಡು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಅವರು ಸೋಲನುಭವಿಸಿದ್ದರು.
2004ರಲ್ಲಿ ಲೋಕಸಭೆ ಚುನಾವಣೆಗೂ ಸ್ಪರ್ಧಿಸಿ ಹಿನ್ನಡೆ ಅನುಭವಿಸಿದ್ದರು. ಈಗ ಅವರು ಬಿಜೆಪಿ ಸೇರ್ಪಡೆಯಾಗಿದ್ದು, ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇವರ ಸಹೋದರ ಕೆ. ಮುರಳೀಧರನ್ ಅವರು ಕಾಂಗ್ರೆಸ್ ಸಂಸದರಾಗಿದ್ದು, ಸಹೋದರಿಯ ತೀರ್ಮಾನದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೇರಳ ಬಿಜೆಪಿ ನಾಯಕರು ಪದ್ಮಜಾ ವೇಣುಗೋಪಾಲ್ ಅವರನ್ನು ಸ್ವಾಗತಿಸಿದ್ದಾರೆ.
#WATCH | Congress leader Padmaja Venugopal, daughter of Congress veteran and former Kerala Chief Minister K Karunakaran, joins the Bharatiya Janata Party in Delhi pic.twitter.com/mGXrJPEF2W
— ANI (@ANI) March 7, 2024