ನವೆಂಬರ್ 25 ಮತ್ತು 26 ರಂದು ದಾಖಲೆ ಬರೆಯಲು ಸಜ್ಜಾದ ಬೆಂಗಳೂರು ಕಂಬಳ ; ಇಲ್ಲಿದೆ ಮಾಹಿತಿ
ಸಾಮಾನ್ಯವಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಾಣಸಿಗುವ ಸಾಂಸ್ಕೃತಿಕ ಕ್ರೀಡೆ ಕಂಬಳವನ್ನು ಇತ್ತೀಚೆಗೆ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾದಲ್ಲಿ ನೀವೆಲ್ಲರೂ ನೋಡಿರುತ್ತೀರಿ. ಕರಾವಳಿ ಭಾಗದ ಜನರ ಹೊರತಾಗಿ ಇತರ ಜಿಲ್ಲೆಗಳ ಜನರು ಈ ಕ್ರೀಡೆಯನ್ನು ವೀಕ್ಷಣೆ ಮಾಡಿರಲು ಸಾಧ್ಯವಿಲ್ಲ. ಆದರೆ, ಕರಾವಳಿಗೆ ಸೀಮಿತವಾಗಿದ್ದ ಕಂಬಳವನ್ನು ಈ ಬಾರಿ ಬೆಂಗಳೂರಿನಲ್ಲಿ ನಡೆಸಲಾಗುತ್ತಿದ್ದು, ನಗರವಾಸಿಗಳಿಗೆ ಕೋಣಗಳ ಗತ್ತಿನ ಓಟವನ್ನು ಕಣ್ತುಂಬಿಕೊಳ್ಳುವ ಅವಕಾಶ ಬಂದೊದಗಿದೆ.
ಕೆಲವೊಂದು ದಾಖಲೆಗಳನ್ನು ಬರೆಯಲು ಸಜ್ಜಾಗುತ್ತಿರುವ ಈ ಬೆಂಗಳೂರು ಕಂಬಳ ಯಾವಾಗ ನಡೆಯುತ್ತದೆ? ಎಲ್ಲಿ ನಡೆಯುತ್ತದೆ? ಎಷ್ಟು ಕೋಣಗಳು ಪಾಲ್ಗೊಳ್ಳುತ್ತಿವೆ? ಎಷ್ಟು ಲಕ್ಷ ವೀಕ್ಷಕರು ಆಗಮಿಸಲಿದ್ದಾರೆ? ಇತ್ಯಾದಿ ಮಾಹಿತಿಗಳು ಇಲ್ಲಿವೆ ನೋಡಿ.
ನಗರದ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26 ರಂದು ಕಂಬಳ ಕ್ರೀಡೆ ನಡೆಯಲಿದೆ. ರಾಜಕಾರಣಿಗಳು, ನಟ-ನಟಿಯರು ಸೇರಿದಂತೆ ಗಣ್ಯಾತಿ ಗಣ್ಯರು ಕಂಬಳ ವೀಕ್ಷಣೆಗೆ ಆಗಮಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ, ವಸ್ತು ಪ್ರದರ್ಶನ, ಆಹಾರ ಮೇಳವೂ ಇರಲಿದೆ.
ಎಷ್ಟು ಜೋಡಿ ಕೋಣಗಳು ಪಾಲ್ಗೊಳ್ಳಲಿವೆ?
ಕರಾವಳಿಯಲ್ಲಿ ನಡೆಯುವ ಕಂಬಳದಲ್ಲಿ ಸಾಮಾನ್ಯವಾಗಿ 100 ರಿಂದ 150 ಜೋಡಿ ಕೋಣಗಳು ಪಾಲ್ಗೊಳ್ಳುತ್ತವೆ. ಆದರೆ ಬೆಂಗಳೂರು ಕಂಬಳದಲ್ಲಿ 200 ಜೋಡಿ ಕೋಣಗಳು ಪಾಲ್ಗೊಳ್ಳುತ್ತಿದ್ದು, ಹೊಸ ದಾಖಲೆ ಬರೆಯಲಿದೆ. 200 ಜೋಡಿ ಕೋಣಗಳಲ್ಲಿ ಮೆಡಲ್ಗಳನ್ನು (ಪದಕ), ಪ್ರಶಸ್ತಿಗಳನ್ನು ಗೆದ್ದಿರುವ ಸುಮಾರು 100 ಜೋಡಿಗಳು ಒಳಗೊಂಡಿವೆ. ಬೆಂಗಳೂರು ಕಂಬಳದಲ್ಲಿ ಭಾಗವಹಿಸಲು 15 ಜೋಡಿ ಹೊಸ ಕೋಣಗಳನ್ನು ಖರೀದಿಸಿ ಓಟಕ್ಕೆ ಸಜ್ಜುಗೊಳಿಸಲಾಗಿದ್ದು, ಮೊದಲ ಬಾರಿಗೆ ಕೆರೆಗೆ ಇಳಿಸಲಾಗುತ್ತಿದೆ.
ಮೆರೆವಣಿಗೆ ಮೂಲಕ ಬೆಂಗಳೂರಿಗೆ ಕೋಣಗಳು
ಇದೇ ಮೊದಲ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಕಂಬಳವನ್ನು ಅದ್ದೂರಿಯಾಗಿ ನಡೆಸಲು ಕಂಬಳ ಸಮಿತಿ ಭರ್ಜರಿ ತಯಾರಿ ನಡೆಸಿದೆ. ಕಂಬಳದಲ್ಲಿ ಪಾಲ್ಗೊಳ್ಳುವ ಕೋಣಗಳನ್ನು ನ.23 ರಂದು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಗೆ ಕರೆತರಲಾಗುತ್ತದೆ. ಅಲ್ಲಿ ಲಾರಿಗಳಿಗೆ ಕೋಣಗಳನ್ನು ಹತ್ತಿಸಿ ಮೆರವಣಿಗೆ ಮೂಲಕ ಬೆಂಗಳೂರಿಗೆ ಕರೆತರಲಾಗುತ್ತದೆ. ದಾರಿ ಮಧ್ಯೆ ಹಾಸನದಲ್ಲಿ ಕೋಣಗಳಿಗೆ ಆಹಾರದ ವ್ಯವಸ್ಥೆ ಮಾಡಲಾಗುತ್ತಿದೆ. ಈ ಮೆರವಣಿಯಲ್ಲಿ ಸುಮಾರು 5 ಸಾವಿರ ಜನರು ಬರಲಿದ್ದಾರೆ.
ದಾಖಲೆಯ ಕಂಬಳ ಕೆರೆ ಸಜ್ಜು
ಸಾಮಾನ್ಯವಾಗಿ ಕಂಬಳದ ಕೆರೆ 140 ರಿಂದ 145 ಮೀಟರ್ ಉದ್ದ ಇರುತ್ತದೆ. ಆದರೆ, ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳದ ಕೆರೆಯು ದಾಖಲೆಯನ್ನು ಬರೆಯಲಿದೆ. ಹೌದು, ಅರಮನೆ ಮೈದಾನದಲ್ಲಿ 155 ಮೀಟರ್ ಉದ್ದದ ಕೆರೆಗಳನ್ನು ನಿರ್ಮಾಣ ಮಾಡಲಾಗಿದೆ.
ಕಂಬಳ ಓಟದ ವಿಧಗಳು
- ನೇಗಿಲು (ಹಿರಿಯ ಮತ್ತು ಕಿರಿಯ)
- ಹಗ್ಗ (ಹಿರಿಯ ಮತ್ತು ಕಿರಿಯ)
- ಕನೆ ಹಲಿಗೆ ಮತ್ತು ಅಡ್ಡಹಲಿಗೆ
ಗೆದ್ದ ಕೋಣಗಳಿಗೆ ಬಹುಮಾನ
ಕಂಬಳ ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗೆದ್ದ ಕೋಣಗಳಿಗೆ 8 ಗ್ರಾಂ ಚಿನ್ನದ ಪದಕ, ನಗದು, ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಅದರಂತೆ, ಬೆಂಗಳೂರಿನಲ್ಲೂ ಬಹುಮಾನಗಳನ್ನು ಇಡಲಾಗಿದ್ದು, ಸಾಮಾನ್ಯವಾಗಿ ನೀಡುತ್ತಿದ್ದ ಚಿನ್ನದ ಪದಕದಲ್ಲಿನ ಗ್ರಾಂ ಅನ್ನು ಹೆಚ್ಚಿಸಲಾಗಿದೆ. ಅಲ್ಲದೆ, ಮೂರನೇ ಬಹುಮಾನವನ್ನೂ ನೀಡಲಾಗುತ್ತಿದೆ.
- ಪ್ರಥಮ: 16 ಗ್ರಾಂ ಚಿನ್ನದ ಪದಕ ಮತ್ತು 1 ಲಕ್ಷ ನಗದು
- ದ್ವಿತೀಯ: 8 ಗ್ರಾಂ ಚಿನ್ನದ ಪದಕ ಮತ್ತು 50 ಸಾವಿರ ನಗದು
- ತೃತೀಯ: 4 ಗ್ರಾಂ ಚಿನ್ನದ ಪದಕ ಮತ್ತು 25 ಸಾವಿರ ನಗದು
ಲಕ್ಷಾಂತರ ಜನರ ಆಗಮನದ ನಿರೀಕ್ಷೆ
ಇತಿಹಾಸದಲ್ಲೇ ಮೊದಲ ಬಾರಿಗೆ ಕರಾವಳಿ ಬಿಟ್ಟು ಹೊರ ಭಾಗದಲ್ಲಿ ಅಂದರೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ಕಂಬಳ ವೀಕ್ಷಣೆಗೆ 7 ರಿಂದ 8 ಲಕ್ಷ ಜನರು ಬರುವ ನಿರೀಕ್ಷೆ ಇಡಲಾಗಿದೆ. ಅಲ್ಲದೆ, ಎಂಟು ಸಾವಿರ ಮಂದಿಗೆ ಕುಳಿತುಕೊಳ್ಳುವ ಆಸನದ ವ್ಯವಸ್ಥೆ ಮಾಡಲಾಗಿದೆ. 2000 ವಿಐಪಿಗಳು ಆಗಮಿಸಲಿದ್ದು, ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ.
ಟಿಕೆಟ್ ಬುಕ್ಕಿಂಗ್, ಪ್ರವೇಶ ಶುಲ್ಕ
ಬೆಂಗಳೂರು ಕಂಬಳ ವೀಕ್ಷಣೆಗೆ ಟಿಕೆಟ್ ಬುಕ್ಕಿಂಗ್ ಇರಬಹುದು, ಪ್ರವೇಶ ಶುಲ್ಕ ಇರಬಹುದು ಎಂದು ಒಂದಷ್ಟು ಜನರು ಭಾವಿಸಿದ್ದಾರೆ. ಇನ್ನೊಂದಷ್ಟು ಮಂದಿ ಟಿಕೆಟ್ ಬುಕ್ಕಿಂಗ್ ಯಾವಾಗ ಆರಂಭವಾಗುತ್ತದೆ ಎಂದು ಕಾಯುತ್ತಿದ್ದಾರೆ. ಆದರೆ, ಶಾಸಕ ಅಶೋಕ್ ರೈ ತಿಳಿಸಿದಂತೆ, ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಮುಂಗಡ ಕಾಯ್ದಿರಿಸುವಿಕೆಯೂ ಇಲ್ಲ. ಸಾರ್ವಜನಿಕರಿಗೆ ಪ್ರವೇಶ ಮುಕ್ತವಾಗಿದೆ.
ಬೆಂಗಳೂರು ಕಂಬಳದಲ್ಲಿ ಆಹಾರ ಮೇಳ
ಬೆಂಗಳೂರು ಕಂಬಳ ವೀಕ್ಷಣೆಗೆ ಬರುವವರಿಗೆ ಕೋಣಗಳ ಓಟವನ್ನು ವೀಕ್ಷಿಸುವುದರ ಜೊತೆಗೆ ಬಗೆಬಗೆಯ ಖಾದ್ಯಗಳನ್ನು ಸವಿಯಬಹುದಾಗಿದೆ. ಕರಾವಳಿ ಭಾಗದಲ್ಲಿ ಪ್ರಸಿದ್ಧವಾಗಿರುವ ಕೋರಿ (ಕೋಳಿ) ರೊಟ್ಟಿ, ಪುಂಡಿ (ಅಕ್ಕಿ ಕಡುಬು) ಗಸಿ, ಪತ್ರೊಡೆ, ಅಕ್ಕಿ ಸೇಮಿಗೆ, ಹಲಸಿನ ಕಾಯಿ, ಹಣ್ಣಿಗೆ ಸಂಬಂದಿಸಿದ ಬಗೆಬಗೆ ತಿನಿಸುಗಳು ಸೇರಿದಂತೆ ವಿವಿಧ ತಿಂಡಿ ತಿನಿಸುಗಳು ಮೇಳದಲ್ಲಿ ಇರಲಿವೆ. ಆಹಾರಕ್ಕೆ ಸಂಬಂಧಿಸಿದ ಸುಮಾರು 18 ಸ್ಟಾಲ್ಗಳು ಇರಲಿವೆ.
ವಸ್ತು ಪ್ರದರ್ಶನ
ಬೆಂಗಳೂರು ಕಂಬಳದಲ್ಲಿ ಆಹಾರ ಮೇಳ, ಸಾಂಸ್ಕೃತಿ ಕಾರ್ಯಕ್ರಮಗಳು ಮಾತ್ರವಲ್ಲದೆ, ವಸ್ತು ಪ್ರದರ್ಶನವೂ ಇರಲಿದೆ. ಕರಾವಳಿ ಭಾಗದಲ್ಲಿ ಪ್ರಾಚೀನ ಕಾಲದಲ್ಲಿ ಬಳಸುತ್ತಿದ್ದ ವಿವಿಧ ಸಾಮಾಗ್ರಿಗಳು, ಬುಡಕಟ್ಟು ಜನರು ತಯಾರಿಸುವ ವಿವಿಧ ರೀತಿಯ ವಸ್ತುಗಳು ಸೇರಿದಂತೆ ಅನೇಕ ಅಪರೂಪದ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ.