ಬೆಂಗಳೂರು ಕಂಬಳ: ಮುಖ್ಯಮಂತ್ರಿಗೆ ಆಹ್ವಾನ
ಪುತ್ತೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26ರಂದು ನಡೆಯಲಿರುವ ಕಂಬಳ ಕೂಟಕ್ಕೆ ಆಗಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರುವಾರ ಕಂಬಳ ಸಮಿತಿ ಅಧ್ಯಕ್ಷ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದ ಕಂಬಳ ಸಮಿತಿ ಆಹ್ವಾನಿಸಿತು.
ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ದೇಶ, ವಿದೇಶಗಳಿಂದಲೂ ಭಾಗವಹಿಸುವ ಕಾರಣ ಬೆಂಗಳೂರು ಟ್ರಾಫಿಕ್ ಸಮಸ್ಯೆಯ ಬಗ್ಗೆ ಸಿಎಂಗೆ ವಿವರಿಸಿ ವಿವಿಧ ಇಲಾಖೆಗಳ ಸಹಕಾರ ಕೋರಲಾಯಿತು.
2 ಕೋ.ರೂ.ಗೆ ಮನವಿ
ಮೊಟ್ಟ ಮೊದಲ ಬಾರಿಗೆ ರಾಜ್ಯದ ರಾಜಧಾನಿಯಲ್ಲಿ ನಡೆಯುವ ಕಂಬಳಕ್ಕೆ ಸುಮಾರು 7 ಕೋಟಿ ರೂ. ಅಧಿಕ ಖರ್ಚು ತಗಲಲಿದ್ದು ಸರಕಾರ ಕಂಬಳಕ್ಕೆ 2 ಕೋಟಿ ರೂ. ಅನುದಾನ ನೀಡುವಂತೆ ಸಿಎಂಗೆ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಭೇಟಿಯಾಗಿ ಸಹಕಾರವನ್ನು ಕೋರಿದರು.
ಕಂಬಳ ಸಮಿತಿ ಕಾರ್ಯಾಧ್ಯಕ್ಷ ಗುರುಕಿರಣ, ಪ್ರಮುಖರಾದ ಗುಣರಂಜನ್, ಗುಣರಾಜ್ ಶೆಟ್ಟಿ, ಸುಂದರ ರಾಜ್, ಮುರಳೀಧರ್ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.
ಚನ್ನಮ್ಮ, ಟಿಪ್ಪು ಸುಲ್ತಾನ್ ಸ್ವಾಭಿಮಾನಿ ಹೋರಾಟದ ಸ್ಫೂರ್ತಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕಿತ್ತೂರು ರಾಣಿ ಚನ್ನಮ್ಮ, ಟಿಪ್ಪು ಸುಲ್ತಾನ್ ಸ್ವಾಭಿಮಾನಿ ಹೋರಾಟದ ಸ್ಫೂರ್ತಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಜಿಲ್ಲಾಡಳಿತ ಚನ್ನಮ್ಮನ ಕಿತ್ತೂರು ಉತ್ಸವದ ಜ್ಯೋತಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಕಿತ್ತೂರು ಚನ್ನಮ್ಮ ತನ್ನ ಸಣ್ಣ ಸೈನ್ಯದಿಂದ ಬ್ರಿಟಿಷರ ಬೃಹತ್ ಸೈನ್ಯಕ್ಕೆ ಸೆಡ್ಡು ಹೊಡೆದ ಧೀಮಂತ ರಾಣಿ. ಈಕೆಯ ಧೈರ್ಯ ಮತ್ತು ಆದರ್ಶ ಯುವ ಸಮೂಹವನ್ನು, ಇವತ್ತಿನ ಪೀಳಿಗೆಯನ್ನು ತಲುಪಬೇಕು ಎನ್ನುವ ಕಾರಣಕ್ಕೆ ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಕಿತ್ತೂರು ಉತ್ಸವ ಮತ್ತು ಜಯಂತ್ಯೋತ್ಸವವನ್ನು ಆರಂಭಿಸಿದೆ ಎಂದು ವಿವರಿಸಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ್, ಧಾರವಾಡ ಗ್ರಾಮೀಣ ಶಾಸಕ ವಿನಯ್ ಕುಲಕರ್ಣಿ, ಬೈಲಹೊಂಗಲ ಶಾಸಕ ಮಹಂತೇಶ ಕೌಜಲಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.