ಬೆಂಗಳೂರು :ಯುವತಿ ಕೈ ಕೊಟ್ಟಿದ್ದಕ್ಕೆ ಮನೆ ಮುಂದೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಯುವಕ ಸಾವು!
ಬೆಂಗಳೂರು: ಗೆಳತಿಯು ತನ್ನ ಪ್ರೀತಿಯನ್ನು ನಿರಾಕರಿಸಿದಳೆಂದು ಬೇಸತ್ತ ಯುವಕನೋರ್ವ ಮೈಮೇಲೆ ಪೆಟ್ರೋಲ್ (Petrol) ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಈ ಘಟನೆ ಬೆಂಗಳೂರಿನಲ್ಲಿ ಕೆಂಗೇರಿಯ (Kengeri) ಕೊಡಿಗೆ ಪಾಳ್ಯದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಮೃತನನ್ನು ರಾಕೇಶ್ ಎಂದು ಗುರುತಿಸಲಾಗಿದ್ದು, ಈತ ಆನೇಕಲ್ ತಾಲೂಕಿನ ಜಿಗಣಿಯ ಕಲ್ಲುಬಾಳು ಗ್ರಾಮದ ನಿವಾಸಿ.
ನಡೆದಿದ್ದೇನು..?: ಮೃತ ರಾಕೇಶ್ ಕಳೆದ ಐದಾರು ವರ್ಷದಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಇತ್ತೀಚೆಗೆ ಆ ಯುವತಿ ಬೇರೊಬ್ಬ ಯುವಕನ ಜೊತೆ ಮದುವೆಗೆ ಒಪ್ಪಿಕೊಂಡಿದ್ದಳು. ಪರಿಣಾಮ ರಾಕೇಶ್‍ನನ್ನು ನಿಧಾನವಾಗಿ ದೂರ ಮಾಡುತ್ತಾ ಬಂದಳು. ಇತ್ತ ಪ್ರಿಯತಮೆಯ ವರ್ತನೆಯಿಂದ ಅನುಮಾನಗೊಂಡ ರಾಕೇಶ್, ಆಕೆಯನ್ನು ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಗಲಾಟೆ ನಡುವೆ ಯುವತಿ ತನ್ನ ನಿರ್ಧಾರದ ಕುರಿತು ಬಾಯಿಬಿಟ್ಟಿದ್ದಾಳೆ. ಇದರಿಂದ ನೊಂದ ರಾಕೇಶ್ ಕಠಿಣ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದು, ಯುವತಿಯ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಕೂಡಲೇ ರಾಕೇಶ್ ನನ್ನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ರಾಕೇಶ್ ದೇಹದ ಬಹುತೇಕ ಭಾಗ ಸುಟ್ಟು ಹೋಗಿತ್ತು. ತೀವ್ರ ನೋವಿನಿಂದ ಬಳಲುತ್ತಿದ್ದ ರಾಕೇಶ್ ಬುಧವಾರ ರಾತ್ರಿ ಮೃತಪಟ್ಟಿದ್ದಾನೆ.
ಪ್ರಕರಣ ಸಂಬಂಧ ರಾಕೇಶ್ ಕುಟುಂಬಸ್ಥರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜೈನಮುನಿ ಹತ್ಯೆ ಪ್ರಕರಣ- ಹಣವಷ್ಟೇ ಅಲ್ಲ, ಬೈಗುಳವೇ ಕೊಲೆಗೆ ಕಾರಣ?
ಬೆಂಗಳೂರು: ಚಿಕ್ಕೋಡಿಯ ಜೈನಮುನಿ ನಂದಿ ಕಾಮಕುಮಾರ ಸ್ವಾಮೀಜಿ (Jain Monk Nandi Kamakumara Swamiji) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಐಡಿಯು 500ಕ್ಕೂ ಹೆಚ್ಚು ಪುಟಗಳ ಚಾರ್ಜ್‍ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ.
ಜುಲೈ 5ರ ರಾತ್ರಿ ಜೈನಮುನಿಯನ್ನು ಹಂತಕರು ಕರೆಂಟ್ ಶಾಕ್ ಕೊಟ್ಟು ತುಂಡರಿಸಿ ಬೋರ್ ವೆಲ್‍ಗೆ ಬಿಸಾಡಿದ್ದರು. ಇದೀಗ ಹಣವಷ್ಟೇ ಅಲ್ಲ. ಜೈನಮುನಿಯ ಬೈಗುಳವೇ ಕೊಲೆಗೆ ಕಾರಣ ಎಂಬ ಸ್ಫೋಟಕ ಸತ್ಯವನ್ನು ಆರೋಪಿಗಳು ಸಿಐಡಿ ತನಿಖೆಯ ವೇಳೆ ಬಾಯ್ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಚಾರ್ಜ್‍ಶೀಟ್‍ನಲ್ಲಿ ಏನಿದೆ.?: ಆರೋಪಿ ನಾರಾಯಣ ಮಾಳಿಯು ಜೈನಮುನಿ ಜೊತೆ ಹೆಚ್ಚು ಒಡನಾಟ ಹೊಂದಿದ್ದನು. ಇತ್ತ ಆರೋಪಿಗಳು ಜೈನಮುನಿ ಬಳಿ 6 ಲಕ್ಷ ಹಣ ಪಡೆದಿದ್ದರು. ಆರೋಪಿಗಳನ್ನು ಹೀಯಾಳಿಸಿ ನಿಂದನೆ ಜೊತೆ ಬೈದ್ದಿದ್ದರು. ಜೈನಮುನಿ ಬೈಗುಳದಿಂದ ಆರೋಪಿ ನಾರಾಯಣ ಕೊಲೆಗೆ ಪ್ಲಾನ್ ಮಾಡಿದ್ದ. ಜೈನಮುನಿ ಒಬ್ಬರೇ ವಾಸವಿದ್ದರಿಂದ ಆರೋಪಿ ಹೆಚ್ಚಿನ ಒಡನಾಟ ಬೆಳೆಸಿದ್ದನು. ಅಂತೆಯೇ ಇತರ ಆರೋಪಿಗಳ ಜೊತೆ ಸೇರಿ ಕೊಲೆ ಮಾಡಿ ಗುರುತು ಪತ್ತೆಯಾಗದಂತೆ ದೇಹ ಕತ್ತರಿಸಿದ. ಬಳಿಕ ಕೊಲೆಗೆ ಬಳಸಿದ್ದ ಮಚ್ಚನ್ನು ಮೇಲ್ಸೇತುವೆ ಮೇಲೆ ಬಿಸಾಡಿದ್ದರು.
ಈ ಮಾರಕಾಸ್ತ್ರಗಳನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಸದ್ಯ 10 ಮಂದಿಯ ಸಾಕ್ಷ್ಯಾಧಾರ, 164 ಹೇಳಿಕೆಗಳ ಜೊತೆ ಟೆಕ್ನಿಕಲ್ ಎವಿಡೆನ್ಸ್ ಸಂಗ್ರಹಿಸಿ 500ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಅನ್ನು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.