ಬೆಳ್ತಂಗಡಿ: ಕರಿಮಣಿ ಸರ ಕದ್ದ ಇಬ್ಬರು ಕಳ್ಳಿಯರು ಅರೆಸ್ಟ್..!
ಬೆಳ್ತಂಗಡಿ ಡಿಸೆಂಬರ್ 21: ಸರಕಾರಿ ಬಸ್ ಹತ್ತುವ ವೇಳೆ ಮಹಿಳೆಯೊಬ್ಬರ ಕರಿಮಣಿ ಸರಕಳ್ಳತನ ಮಾಡಿದ್ದ ಇಬ್ಬರು ಕಳ್ಳಿಯರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತಮಿಳುನಾಡು ತಿರುಪುರ್ ಜಲ್ಲೆಯ ಮೋಹಿನಿ ಯಾನೆ ಮಾರಿಮುತ್ತು (35) ಮತ್ತು ದಿವ್ಯಾ ಯಾನೆ ಕಾಮಾಚಿ (30) ಎಂದು ಗುರುತಿಸಲಾಗಿದೆ.
ಆರೋಪಿಗಳು ಡಿಸೆಂಬರ್ 12ರಂದು ವಾರಿಜಾ ಅವರು ಸರಕಾರಿ ಬಸ್ ಹತ್ತುವ ವೇಳೆ ಅವರು ಧರಿಸಿದ್ದ 24 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಕಳ್ಳತನ ಮಾಡಿದ್ದರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ವಾರಿಜಾ ಅವರ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದರು. ಇದೀಗ ಬೆಳ್ತಂಗಡಿ ಉಪ ನಿರೀಕ್ಷಕ ಚಂದ್ರಶೇಖರ್ ಮತ್ತು ಅವರ್ ತಂಡ ಖಚಿತ ಮಾಹಿತಿ ಮೇರೆಗೆ ತಮಿಳುನಾಡು ಮೂಲದ ಇಬ್ಬರು ಕಳ್ಳಿಯರನ್ನು ಡಿ. 20ರಂದು ಧರ್ಮಸ್ಥಳ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿದ ಕರಿಮಣಿ ಸರವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಗಳಿಬ್ಬರ ಮೇಲೆ ಈ ಹಿಂದೆ ಬೆಳ್ತಂಗಡಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿವೆ. ಇನ್ನು ಆರೋಪಿಗಳು ವಿಚಾರಣೆ ವೇಳೆ ಮೂಲ್ಕಿ ಮತ್ತು ಬೆಳ್ತಂಗಡಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆರೋಪಿಗಳನ್ನು ಡಿ. 20 ನ್ಯಾಯಾಧೀಶರ ಬಳಿ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬೆಳ್ತಂಗಡಿ – ಮರ ಕತ್ತರಿಸುವ ಕಟ್ಟಿಂಗ್ ಮೆಷಿನ್ ಕುತ್ತಿಗೆಗೆ ತಾಗಿ ವ್ಯಕ್ತಿ ಸಾವು…!!
ಬೆಳ್ತಂಗಡಿ ಡಿಸೆಂಬರ್ 20: ಮರ ಕಡಿಯುವ ವೇಳೆ ಆಯತಪ್ಪಿ ಕಟ್ಟಿಂಗ್ ಮೆಷಿನ್ ಜೊತೆ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಸಾವನಪ್ಪಿದ ಘಟನೆ ಬೆಳ್ತಂಗಡಿಯ ಸಾವ್ಯದಲ್ಲಿ ನಡೆದಿದೆ. ಮೃತರನ್ನು ಸಾವ್ಯ ಗ್ರಾಮದ ಸಾವ್ಯ ಹೊಸಮನೆ ನಿವಾಸಿ ಪ್ರಶಾಂತ್ ಪೂಜಾರಿ (46) ಎಂದು ಗುರುತಿಸಲಾಗಿದೆ.
ಈ ಘಟನೆ ಡಿಸೆಂಬರ್ 19 ರಂದು ನಡೆದಿದ್ದು, ಪ್ರಶಾಂತ್ ಕಟ್ಟಿಂಗ್ ಮೇಷಿನ್ ಜೊತೆ ಮರ ಕತ್ತರಿಸುತ್ತಿದ್ದರು, ಈ ವೇಳೆ ಆಯತಪ್ಪಿ ಅವರು ಮೆಷಿನ್ ಜೊತೆಗೆ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಕಟ್ಟಿಂಗ್ ಮೆಷಿನ್ ಚಾಲನಾ ಸ್ಥಿತಿಯಲ್ಲಿದ್ದ ಕಾರಣ ಅದು ಅವರ ಕುತ್ತಿಗೆಗೆ ತಾಗಿದೆ.ಗಂಭೀರ ಗಾಯದ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಸ್ಥಳೀಯ ಆಸ್ಪತೆಗೆ ದಾಖಲಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಸಹೋದರ ಪ್ರಮೋದ್ ಈ ಬಗ್ಗೆ ವೇಣೂರು ಠಾಣೆಯಲ್ಲಿ ದೂರು ನೀಡಿದ್ದಾರೆ.