ಬೆಳ್ತಂಗಡಿ: ಅನ್ಯಕೋಮಿನ ಜೋಡಿ ತಿರುಗಾಟ; ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು!!
ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅನ್ಯಕೋಮಿನ ಜೋಡಿ ತಿರುಗಾಡುತ್ತಿರುವುದನ್ನು ಪತ್ತೆ ಹಚ್ಚಿದ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದ ಘಟನೆ ಜ.16ರಂದು ನಡೆದಿದೆ.
ಬೆಂಗಳೂರು ಮೂಲದ, ಅಲ್ಲಿನ ಬಟ್ಟೆ ಅಂಗಡಿಯೊಂದರಲ್ಲಿ ಕಾರ್ಯನಿರ್ವಹಿಸುವ ಈ ಜೋಡಿ ಲಾಡ್ಜ್ ನಲ್ಲಿ ತಂಗಲು ಯತ್ನಿಸುತ್ತಿರುವ ಸಂದರ್ಭ ಸಂಶಯಗೊಂಡ ಸಾರ್ವಜನಿಕರು ವಿಚಾರಿಸಿದ್ದಾರೆ. ಅವರ ಸಂಶಯದ ನಡೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಯುವಕ ಹಾಗೂ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿರುವುದಾಗಿ ವರದಿಯಾಗಿದೆ.
ಠಾಣೆಯ ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳು ಕಂಡು ಬಂದರೆ ತತ್‌ಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಇಲ್ಲಿನ ಸಾರ್ವಜನಿಕರು ಹಾಗೂ ವಾಹನ ಚಾಲಕರಿಗೆ ಸಭೆ ನಡೆಸಿ ತಿಳಿಸಲಾಗಿತ್ತು. ಅದರ ಪ್ರಕಾರ ಸಾರ್ವಜನಿಕರು ತತ್‌ಕ್ಷಣ ಮಾಹಿತಿ ನೀಡಿದ್ದಾರೆ ಹಾಗೂ ಯಾವುದೇ ರೀತಿಯ ನೈತಿಕ ಪೊಲೀಸ್‌ಗಿರಿ ನಡೆದಿಲ್ಲ, ವದಂತಿಗಳಿಗೆ ಯಾರು ಕಿವಿ ಕೊಡಬಾರದೆಂದು ಧರ್ಮಸ್ಥಳ ಠಾಣೆಯ ಪಿಎಸ್‌ಐ ಅನಿಲ್ ಕುಮಾರ್ ತಿಳಿಸಿದ್ದಾರೆ.
Mangaluru ಮಾದಕ ವಸ್ತು ಸೇವನೆ: ಯುವಕನ ಸೆರೆ
ಮಂಗಳೂರು: ನಿಷೇಧಿತ ಮಾದಕ ವಸ್ತು ಸೇವಿಸಿದ್ದ ಯುವಕನನ್ನು ನಗರದ ಸೈಬರ್, ನಾರ್ಕೊಟಿಕ್ ಮತ್ತು ಆರ್ಥಿಕ ಅಪರಾಧ (ಸೆನ್) ಠಾಣೆಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ತಮಿಳುನಾಡಿನ ರಾಕೇಶ (20) ಬಂಧಿತ ಆರೋಪಿ. ಈತ ನಗರದ ನೆಲ್ಲಿಕಾಯಿ ರಸ್ತೆಯ ಬಳಿ ನಶೆಯಲ್ಲಿ ನಡೆದಾಡುತ್ತಿದ್ದ. ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.