ಭೂವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯ ಬರ್ಬರ ಕೊಲೆ
ಬೆಂಗಳೂರು ನವೆಂಬರ್ 05: ಬೆಂಗಳೂರನ ಗಣಿ ಮತ್ತು ಭೂ ವಿಜ್ಞಾನ ಇಲಾಾಖೆಯ ಮಹಿಳಾ ಅಧಿಕಾರಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಗಣಿ-ಭೂವಿಜ್ಞಾನ ಇಲಾಖೆ ಡೆಪ್ಯುಟಿ ಡೈರೆಕ್ಟರ್ ಪ್ರತಿಮಾ (37) ಎಂದು ಗುರುತಿಸಲಾಗಿದೆ. ಪ್ರತಿಮಾ ಅವರು ಪತಿಯಿಂದ ವಿಚ್ಛೇದನ ಪಡೆದು ಸುಬ್ರಹ್ಮಣ್ಯಪುರದ ದೊಡ್ಡಕಲ್ಲಸಂದ್ರದ ಕುವೆಂಪು ನಗರದಲ್ಲಿ ಒಂಟಿಯಾಗಿ ವಾಸವಾಗಿದ್ದರು. ಪತಿ ಮತ್ತು ಮಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನೆಲೆಸಿದ್ದಾರೆ.
ಪ್ರತಿಮಾ ಶನಿವಾರ ರಾತ್ರಿ 8 ಗಂಟೆಗೆ ಇಲಾಖೆಯ ವಾಹನದಲ್ಲಿ ಕಚೇರಿಯಿಂದ ಮನೆಗೆ ಬಂದಿದ್ದರು. ರಾತ್ರಿ ಅಣ್ಣ ಕರೆ ಮಾಡಿದಾಗ ಸ್ವೀಕರಿಸಿ ಮಾತನಾಡಿದ್ದರು. ಬೆಳಿಗ್ಗೆ ಅಕ್ಕಪಕ್ಕದ ಮನೆಯವರು ಮನೆಗೆ ಬಂದು ನೋಡಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಪ್ರತಿಮಾ ನೆಲೆಸಿದ್ದ ಮನೆಯಲ್ಲಿ ಯಾವುದೇ ವಸ್ತು ಕಳ್ಳತನವಾಗಿಲ್ಲ. ಮೇಲ್ನೋಟಕ್ಕೆ ಉದ್ದೇಶಪೂರ್ವಕವಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಪ್ರತಿಮಾ ಕೊಲೆ ಪ್ರಕರಣ- ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ
ಬೆಂಗಳೂರು: ಹಿರಿಯ ಗಣಿ ಭೂವಿಜ್ಞಾನ ಅಧಿಕಾರಿ ಪ್ರತಿಮಾ (Prathima Murder Case) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಅವರ ಚಾಲಕನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಕಾಂಟ್ರಾಕ್ಟ್ ಬೇಸಿಸ್ ನಲ್ಲಿ ಕಿರಣ್ ಕೆಲಸ ಮಾಡುತ್ತಿದ್ದ. ಕಳೆದ ಐದು ವರ್ಷಗಳಿಂದ ಕೆಲಸ ಮಾಡ್ತಿದ್ದ ಕಿರಣ್‍ಗೆ ಕೆಲವೊಂದು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಮಾ ನಡುವೆ ಭಿನ್ನಾಭಿಪ್ರಾಯ ಬಂದಿತ್ತು. ಹೀಗಾಗಿ ಕೆಲ ದಿನಗಳ ಹಿಂದೆಯಷ್ಟೇ ಕಿರಣ್‍ನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಪೊಲೀಸರು ಕಿರಣ್ ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಕಿರಣ್ ತಂದೆ ಸುರೇಶ್ ಸಹ ಇದೇ ಇಲಾಖೆಯಲ್ಲಿ ಚಾಲಕರಾದ್ದರು. ಸದ್ಯ ಕೃತ್ಯ ನಡೆದ ಬಳಿಕ ಕಿರಣ್ ಚಾಮರಾಜನಗರ ಕಡೆಗೆ ಎಸ್ಕೇಪ್ ಆಗಿದ್ದ. ಈ ವೇಳೆ ಚಾಮರಾಜನಗರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇತ್ತ ಪ್ರತಿಮಾ ಮೊಬೈಲ್ ವಶಕ್ಕೆ ಪಡೆದಿರುವ ಸುಬ್ರಹ್ಮಣ್ಯಪುರ ಪೊಲೀಸರು ಪರಿಶೀಲನೆಗೆ ನಡೆಸುತ್ತಿದ್ದಾರೆ. ಕೊಲೆಯಾದ ವೇಳೆ ಮನೆಯ ಬಾಗಿಲು ಬಳಿ ಪ್ರತಿಮಾ ಮೊಬೈಲ್ ಫೋನ್ ಪತ್ತೆಯಾಗಿತ್ತು. ಆದರೆ ಫೋನ್ ಲಾಕ್ ಹಿನ್ನೆಲೆಯಲ್ಲಿ ಟೆಕ್ನಿಕಲ್ ಸೆಲ್ ಗೆ ರವಾನಿಸಿ ಲಾಕ್ ತೆಗೆದು ಪರಿಶೀಲಿಸುತ್ತಿದ್ದಾರೆ. ಒಂದು ವಾರದಿಂದ ಎಷ್ಟು ಕರೆಗಳು ಬಂದಿದ್ದವು?. ಯಾರ್ಯಾರು ಕರೆ ಮಾಡಿದ್ದಾರೆ..?. ಪ್ರತಿಮಾ ಅವರೇ ಯಾರಿಗಾದರೂ ಕರೆ ಮಾಡಿ ಮಾತನಾಡಿದ್ದಾರಾ ಅಂತಾ ಪರಿಶೀಲಿಸುತ್ತಿದ್ದಾರೆ.
ಪ್ರತಿಮಾ ಮನೆ ಇರುವ ರಸ್ತೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳಿವೆ. ಆದರೆ ಕೇವಲ 3 ಸಿಸಿಟಿವಿ ಮಾತ್ರವೇ ಅಳವಡಿಕೆ ಮಾಡಲಾಗಿತ್ತು. ಸದ್ಯ ಸಿಸಿಟಿವಿ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.