ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಬಸ್
ಬಂಟ್ವಾಳ: ರಾ.ಹೆ.75 ರ ತುಂಬೆಯಲ್ಲಿ ಬಿ.ಸಿ.ರೋಡು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಚರಂಡಿಗೆ ಉರುಳಿದ ಘಟನೆ ರವಿವಾರ ಬೆಳಗ್ಗೆ ನಡೆದಿದೆ.
ಘಟನೆಯಲ್ಲಿ ಪ್ರಯಾಣಿಕರಿಂದ ಅಲ್ಪ ಸ್ವಲ್ಪ ಗಾಯಗಳಾಗಿದ್ದು, ಬೇರೆ ವಾಹನಗಳಲ್ಲಿ ಪ್ರಯಾಣ ಮುಂದುವರಿಸಿದ್ದಾರೆ. ಮಳೆಯ ಕಾರಣಕ್ಕೆ ಹೆದ್ದಾರಿ ಬದಿಯಲ್ಲಿ ಮಣ್ಣು ಸಡಿಲಗೊಂಡಿದ್ದು, ಹೀಗಾಗಿ ಚಕ್ರಗಳು ಜಾರಿ ಚರಂಡಿಗೆ ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ನಿಯಂತ್ರಣ ಕಳೆದುಕೊಂಡ ರಭಸಕ್ಕೆ ಬಸ್ಸು ಮಂಗಳೂರು ಕಡೆಗೆ ತೆರಳುತ್ತಿದ್ದರೂ, ಮತ್ತೆ ಬಿ.ಸಿ.ರೋಡು ಕಡೆಗೆ ತಿರುಗಿ ನಿಂತಿದೆ.
ಮಹಿಳೆಯರ ಕುತ್ತಿಗೆಯಿಂದ ಸರ ಅಪಹರಣ:
ಕಾಸರಗೋಡು: ಹೆಲ್ಮೆಟ್ ಧರಿಸಿ ಸ್ಕೂಟರ್ನಲ್ಲಿ ಬಂದ ಕಳ್ಳರು ಮೂವರು ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಅಪಹರಿಸಿದ ಘಟನೆ ನಡೆದಿದೆ.
ಪನಯಾಲ್ ಪೊಡಿಪಳ್ಳದಲ್ಲಿ ಜಿ.ಜಿ. ಸ್ಟೋರ್ ಅಂಗಡಿ ನಡೆಸುತ್ತಿರುವ ಎ.ಗೋಪಾಲನ್ ಅವರ ಪತ್ನಿ ಪದ್ಮಾವತಿ ಅವರ ಕತ್ತಿನಿಂದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾರೆ. ಪರಾರಿಯಾದ ಸ್ಕೂಟರ್ನ ದೃಶ್ಯ ಅಂಗಡಿ ಸಮೀಪದ ಸಿಸಿ ಟಿವಿಯಲ್ಲಿ ಪತ್ತೆಯಾಗಿದೆ. ಈ ಸ್ಕೂಟರ್ನ ನಂಬ್ರ ನಕಲಿ ಎಂಬುದಾಗಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಬಾರಾ ಮುಲ್ಲಚ್ಚೇರಿ ಆಯುರ್ವೇದ ಆಸ್ಪತ್ರೆ ಪರಿಸರದ ನೆಲ್ಲಿಯಡ್ಕ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯೋರ್ವರ ಕತ್ತಿನಿಂದ ನಕಲಿ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾನೆ. ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ನಡೆದಿದೆ. ಈ ಎಲ್ಲ ಪ್ರಕರಣಗಳಲ್ಲಿ ಒಬ್ಬನೇ ಭಾಗಿಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಟೆರೇಸ್ನಿಂದ ಬಿದ್ದು ವ್ಯಕ್ತಿ ಸಾವು
ಕುಂಬಳೆ: ಮನೆಯ ಟೆರೇಸ್ ಮೇಲಿನಿಂದ ಬಿದ್ದು ಮನೆಯೊಡೆಯ ಸಾವಿಗೀಡಾದ ಘಟನೆ ನಡೆದಿದೆ. ಪಾವೂರು ಜುಮಾ ಮಸೀದಿ ಬಳಿಯ ನಿವಾಸಿ ಮೊಹಮ್ಮದ್(64) ಸಾವಿಗೀಡಾದವರು. ಮನೆಯ ಟೆರೇಸ್ನ ಮೇಲೆ ನಿಂತಿದ್ದ ಮಳೆ ನೀರನ್ನು ತೆರವುಗೊಳಿಸಲೆಂದು ಮೊಹಮ್ಮದ್ ಟೆರೇಸ್ ಮೇಲೇರಿದ್ದರು. ಅಲ್ಲಿಂದ ಆಯ ತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
ಬಂಟ್ವಾಳ: ಬಿರುಸಿನ ಮಳೆ; ಧರೆಗುರುಳಿದ ಮರ, ವಿದ್ಯುತ್ ಕಂಬ
ಬಂಟ್ವಾಳ: ಬಿರುಸಿನ ಮಳೆಗೆ ಮರವೊಂದು ರಸ್ತೆಗೆ ಉರುಳಿ ಬಿದ್ದ ಘಟನೆ ತಾಲೂಕಿನ ನರಿಕೊಂಬು ಗ್ರಾಮದ ದಿಂಡಿಕೆರೆ ಎಂಬಲ್ಲಿ ಜೂನ 11ರ ರವಿವಾರ ಬೆಳಿಗ್ಗೆ ಸುಮಾರು 6 ಗಂಟೆಗೆ ಸಂಭವಿಸಿದೆ.
ಮರದೊಂದಿಗೆ ವಿದ್ಯುತ್ ಕಂಬ ಕೂಡಾ ಬಿದ್ದಿರುವುದರಿಂದ ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಕೂಡಲೇ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ, ಮರ ಹಾಗೂ ಕಂಬ ತೆರವು ಮಾಡುವ ಕಾರ್ಯ ಕೈಗೊಳ್ಳಲಾಯಿತು.