ಬಂಟ್ವಾಳ : ಮೊಬೈಲ್ ಆ್ಯಪ್ ನಂಬಿ ಸುಮಾರು 21 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ ಶರಣು...!
ಬಂಟ್ವಾಳ ಡಿಸೆಂಬರ್ 24 : ಹಣ ಡಬ್ಬಲ್ ಆಗುತ್ತದೆ ಎಂದು ಆ್ಯಪ್ ಒಂದರಲ್ಲಿ ಹಣ ಹೂಡಿಕೆ ಮಾಡಿ ಸುಮಾರು 21 ಲಕ್ಷ ಹಣ ಕಳೆದುಕೊಂಡ ಮಹಿಳೆಯೊಬ್ಬರು ಸಂಗಬೆಟ್ಟು ಸಮೀಪದ ಪುಚ್ಚಮೊಗರು ಎಂಬಲ್ಲಿ ಫಲ್ಗುಣಿ ನದಿಗೆ ಹಾರಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರನ್ನು ಕುಕ್ಕಿಪಾಡಿ ಗ್ರಾಮದ ಏರೋಡಿಯ ಜಾನ್ ಸಂತೋಷ್ ಡಿಸೋಜ ಅವರ ಪತ್ನಿ ವೀಟಾ ಮರಿನಾ ಡಿಸೋಜ (32) ಎಂದು ಗುರುತಿಸಲಾಗಿದೆ. ವೀಟಾ ಮರಿನಾ ಅವರು ಈ ಹಿಂದೆ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ವೀಟಾ ಬಳಿಕ ಹುದ್ದೆ ತೊರೆದು ವಿಮಾ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದರು. ಈ ನಡುವೆ ಯಾವುದೇ ಮೊಬೈಲ್ ಆ್ಯಪ್ ನಂಬಿ ಸುಮಾರು 21 ಲಕ್ಷಕ್ಕೂ ಅಧಿಕ ಹಣ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದರು. ಈ ಬಗ್ಗೆ ಅವರು ಪೊಲೀಸರಿಗೂ ದೂರು ನೀಡಿದ್ದರು.
ಈ ನಡುವೆ ವೀಟಾ ಅವರು ಶನಿವಾರ ರಾತ್ರಿ 9 ಗಂಟೆಗೆ ಮನೆಯಿಂದ ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ಬಳಿಕ ನಾಪತ್ತೆಯಾಗಿದ್ದರು. ಆ ಬಳಿಕ ವಿಷಯ ತಿಳಿದು ಸ್ಥಳೀಯರು ಹುಡುಕಾಟ ನಡೆಸಿದಾಗ ಫಲ್ಗುಣಿ ಸೇತುವೆಯಲ್ಲಿ ಇವರ ದ್ವಿಚಕ್ರ ವಾಹನ ಮಾತ್ರ ಪತ್ತೆಯಾಗಿತ್ತು. ಅಗ್ನಿಶಾಮಕದಳದ ಸಿಬ್ಬಂದಿ ನದಿಯಲ್ಲಿ ಹುಡುಕಾಡಿದ್ದರು.
ಬಹುಗ್ರಾಮ ಕುಡಿಯುವ ನೀರು ಪೂರೈಕೆಗಾಗಿ ನಿರ್ಮಿಸಿರುವ ಅಣೆಕಟ್ಟೆ ಬಳಿ ಭಾನುವಾರ ಮೃತದೇಹ ಪತ್ತೆಯಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣೆ ಮಹಿಳಾ ಎಸ್ ಐ ಭಾರತಿ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೇ ಭೇಟಿ ನೀಡಿ, ಮಹಜರು ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದೆ.
ಬಂಟ್ವಾಳ: ಮಹಿಳೆಯ ಕುತ್ತಿಗೆಯ ಚಿನ್ನದ ಸರ ಕಸಿದ ಕಳ್ಳ ಅಶೋಕ , ಸಚಿನ್ ಸೆರೆ…!!
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಿ.ಸಿ.ರೋಡ್ ನ ಅಜ್ಜಿಬೆಟ್ಟು ಶಾಲಾ ಮೈದಾನದ ಬಳಿಯ ಅಂಗಡಿಯೊಂದರಲ್ಲಿದ್ದ ಮಹಿಳೆಯೋರ್ವರ ಕುತ್ತಿಗೆಯಿಂದ ಚಿನ್ನದ ಸರ ಕಸಿದ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಬೈಕಂಪಾಡಿಯ ಅಶೋಕ, ಮಂಗಳೂರು ದಂಬೇಲ್ ನಿವಾಸಿ ಸಚಿನ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಒಂದೂವರೆ ಪವನಿನ ಚಿನ್ನದ ಸರ ಮತ್ತು ಬೈಕನ್ನು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿ.14 ರಂದು ಬಿ.ಸಿ.ರೋಡಿನ ಅಜ್ಜಿಬೆಟ್ಟು ಶಾಲಾ ಮೈದಾನದ ಬಳಿರುವ ಅಂಗಡಿಯೊಂದಕ್ಕೆ ಬಂದ ಆರೋಪಿಗಳು ಅಂಗಡಿ ಮಾಲಕಿ ಸರೋಜಿನಿ ಅವರ ಕುತ್ತಿಗೆಯಿಂದ ಚೈನ್ ಎಗರಿಸಿ ಪರಾರಿಯಾಗಿದ್ದರು. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್ ಅವರ ನಿರ್ದೇಶನದಂತೆ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ಅವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಗಳಾದ ರಾಮಕೃಷ್ಣ, ಕಲೈಮಾರ್ ಮತ್ತವರ ಸಿಬ್ಬಂದಿ ಇರ್ಷಾದ್, ರಾಜೇಶ್, ಗಣೇಶ್, ಮೋಹನ, ವಿವೇಕ್ ಅವರು ಬೆಂಜನಪದವಿನ ಕರಾವಳಿ ಸೈಟ್ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ಒಳಪಡಿಸಲಾಗಿದೆ. ಈ ಕೃತ್ಯಕ್ಕೆ ಸಂಬಂಧಿಸಿ ಅರೋಪಿಗಳ ಯಾವುದೇ ಸುಳಿವು ಇರಲಿಲ್ಲ, ಘಟನಾ ಸ್ಥಳದಲ್ಲಿ ಸಿ.ಸಿ ಕ್ಯಾಮರ ಕೂಡ ಇರದಿದ್ದು, ವಾರದೊಳಗೆ ಈ ಪ್ರಕರಣದ ಆರೋಪಿಗಳನ್ನು ಬಂಧಿಸಿದ ನಗರ ಠಾಣಾ ನಿರೀಕ್ಷಕ ಆನಂತ ಪದ್ಮನಾಭ ಹಾಗೂ ತಂಡಕ್ಕೆ ಪೊಲೀಸ್ ಅಧೀಕ್ಷಕರು ನಗದು ಬಹುಮಾನ ಘೋಷಿಸಿದ್ದಾರೆ.