ಬಂಟ್ವಾಳ : ತಾಯಿ ಮಗಳಿಗೆ ಚಾಕು ತೋರಿಸಿ ದರೋಡೆ ಪ್ರಕರಣ ; ಏಳು ಮಂದಿ ಅರೆಸ್ಟ್..!
ಬಂಟ್ವಾಳ ಜನವರಿ 23 : ಬಂಟ್ವಾಳದ ವಗ್ಗದಲ್ಲಿ ತಾಯಿ ಮತ್ತು ಮಗಳಿಗೆ ಚಾಕು ತೋರಿಸಿ ನಗ ನಗದು ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಬಂಟ್ವಾಳ ಪೊಲೀಸರ ಬಂಧಿಸಿ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತರನ್ನು ಉಡುಪಿ ಜಿಲ್ಲೆಯ ಕಾರ್ಕಳದ ಮಲ್ಲಾರು ನಿವಾಸಿ ಗಣೇಶ್ ನಾಯ್ಕ್, ದಿನೇಶ್ ನಾಯ್ಕ್, ಮಾಳ ಗ್ರಾಮದ ಇಂದಿರಾನಗರ ನಿವಾಸಿ ಸಾಗರ್ ಶೆಟ್ಟಿ, ಮಂಗಳೂರು ಐಕಳ ಗ್ರಾಮದ ರಾಕೇಶ್ ಎಲ್ ಪಿಂಟೋ, ಕಡಬದ ಕೆಲೆಂಬೇರಿ ನಿವಾಸಿಗಳಾದ ಎಂ.ಸೀತಾರಾಮ, ಸುದೀರ್ ಹಾಗೂ ಚಿಕ್ಕಮಗಳೂರು ನಿವಾಸಿ ಹನೀಫ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ದರೋಡೆಗೈದ 54 ಗ್ರಾಂ ಚಿನ್ನಾಭರಣ ಹಾಗೂ ಇನ್ನೋವಾ ಮತ್ತು ಇಂಡಿಕಾ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜನವರಿ 11ರಂದು ಬೆಳಗ್ಗೆ ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಅಂಚಿಕಟ್ಟೆ ಮೇನಾಡು ನಿವಾಸಿ ಮರೀಟಾ ಸಿಂಥಿಯಾ ಪಿಂಟೋ ಎಂಬವರ ಮನೆಗೆ ಬಂದ ಮುಸುಕುದಾರಿಗಳು ಮನೆಯಲ್ಲಿದ್ದ ತಾಯಿ ಪ್ಲೋರಿನಾ ಪಿಂಟೊ ಹಾಗೂ ಮಗಳು ಮರಿಟಾ ಪಿಂಟೋ ಅವರಿಗೆ ಚೂರಿ ತೋರಿಸಿ ಗೊದ್ರೇಜ್ ಕೀ ನೀಡುವಂತೆ ಹೆದರಿಸಿದ್ದು, ನೀಡದಿದ್ದರೆ ಕೊಲ್ಲುವ ಬೆದರಿಕೆ ಹಾಕಿ ಕಪಾಟಿನ ಕೀ ಪಡೆದು ಚಿನ್ನ ಹಾಗೂ ನಗದು ಹಣವನ್ನು ದೋಚಿ ಪರಾರಿಯಾಗಿದ್ದರು. ಪೊಲೀಸರ ವಿಶೇಷ ಪ್ರಯತ್ನದ ಮೂಲಕ ಆರೋಪಿಗಳ ಪತ್ತೆ ಕಾರ್ಯವನ್ನು ಮೆಚ್ಚಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಹುಮಾನವನ್ನು ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬಂಟ್ವಾಳ – ಆಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ ಹಿನ್ನಲೆ ನೇತ್ರಾವತಿ ನದಿ ಮಧ್ಯೆ ಸತ್ಯನಾರಾಯಣ ಪೂಜೆ
ಬಂಟ್ವಾಳ : ಬಂಟ್ವಾಳದಲ್ಲಿ ಜಿಲ್ಲೆಯ ಜೀವನದಿ ನೇತ್ರಾವತಿ ನದಿ ಮಧ್ಯೆ ಆಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆಯ ಪ್ರಯುಕ್ತ ಮುನ್ನಾದಿನ ರಾತ್ರಿ ಶ್ರೀ ಸತ್ಯನಾರಾಯಣ ಪೂಜೆಯನ್ನು ರಾಮಭಕ್ತ ಪುರಸಭೆ ಮಾಜಿ ಸದಸ್ಯ ಎ.ಗೋವಿಂದ ಪ್ರಭು ನೇತೃತ್ವದಲ್ಲಿ ಭಾನುವಾರ ರಾತ್ರಿ ನಡೆಯಿತು. ಪುರಸಭೆಯ ಹಿರಿಯ ಸದಸ್ಯ ಹಾಗೂ ಅಯೋಧ್ಯೆ ಕರಸೇವೆಯಲ್ಲಿ ಭಾಗಿಯಾಗಿದ್ದ ಗೋವಿಂದ ಪ್ರಭು,ನೇತ್ರಾವತಿ ನದಿಯ ನೀರಿನ ಮಧ್ಯೆ ಶ್ರೀ ಸತ್ಯನಾರಾಯಣ ಪೂಜೆ ನಡೆಸಿದ್ದು ವಿಶೇಷ.
ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಬಳಿಯ ನೇತ್ರಾವತಿ ನದಿಯಲ್ಲಿ ಜನವರಿ 21 ರಂದು ರಾತ್ರಿ ವೇಳೆ ಈ ಪೂಜಾ ವಿಧಿಗಳು ನಡೆದವು. ನದಿಯ ನೀರಿನ ಮಧ್ಯೆ ತೆಪ್ಪದ ಮಾದರಿಯನ್ನು ರಚಿಸಿ ದೀಪಾರಾಧನೆಯ ಬೆಳಕಿನಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತು. ಪೂಜೆ ನಡೆಯುವ ಪಕ್ಕದಲ್ಲೇ ನದಿಯಲ್ಲಿ ಶ್ರೀರಾಮನ ವಿಗ್ರಹ, ಆಂಜನೇಯನ ವಿಗ್ರಹಗಳು ಗಮನ ಸೆಳೆದವು.
ನದಿಯ ಸುತ್ತ ಹಣತೆಯ ದೀಪದಿಂದ ಕಂಗೊಳಿಸುವ ದೃಶ್ಯ ಭಕ್ತರಿಗೆ ಮುದನೀಡಿತ್ತು. ನೇತ್ರಾವತಿ ನದಿಯ ಮಧ್ಯ ಭಾಗದಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿದ್ದು ಪ್ರಥಮವಾಗಿದ್ದು, ಭಕ್ತರಿಗೆ ವಿಶೇಷವಾದ ಕಾರ್ಯಕ್ರಮವಾಗಿ ಮೂಡಿ ಬಂತು. ಸತ್ಯನಾರಾಯಣ ಪೂಜೆಯ ಬಳಿಕ ಭಕ್ತರಿಗೆ ಫಲಹಾರದ ವ್ಯವಸ್ಥೆ ಮಾಡಲಾಗಿತ್ತು.