ವಿರಾಟ್ ಕೊಹ್ಲಿಯ ದಾಖಲೆ ಮುರಿದ ಬಾಬರ್ ಆಝಂ!
ಏಷ್ಯಾಕಪ್ನ ಮೊದಲ ಪಂದ್ಯದಲ್ಲೇ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಹೊಸ ಇತಿಹಾಸ ನಿರ್ಮಿಸಿದ್ದಾರೆ. ನೇಪಾಳ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡವು ಮೊದಲು ಬ್ಯಾಟ್ ಮಾಡುವ ನಿರ್ಧಾರ ಮಾಡಿತು.
ಅದರಂತೆ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 25 ರನ್ ಆಗುವಷ್ಟರಲ್ಲಿ ಇಬ್ಬರು ಆರಂಭಿಕರು ಪೆವಿಲಿಯನ್ ಕಡೆ ಮುಖ ಮಾಡಿದ್ದರು. ಈ ಹಂತದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಾಬರ್ ಆಝಂ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು.
ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ನೊಂದಿಗೆ ರನ್ ಕಲೆಹಾಕಿದ ಬಾಬರ್ ಅರ್ಧಶತಕದ ಬಳಿಕ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ 109 ಎಸೆತಗಳಲ್ಲಿ ಶತಕ ಪೂರೈಸಿದರು. ಭರ್ಜರಿ ಸೆಂಚುರಿ ಬೆನ್ನಲ್ಲೇ ಬಿರುಸಿನ ಆಟಕ್ಕೆ ಮುಂದಾದ ಬಾಬರ್ ಆಝಂ ನೇಪಾಳ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ 22 ಎಸೆತಗಳಲ್ಲಿ 50 ರನ್ಗಳು ಮೂಡಿಬಂತು. ಅಂತಿಮವಾಗಿ 131 ಎಸೆತಗಳನ್ನು ಎದುರಿಸಿದ ಬಾಬರ್ 4 ಭರ್ಜರಿ ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ 151 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಈ 151 ರನ್ಗಳೊಂದಿಗೆ ಏಷ್ಯಾಕಪ್ ಇತಿಹಾಸದಲ್ಲೇ ಅತ್ಯಧಿಕ ರನ್ ಬಾರಿಸಿದ ನಾಯಕ ಎಂಬ ದಾಖಲೆ ಬಾಬರ್ ಆಝಂ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು. 2014 ರ ಏಷ್ಯಾಕಪ್ನಲ್ಲಿ ಬಾಂಗ್ಲಾದೇಶ್ ವಿರುದ್ಧ ಅಂದಿನ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 136 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಬಾಬರ್ ಆಝಂ ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಅಷ್ಟೇ ಅಲ್ಲದೆ ಏಷ್ಯಾಕಪ್ ಇತಿಹಾಸದಲ್ಲೇ 150+ ಸ್ಕೋರ್ಗಳಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೂ ಬಾಬರ್ ಆಝಂ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ಒಂದು ಭರ್ಜರಿ ಶತಕದೊಂದಿಗೆ ಬಾಬರ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿರುವುದು ವಿಶೇಷ.