ಕಂಬಳಕ್ಕೆ ಬರಲಿದೆ ಆಟೊಮ್ಯಾಟಿಕ್ ಟೈಮ್ ಗೇಟ್ ಸಿಸ್ಟಂ ಮತ್ತು ಫೋಟೊ ಫಿನಿಷ್ ಸಿಸ್ಟಂ ; ಇಲ್ಲಿದೆ ವಿವರ
ಲವು ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ನಡೆದಿದ್ದ ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆ ಕಂಬಳ (Kambala) ರಾಜ್ಯದ ಗಮನ ಸೆಳೆದಿತ್ತು. ಆ ಮೂಲಕ ಕರಾವಳಿಯಾಚೆಗೂ ವ್ಯಾಪ್ತಿ ವಿಸ್ತರಿಸಿತ್ತು. ಇದೀಗ ಸಾಂಪ್ರದಾಯಿಕ ಕೋಣಗಳ ಓಟದ ಕ್ರೀಡೆಯಲ್ಲಿ ತಂತ್ರಜ್ಞಾನವನ್ನೂ ಸಮರ್ಥವಾಗಿ ಬಳಸಿಕೊಳ್ಳಲು ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಮುಂದಾಗಿದೆ. ಕುದುರೆ ರೇಸ್ಗಳಲ್ಲಿ ಬಳಸುವ ರೀತಿಯಲ್ಲಿ ಆಟೊಮ್ಯಾಟಿಕ್ ಟೈಮ್ ಗೇಟ್ ಸಿಸ್ಟಂ (automatic time gate system) ಹಾಗೂ ಫೋಟೊ ಫಿನಿಷ್ ಸಿಸ್ಟಂ ಅನ್ನು ಕಂಬಳದಲ್ಲೂ ಅಳವಡಿಸುವುದಾಗಿ ಸಮಿತಿ ತಿಳಿಸಿದೆ.
ಅಯಿಕಳ ಎಂಬಲ್ಲಿ ಫೆಬ್ರವರಿ 3ರಂದು ನಡೆಯಲಿರುವ ಕಾಂತಬಾರೆ-ಬೂದುಬಾರೆ ಕಂಬಳದಲ್ಲಿ ಪ್ರಾಯೋಗಿಕವಾಗಿ ತಂತ್ರಜ್ಞಾನವನ್ನು ಅಳವಡಿಸಲಾಗುವುದು. ಇನ್ನೋವೇಷನ್ ಬಿಯಾಂಡ್ ಇಮೇಜಿನೇಷನ್ ನೆಕ್ಷ್ಟ್ ಜನರೇಷನ್ ಪ್ರೈವೇಟ್ ಲಿಮಿಟೆಡ್ನ ರತ್ನಾಕರ್ ನಾಯಕ್ ಅವರು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಾಫ್ಟ್ವೇರ್ ಅಭಿವೃದ್ಧಿಪಡಿಸಲು ಅದಾನಿ ಫೌಂಡೇಷನ್ನಿಂದ ಸಾಫ್ಟ್ವೇರ್ ಕಂಪನಿಗೆ 10 ಲಕ್ಷ ರೂಪಾಯಿ ಅನುದಾನ ದೊರೆತಿದೆ ಎಂದು ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಾಪು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಕಂಬಳವನ್ನು ಸುಗಮವಾಗಿ ಮತ್ತು ಕಡಿಮೆ ಸಮಯದಲ್ಲಿ ಮುಗಿಸುವ ಉದ್ದೇಶದಿಂದ ತಂತ್ರಜ್ಞಾನದ ಬಳಕೆಗೆ ಮೊರೆಹೋಗಲಾಗುತ್ತಿದೆ. ತಂತ್ರಜ್ಞಾನದ ಸಹಾಯದೊಂದಿಗೆ 24 ಗಂಟೆ ಅವಧಿಯ ಒಳಗೆ ಕಂಬಳ ಕ್ರೀಡಾಕೂಟ ಮುಗಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಂಬಳದಲ್ಲಿ ಸುಮಾರು 250 ಜೋಡಿ ಕೋಣಗಳು ಭಾಗವಹಿಸುವ ಮೂಲಕ ಕ್ರೀಡೆಯು ಇನ್ನಷ್ಟು ಜನಪ್ರಿಯತೆಯನ್ನು ಗಳಿಸುತ್ತಿದೆ. ಪ್ರತಿ ಕಂಬಳ ಕಾರ್ಯಕ್ರಮಕ್ಕೆ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚುತ್ತಿದೆ ಮತ್ತು ಆದ್ದರಿಂದ ತಂತ್ರಜ್ಞಾನವನ್ನು ಪರಿಚಯಿಸುವ ಅವಶ್ಯಕತೆಯಿದೆ. ಹೊಸ ವ್ಯವಸ್ಥೆಯು ಕಂಬಳದ ಪ್ರಕ್ರಿಯೆಯಲ್ಲಿನ ವಿಳಂಬಗಳನ್ನು ನಿವಾರಿಸುತ್ತದೆ. ಹೊಸ ವ್ಯವಸ್ಥೆಯಲ್ಲಿ, ಕೋಣ ಹಿಡಿಯುವವರಿಗೆ ಓಟವನ್ನು ಪ್ರಾರಂಭಿಸಲು 5 ಅಥವಾ 10 ನಿಮಿಷಗಳು ಸಿಗುತ್ತವೆ. ನಿರ್ದಿಷ್ಟ ಸಮಯದೊಳಗೆ ಅವರು ಓಟವನ್ನು ಪ್ರಾರಂಭಿಸಲು ವಿಫಲರಾದರೆ, ರೆಫರಿ ಅವರಿಗೆ ಮತ್ತೊಂದು ಅವಕಾಶ ಅಥವಾ ಅನರ್ಹತೆಯನ್ನು ನೀಡುವ ಬಗ್ಗೆ ಕರೆ ತೆಗೆದುಕೊಳ್ಳಲಿದ್ದಾರೆ. ಹೊಸ ಸಿಸ್ಟಂ ಲೈಟ್‌ಗಳು ಟ್ರಾಫಿಕ್ ಲೈಟ್‌ಗಳಂತೆಯೇ (ಕೆಂಪು, ಹಳದಿ ಮತ್ತು ಹಸಿರು) ಹ್ಯಾಂಡ್ಲರ್‌ಗಳು / ಜಾಕಿಗಳನ್ನು ಆಟದ ಪ್ರಾರಂಭದ ಬಗ್ಗೆ ಎಚ್ಚರಿಸಲಿವೆ. ಪ್ರತಿ ರೇಸಿಂಗ್ ಟ್ರ್ಯಾಕ್ ಎರಡು ಸಸ್ಪೆನ್ಷನ್ ಗೇಟ್‌ಗಳನ್ನು ಹೊಂದಿರುತ್ತವೆ ಮತ್ತು ಮೇಲ್ಮುಖವಾಗಿ ತೆರೆಯಲಿವೆ ಎಂದು ಅವರು ಹೇಳಿದ್ದಾರೆ.
ಅದಾನಿ ಫೌಂಡೇಷನ್ ಅನುದಾನ
ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅವರು 10 ಲಕ್ಷ ರೂ. ಚೆಕ್ ಅನ್ನು ಕಂಬಳ ಸಮಿತಿ ಅಧ್ಯಕ್ಷರಿಗೆ ಹಸ್ತಾಂತರಿಸಿದ್ದಾರೆ. ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಕ್ರೀಡೆಯನ್ನು ಪರಿಚಯಿಸಲು ಅಕಾಡೆಮಿಯನ್ನು ಸ್ಥಾಪಿಸುವ ಬಗ್ಗೆಯೂ ಸಮಿತಿ ಚಿಂತಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಕಂಬಳ ಭವನ ಸ್ಥಾಪಿಸುವಂತೆ ಸಮಿತಿ ಈಗಾಗಲೇ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದೆ. ಈ ತಂತ್ರಜ್ಞಾನವನ್ನು ಮತ್ತಷ್ಟು ಉನ್ನತೀಕರಿಸುವ ವಿಶ್ವಾಸ ನಮಗಿದೆ ಎಂದು ಶೆಟ್ಟಿ ಹೇಳಿದ್ದಾರೆ